ಸಿನಿಮಾವೊಂದು ಹೀಗೆ ಶುರುವಾಗಬೇಕು, ಮಧ್ಯಂತರ, ಪ್ರೀ ಕ್ಲೈಮ್ಯಾಕ್ಸ್, ಅಂತ್ಯ… ನಡುವೆ ನಾಲ್ಕು ಫೈಟ್ಸು, ಅಲ್ಲಲ್ಲಿ ಹಾಡುಗಳು, ಒಂದಿಷ್ಟು ಟ್ರ್ಯಾಕ್ ಕಾಮಿಡಿ… ಹೀರೋಯಿನ್ನು, ಕಾಮಿಡಿ ರೋಲು, ಅಪ್ಪ-ಅಮ್ಮನ ಕ್ಯಾರೆಕ್ಟರುಗಳು ಇವೆಲ್ಲಾ ಇದ್ದರೆ ಪರಿಪೂರ್ಣವಾದ ‘ಕಮರ್ಷಿಯಲ್ ಸಿನಿಮಾ ಎನ್ನುವ ಮೂಢ ನಂಬಿಕೆಯಿದೆ. ಇಡೀ ಭಾರತೀಯ ಸಿನಿಮಾರಂಗವನ್ನು ಯಾವತ್ತಿನಿಂದಲೂ ಆವರಿಸಿಕೊಂಡಿರುವ ತಪ್ಪು ಕಲ್ಪನೆ ಇದು. ಒಬ್ಬ ಸ್ಟಾರ್ ನಟನ ಸಿನಿಮಾ ಅಂದಮೇಲೆ ಈ ಸಿದ್ಧ ಸೂತ್ರಗಳಿಗೆ ಬದ್ಧವಾಗಿ ಸಿನಿಮಾ ಕಟ್ಟುವುದು ಸಂಪ್ರದಾಯ. ಆದರೆ ಏಕಾಏಕಿ ಅದನ್ನು ಬ್ರೇಕ್ ಮಾಡಿ, ಎಲ್ಲರನ್ನೂ ಅಚ್ಛರಿಗೀಡುಮಾಡಿರುವ ಸಿನಿಮಾ ಕೈದಿ!
ನಟ ಸೂರ್ಯನ ತಮ್ಮ ಕಾರ್ತಿ ನಟನೆಯ ಸಿನಿಮಾವಿದು. ಮೇಲೆ ತಿಳಿಸಿದ ಕಮರ್ಷಿಯಲ್ ಫಾರ್ಮುಲಾಗೆ ತದ್ವಿರುದ್ಧವಾಗಿ ಸಿನಿಮಾ ರೂಪಿಸಿದ್ದಾರೆ. ಇದು ಪಕ್ಕಾ ಥ್ರಿಲ್ಲರ್ ಸಬ್ಜೆಕ್ಟಿನ ಸಿನಿಮಾ. ಒಂದು ರೆಸಾರ್ಟಿನಂಥಾ ಜಾಗ. ಅಲ್ಲಿ ಪೊಲೀಸ್ ಇಲಾಖೆಯ ಹಿರಿ, ಕಿರಿ ಅಧಿಕಾರಿಗಳೆಲ್ಲಾ ಸೇರಿದ್ದಾರೆ. ಎಲ್ಲರೂ ಸೇರಿ ಗುಂಡು ಪಾರ್ಟಿ ಮಾಡುತ್ತಾರೆ. ನಶೆ ಗಂಟಲಿಗಿಳಿಯುತ್ತಿದ್ದಂತೇ ಒಬ್ಬೊಬ್ಬರೇ ತೊಪತೊಪನೆ ನೆಲಕ್ಕುರುಳುತ್ತಾರೆ. ಚೂರು ತಡವಾಗಿ ಬರುವ ಒಬ್ಬ ಅಧಿಕಾರಿಗೆ ಇಲ್ಲಿ ಎಲ್ಲವೂ ಸರಿಯಿಲ್ಲ, ಏನೋ ಯಡವಟ್ಟಾಗಿದೆಯೆನ್ನುವ ಸೂಚನೆ ಸಿಗುತ್ತದೆ. ಹೇಳಿ ಕೇಳಿ ಅದು ದೊಡ್ಡ ಅಧಿಕಾರಿಗಳ ಎಣ್ಣೆಪಾರ್ಟಿ. ಕಾಯುವ ಪೊಲೀಸರೇ ಕುಡಿದು ಪ್ರಜ್ಞೆ ಕಳೆದುಕೊಂಡಿದ್ದಾರೆ ಅನ್ನೋ ವಿಚಾರ ಹೊರಗಡೆ ಯಾರಿಗೂ ತಿಳಿಯುವಂತಿಲ್ಲ. ಮಾದ್ಯಮದ ಕಿವಿಗೆ ಬಿದ್ದರಂತೂ ಮುಗೀತು ಎನ್ನುವ ಆತಂಕ. ಆ ಪೊಲೀಸ್ ಅಧಿಕಾರಿ ಡಾಕ್ಟರಿಗೆ ಕೇಳಿದರೆ, ಮದ್ಯದಲ್ಲಿ ಎಂಥದೋ ಡ್ರಗ್ಸು ಮಿಕ್ಸಾಗಿದೆ. ಐದು ಗಂಟೆಯ ಒಳಗೆ ಟ್ರೀಟ್ಮೆಂಟು ಶುರು ಮಾಡದಿದ್ರೆ ಒಬ್ಬೊಬ್ಬರ ಮಿದುಳು ನಿಷ್ಕ್ರಿಯಗೊಂಡು ಸಾಯುತ್ತಾರೆ ಎನ್ನುವ ವಿಚಾರ ತಿಳಿಯುತ್ತದೆ. ಸುತ್ತ ಬೆಟ್ಟಗುಡ್ಡಗಳ ನಡುವಿನ ಕಾಡಿನಂಥಾ ಪ್ರದೇಶದಿಂದ ಆಸ್ಪತ್ರೆಗೆ ಹೋಗಲು ಎಂಬತ್ತು ಕಿಲೋಮೀಟರು ಕ್ರಮಿಸಬೇಕಿರುತ್ತದೆ. ಯಾವುದೋ ಲಡಾಸು ಲಾರಿ ಬಿಟ್ಟರೆ ಅಲ್ಲಿ ಬೇರೆ ವಾಹನದ ವ್ಯವಸ್ಥೆಯೂ ಇರೋದಿಲ್ಲ. ಉಳಿದ ಒಬ್ಬನೇ ಪೊಲೀಸ್ ಅಧಿಕಾರಿಯ ಒಂದು ಕೈ ಏಟಾಗಿರುತ್ತದೆ. ಇನ್ನು ಲಾರಿ ಡ್ರೈವ್ ಮಾಡೋರು ಯಾರು ಅಂದಾಗ ಅದೇ ದಿನ ಬಿಡುಗಡೆಯಾಗಬೇಕಿರುವ ಕೈದಿ ಅಲ್ಲೇ ಇರುತ್ತಾನೆ. ಆತ ಡೆಲ್ಲಿ!
ಹತ್ತು ವರ್ಷಗಳ ಕಾಲ ಜೀವಾವಧಿ ಶಿಕ್ಷೆ ಮುಗಿಸಿಕೊಂಡು ತನ್ನ ಮಗಳನ್ನು ನೋಡಬೇಕೆಂದು ಹೊರಟ ಡೆಲ್ಲಿಗೆ ಅಷ್ಟೂ ಜನ ಪೊಲೀಸರನ್ನು ಲಾರಿಗೆ ತುಂಬಿಕೊಂಡು ಹೋಗಿ, ಎಂಬತ್ತು ಕಿಲೋಮೀಟರಿನ ಆಚೆ ಇರುವ ಆಸ್ಪತ್ರೆಗೆ ಸೇರಿಸುವ ಜವಾಬ್ದಾರಿ. ಜೊತೆಗೆ ಕೈಮುರಿದುಕೊಂಡ ಪೊಲೀಸು, ಒಬ್ಬ ಹುಡುಗ… ಡೆಲ್ಲಿ ಈ ಎಲ್ಲ ಅಧಿಕಾರಿಗಳನ್ನೂ ಸೇಫಾಗಿ ಆಸ್ಪತ್ರೆಗೆ ಸೇರಿಸಿ, ಜೀವ ಉಳಿಸುತ್ತಾನಾ? ಅದಕ್ಕೆ ಏನೆಲ್ಲಾ ಅಡ್ಡಿ ಎದುರಾಗುತ್ತದೆ? ಅನಾಥಾಶ್ರಮದಲ್ಲಿದ್ದ ಮಗಳನ್ನು ಕಡೆಗೆ ಈತ ನೋಡುತ್ತಾನಾ? ನಡುನಡುವೆ ಬರುವ ಪೊಲೀಸ್ ಸ್ಟೇಷನ್ ಎಪಿಸೋಡಿಗೂ ಈ ಕತೆಗೂ ಏನು ಸಂಬಂಧ? ಡೆಲ್ಲಿ ಯಾವ ಕಾರಣಕ್ಕೆ ಜೈಲು ಸೇರಿರುತ್ತಾನೆ? ಡೆಲ್ಲಿಯ ಹೆಂಡತಿ ಏನಾದಳು? ಈತನ ಬದುಕಿನಲ್ಲಿ ಏನೆಲ್ಲಾ ಘಟಿಸಿರುತ್ತವೆ? – ಬೇರೆ ಯಾವುದೇ ಸಿನಿಮಾ ಆಗಿದ್ದರೂ ಒಂದಿಷ್ಟು ಫ್ಲಾಷ್ಬ್ಯಾಕಿನಲ್ಲಿ ಈ ಎಲ್ಲವನ್ನೂ ಬಿಚ್ಚಿಡುತ್ತಿದ್ದರು. ಆದರೆ ಕೈದಿ ಸಿನಿಮಾದಲ್ಲಿ ಈ ಎಲ್ಲ ಪ್ರಶ್ನೆಗಳೂ ಪ್ರಶ್ನೆಗಳಾಗಿಯೇ ಉಳಿದು, ಅತಿಯಾದ ಕುತೂಹಲವನ್ನೂ ಉಳಿಸಿ ಮುಂದಿನ ಭಾಗಕ್ಕೆ ಲೀಡ್ ನೀಡಿದೆ…
