ನಿರ್ಮಾಪಕ ಗಂಡುಗಲಿ ಕೆ ಮಂಜು ಅವರ ಪುತ್ರ ಶ್ರೇಯಸ್ ಅಭಿನಯದ ಪಡ್ಡೆಹುಲಿ ಚಿತ್ರ ಹಾಡುಗಳಿಂದಲೇ ಭರ್ಜರಿಯಾಗಿ ಸೌಂಡು ಮಾಡುತ್ತಿದೆ. ಇದೀಗ ಈ ಸಿನಿಮಾದ ಹಾಡೊಂದು ಮಹಾಶಿವರಾತ್ರಿಯ ಕೊಡುಗೆಯಾಗಿ ಬಿಡುಗಡೆಗೊಂಡಿದೆ. ಗುರುದೇಶಪಾಂಡೆ ಸಾರಥ್ಯದ ಪಡ್ಡೆಹುಲಿ ಚಿತ್ರತಂಡ ಬಸವಣ್ಣನವರ ಕಳಬೇಡ ಕೊಲಬೇಡ ಹುಸಿಯನುಡಿಯಲು ಬೇಡ ಎಂಬ ಅರ್ಥಪೂರ್ಣವಾದ ವಚನವನ್ನು ಹಾಡಾಗಿಸಿದೆ. ಈ ಮೂಲಕ ಬಸವಣ್ಣನ ವಚನದ ಸಾರವಲನ್ನು ಈಗಿನ ಯುವ ಸಮೂಹಕ್ಕೂ ರವಾನಿಸುವಂಥಾ ಸಾರ್ಥಕವಾದ ಕೆಲಸವನ್ನೂ ಮಾಡಿದೆ.
ಈ ಪ್ರಸಿದ್ಧ ವಚನಕ್ಕೆ ಈಗಿನ ಜನರೇಷನ್ನಿಗೆ ಬೇಕಾದಂಥಾ ಶೈಲಿಯಲ್ಲಿ ರಾಗ ಸಂಯೋಜನೆ ಮಾಡಿರುವವರು ಅಜನೀಶ್ ಲೋಕನಾಥ್. ಬಸವಣ್ಣನ ಈ ವಚನಕ್ಕೆ ಸಮ್ಮೋಹಕ ಶೈಲಿಯಲ್ಲಿ ನಾರಾಯಣ ಶರ್ಮ ಧ್ವನಿಯಾಗಿದ್ದಾರೆ. ಇವರೂ ಕೂಡಾ ಈ ಹಾಡಿನ ಮೂಲಕವೇ ಕನ್ನಡದಲ್ಲಿ ಮತ್ತೊಂದಷ್ಟು ಅವಕಾಶ ಗಿಟ್ಟಿಸಿಕೊಳ್ಳುವುದೂ ಕೂಡಾ ಪಕ್ಕಾ ಆದಂತಿದೆ. ಈಗಿನ ದಿನಮಾನದಲ್ಲಿ ಇಡೀ ಜಗತ್ತೇ ಕಾಸಿನ ಹಿಂದೆ ಓಡುತ್ತಿರುವಾಗ ಇಂಥಾದ್ದೊಂದು ವಚನ ಸರ್ವವ್ಯಾಪಿಯಾಗುವ, ಜೀವನ ಮೌಲ್ಯವನ್ನು ಹರಡುವ ಅವಶ್ಯಕತೆಯಿತ್ತು. ಅದರಲ್ಲಿಯೂ ವಿಶೇಷವಾಗಿ ಯುವ ಸಮುದಾಯಕ್ಕಿದರ ಅವಶ್ಯಕತೆಯಿತ್ತು. ಅದನ್ನು ಪಡ್ಡೆಹುಲಿ ಚಿತ್ರತಂಡ ಪೂರೈಸಿದೆ. ಈ ಹಾಡಿನ ಮೂಲಕವೇ ನಾಯಕನಾಗಿ ಶ್ರೇಯಸ್ ಅವರ ಶ್ರಮವೂ ಕೂಡಾ ಮತ್ತೆ ಜಾಹೀರಾಗಿದೆ. ಎಮ್. ರಮೇಶ್ ರೆಡ್ಡಿ ನಿರ್ಮಾಣದ ಪಡ್ಡೆಹುಲಿ ಇಂಥಾ ಹೊಸಾ ಪ್ರಯತ್ನಗಳ ಮೂಲಕವೇ ಮುನ್ನೆಲೆಗೆ ಬಂದು ನಿಂತಿದೆ. ಇದೀಗ ಮಹಾಶಿವರಾತ್ರಿಕ ಕೊಡುಗೆಯಾಗಿ ಬಿಡುಗಡೆಯಾಗಿರೋ ಈ ಹಾಡೂ ಸೂಪರ್ ಹಿಟ್ ಆಗೋದರಲ್ಲಿ ಯಾವ ಸಂದೇಹವೂ ಇಲ್ಲ.