ಭಾರತ ಕ್ರಿಕೆಟ್ ತಂಡದ ಹಿಟ್ ಮ್ಯಾನ್ ಎಂದೇ ಖ್ಯಾತರಾದ ಉಪ ನಾಯಕ ರೋಹಿತ್ ಶರ್ಮ ಅವರ ಮೇಲೆ ಟಾಲಿವುಡ್ ಮತ್ತು ಕಾಲಿವುಡ್ ನ ಖ್ಯಾತ ನಟಿ ಕಾಜಲ್ ಗೆ ಕ್ರಶ್ ಆಗಿತ್ತಂತೆ. ಸಂದರ್ಶನವೊಂದರಲ್ಲಿ ಮಾತನಾಡಿದ ಕಾಜಲ್ ಅಗರ್ ವಾಲ್ ನಿಮಗೆ ಯಾವ ಕ್ರೀಡಾಪಟು ಇಷ್ಟವೆಂಬ ಸಂದರ್ಶಕನ ಪ್ರಶ್ನೆಗೆ ಉತ್ತರಿಸಿದ ಅವರು ತಮ್ಮ ಅಂತರಂಗವನ್ನು ಬಿಚ್ಚಿಟ್ಟಿದ್ದಾರೆ. “ರೋಹಿತ್ ಶರ್ಮ ಅವರ ಮೇಲೆ ಒಮ್ಮೆ ಕ್ರಶ್ ಆಗಿತ್ತು. ಮೈದಾನದಲ್ಲಿ ಅವರ ಆಟದ ದಾಟಿಯನ್ನು ಕಂಡು ಸಂಭ್ರಮಿಸುತ್ತಿದ್ದೆ. ಅವರ ಆಟದ ವೈಖರಿ, ಬ್ಯಾಟಿಂಗ್, ಕೌಶಲವೆಂದರೆ ನನಗೆ ಇಷ್ಟ” ಎಂದು ಹೇಳಿದ್ದಾರೆ.
ಸುಮಾರು 10 ವರ್ಷಗಳಿಂದ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ಕಾಜಲ್, ಪ್ರಸ್ತುತ ಕಮಲ್ ಹಾಸನ್ ನಟನೆಯ ಬಹು ನಿರೀಕ್ಷಿತ ಇಂಡಿಯನ್ 2 ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಇದಲ್ಲದೇ ರಮೇಶ್ ಅರವಿಂದ್ ನಿರ್ದೇಶಿಸುತ್ತಿರುವ ಪ್ಯಾರಿಸ್ ಪ್ಯಾರಿಸ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅವರ ನಟನೆಯ ಟಾಲಿವುಡ್ ನ ಬೆಲ್ಲಕೊಂಡ ಶ್ರೀನಿವಾಸ್ ನಾಯಕನಾಗಿ ನಟಿಸಿರುವ ಸೀತಾ ಸಿನಿಮಾ ಸದ್ಯದಲ್ಲೇ ರಿಲೀಸ್ ಆಗಲಿದೆ.