ಸಿನಿಮಾ ರಿಲೀಸಿಗೂ ಮುಂಚೆ ಟ್ರೇಲರ್ ಬಿಡುತ್ತಾರಲ್ಲಾ? ಹಾಗೆ ಎರಡೂವರೆ ಗಂಟೆಗಳ ಕಾಲದ ಬೃಹತ್ ಟ್ರೇಲರಿನಂತೆ ‘ಕೈದಿ ಗೋಚರಿಸುತ್ತದೆ. ಮುಂದೆ ಹೇಳಬೇಕಿರುವ ಮಹಾಕಥೆಯ, ರೋಚಕ ಎಪಿಸೋಡುಗಳ ಮತ್ತು ದುರಂತ ಬದುಕೊಂದರ ಸಣ್ಣ ಪರಿಚಯದಂತೆ ‘ಕೈದಿ ರೂಪುಗೊಂಡಿದೆ. ಹಾಡುಗಳು, ಹೀರೋಯಿನ್ನು, ಫ್ಲಾಶ್ಬ್ಯಾಕುಗಳೇ ಇಲ್ಲದೆ, ಸೂರ್ಯನ ಬೆಳಕೂ ಕಾಣದೆ, ಲಾರಿ, ರಸ್ತೆ, ಪೊಲೀಸ್ ಸ್ಟೇಷನ್ನು ಇಷ್ಟೇ ಜಾಗಗಳಲ್ಲಿ ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನಷ್ಟೇ ಸದ್ಯಕ್ಕೆ ತೆರೆದಿಟ್ಟಿದ್ದಾರೆ. ಇದರ ನಡುವೆಯೇ ಮೊದಲ ಬಾರಿಗೆ ಮಗಳನ್ನು ನೋಡಬಯಸುವ ಅಪ್ಪನ ತವಕ, ತನ್ನನ್ನು ನೋಡಲು ಬರುತ್ತಿರುವ ವ್ಯಕ್ತಿ ಯಾರೆನ್ನುವುದೂ ಗೊತ್ತಾಗದೆ ಅನಾಥಾಶ್ರಮದ ಪಡಸಾಲೆಯಲ್ಲಿ ಅಲಾರಾಮಿಟ್ಟುಕೊಂಡು ಚಡಪಡಿಸುವ ಪುಟ್ಟ ಬಾಲಕಿಯ ತೊಳಲಾಟ. ಪೊಲೀಸ್ ಅಧಿಕಾರಿಯ ಅಸಹಾಯಕತೆ, ಜೊತೆಗಿದ್ದೇ ಕತ್ತಿ ಮಸೆಯುವ ಕೇಡುಗ, ಅಮಾಯಕ ಲಾರಿ ಮಾಲೀಕ, ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಂಕಟ, ಪೊಲೀಸ್ ಪೇದೆಯೊಬ್ಬನ ಪ್ರಾಮಾಣಿಕತೆ, ಹೊಡೆದಾಟ, ಸಾವು, ನೋವು, ಕ್ರೌರ್ಯ… ಹೀಗೆ ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡ ಸಿನಿಮಾ ಕೈದಿ. ಹಾಡಿಲ್ಲ ಅನ್ನೋ ಬೇಸರ, ಹೀರೋಯಿನ್ನು ಕಾಣಲಿಲ್ಲ ಎನ್ನುವ ಕೊರಗು ಯಾವುದೂ ಕಾಣದಂತೆ ಕ್ಷಣಕ್ಷಣವೂ ಸೀಟಿನ ತುದಿಗೆ ಕೂರಿಸುವ ರೋಚಕ ನಿರೂಪಣೆ ಇಲ್ಲಿದೆ. ಬಹುಶಃ ಬೇರೆ ಯಾರೇ ಕಮರ್ಷಿಯಲ್ ಹೀರೋ ಆದರೂ ಅಷ್ಟು ಸುಲಭಕ್ಕೆ ಒಪ್ಪದ ಸ್ಕ್ರಿಪ್ಟನ್ನು ಒಪ್ಪಿ ಅದಕ್ಕೆ ಜೀವ ತುಂಬಿದ ಕಾರ್ತಿ ಧೈರ್ಯ ದೊಡ್ಡದು!