ವಿನೋದ್ ಪ್ರಭಾಕರ್ ಅಭಿನಯದ “ರಗಡ್” ಸಿನಿಮಾ ನಿರ್ಮಾಪಕರಾದ ಅರುಣ್ ಕುಮಾರ್ ಅವರ ನಿರ್ಮಾಣದ ಹಾಗೂ ರಂಜಿತ್ ನಿರ್ದೇಶನದಲ್ಲಿ ಆದಿತ್ಯ ಹಾಗೂ ಅಂಕಿತ ಜಯರಾಂ ನಾಯಕ/ ನಾಯಕಿಯಾಗಿ ನಟಿಸಿರುವ ‘ಕಾಗದ’ ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ಬಿಜೆಪಿ ಮುಖಂಡರಾದ ರಾಘವೇಂದ್ರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
“ಕಾಗದ”, 2005ರಲ್ಲಿ ನಡೆದ ಪ್ರೇಮಕಥೆ. ಯುವಜನತೆಯ ಕೈಯಲ್ಲಿ ಇನ್ನೂ ಮೊಬೈಲ್ ಬಂದಿರದ, “ಕಾಗದ” ದಲ್ಲೇ ಪ್ರೀತಿ ವಿನಿಮಯವಾಗುತ್ತಿದ್ದ ಕಾಲಘಟ್ಟದ ಕಥೆಯೂ ಹೌದು. ಪರಸ್ಪರ ದ್ವೇಷಿಸುವ ಎರಡು ಹಳ್ಳಿಗಳ ನಡುವೆ ಅರಳಿದ ಪ್ರೇಮಕಥೆ ಕೂಡ. ಇಂತಹ ಹಲವು ವಿಶೇಷಗಳ “ಕಾಗದ” ಚಿತ್ರ , ಎಲ್ಲರ ಸಹಕಾರದಿಂದ ಉತ್ತಮವಾಗಿ ಮೂಡಿಬಂದಿದೆ. ಟ್ರೇಲರ್ ಗೆ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರ ಜುಲೈ 5 ರಂದು ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದ ನಿರ್ದೇಶಕ ರಂಜಿತ್, “ಆಪಲ್ ಕೇಕ್” ಚಿತ್ರದ ನಂತರ ಇದು ನನ್ನ ಎರಡನೇ ನಿರ್ದೇಶನದ ಚಿತ್ರ ಎಂದರು.
ನನಗೆ ಮೊದಲಿನಿಂದಲೂ ಹಿಂದು – ಮುಸ್ಲಿಂ ಲವ್ ಸ್ಟೋರಿ ಸಿನಿಮಾ ಮಾಡುವ ಆಸೆಯಿತ್ತು. ಆದರೆ ನನ್ನ ಮನಮುಟ್ಟುವ ಹಾಗೆ ಯಾರು ಕಥೆ ಹೇಳುತ್ತಿರಲಿಲ್ಲ. ನನ್ನನ್ನು ಒಪ್ಪಿಸುವಲ್ಲಿ ರಂಜಿತ್ ಯಶಸ್ವಿಯಾದರು. ನಾವು ಈ ಚಿತ್ರದಲ್ಲಿ ಯಾವುದೇ ಧರ್ಮದ ಭಾವನೆಗಳಿಗ ಧಕ್ಕೆ ತರುವ ಸನ್ನಿವೇಶಗಳನ್ನು ತೋರಿಸಿಲ್ಲ. ಎಲ್ಲಕ್ಕಿಂತ ಮನುಷ್ಯತ್ವ ಮುಖ್ಯ ಎಂಬ ಸಂದೇಶ ತಿಳಿಸಿದ್ದೇವೆ. ನನ್ನ ಮಗ ಆದಿತ್ಯ ಈ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾನೆ. “ರಗಡ್” ಚಿತ್ರದ ನಂತರ ಈ ಚಿತ್ರ ನಿರ್ಮಾಣ ಮಾಡಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ ಅರುಣ್ ಕುಮಾರ್ ತಿಳಿಸಿದರು.
ನಮ್ಮ ಮನೆಯ ಕೆಳಗಡೆ ಆಕ್ಟಿಂಗ್ ಸ್ಕೂಲ್ ಇತ್ತು. ಅಲ್ಲಿ ಕಲಿಯಲು ಬರುತ್ತಿದ್ದವರನ್ನು ನೋಡಿ ನನಗೂ ನಟಿಸುವ ಆಸೆಯಾಯಿತು. ನಟನೆ ಕಲಿತು, ಕಿರುಚಿತ್ರ ಹಾಗೂ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ನನ್ನ ಆಸೆ ಪೂರೈಸಿದ ಅಪ್ಪನಿಗೆ ಧನ್ಯವಾದ ಎಂದರು ನಾಯಕ ಆದಿತ್ಯ.
ಬಾಲನಟಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ನನಗೆ ತಾವೆಲ್ಲರೂ ನೀಡಿರುವ ಪ್ರೋತ್ಸಾಹಕ್ಕೆ ಧನ್ಯವಾದ. ನಾಯಕಿಯಾಗಿ ಇದು ಮೊದಲ ಚಿತ್ರ. “ಕಾಗದ” ಚಿತ್ರದಲ್ಲಿ ಬೋಲ್ಡ್ ಹುಡುಗಿಯ ಪಾತ್ರ ನನ್ನದು ಎನ್ನುತ್ತಾರೆ ನಾಯಕಿ ಅಂಕಿತ ಜಯರಾಂ.
ಚಿತ್ರದಲ್ಲಿ ನಟಿಸಿರುವ ಶಿವಮಂಜು, ಗೌತಮ್ ತಮ್ಮ ಪಾತ್ರದ ಬಗ್ಗೆ ಹೇಳಿದರು. ಸಂಗೀತದ ಬಗ್ಗೆ ಪ್ರದೀಪ್ ವರ್ಮ, ಛಾಯಾಗ್ರಹಣದ ಕುರಿತು ವೀನಸ್ ನಾಗರಾಜ ಮೂರ್ತಿ ಹಾಗೂ ವರ್ಣಾಲಂಕಾರದ ಬಗ್ಗೆ ಮಣಿ ಮಾಹಿತಿ ನೀಡಿದರು.
ಈ ಚಿತ್ರದ ವಿಶೇಷ ಪಾತ್ರದಲ್ಲಿ ನೇಹಾ ಪಾಟೀಲ್ ಕಾಣಿಸಿಕೊಂಡಿದ್ದಾರೆ. ಬಲ ರಾಜವಾಡಿ, ನೀನಾಸಂ ಅಶ್ವಥ್, ಮಠ ಕೊಪ್ಪಳ, ಶಿವಮಂಜು ಮುಂತಾದವರು ತಾರಾಬಳಗದಲ್ಲಿದ್ದಾರೆ.
“ಕಾಗದ” ಟ್ರೇಲರ್ ವೀಕ್ಷಿಸಿದ ಚಂದನವನದ ತಾರೆಯರಾದ ಧ್ರುವ ಸರ್ಜಾ, ರಮೇಶ್ ಅರವಿಂದ್, ಅನು ಪ್ರಭಾಕರ್ ಹಾಗೂ ನಿರ್ದೇಶಕ ಎ.ಪಿ.ಅರ್ಜುನ್ ಮೆಚ್ಚುಗೆ ಸೂಚಿಸಿದ್ದಾರೆ. ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಜಂಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಲಭ್ಯವಿದೆ.
No Comment! Be the first one.