ವಿಕ್ಕಿ ವರುಣ್ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು ಸರಿಸುಮಾರು ಹದಿನೈದು ವರ್ಷಗಳೇ ಕಳೆದಿವೆ. ದುನಿಯಾ ಸೂರಿ ನಿರ್ದೇಶನದ ʻಕೆಂಡಸಂಪಿಗೆʼ ಮೂಲಕ ಹೀರೋ ಆಗಿ ಲಾಂಚ್ ಆದವರು. ಇದೇ ಸೆಪ್ಟೆಂಬರ್ ತಿಂಗಳಿಗೆ ಕೆಂಡಸಂಪಿಗೆ ತೆರೆಗೆ ಬಂದು ಒಂಭತ್ತು ವರ್ಷಗಳಾಗಿವೆ. ಈ ನಡುವೆ ಕಾಲೇಜ್ ಕುಮಾರ್ ಸಿನಿಮಾವನ್ನು ಹೊರತುಪಡಿಸಿ ವಿಕ್ಕಿ ನಟನೆಯ ಬೇರೆ ಯಾವ ಚಿತ್ರಗಳೂ ತೆರೆಗೆ ಬಂದಿಲ್ಲ. ಹಾಗೆ ನೋಡಿದರೆ, ವಿಕ್ಕಿ ತುಂಬಾನೇ ಲಕ್ಕಿ. ಮೊದಲ ಚಿತ್ರಕ್ಕೆ ಸ್ಟಾರ್ ಡೈರೆಕ್ಟರ್ ಸೂರಿ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ನಂತರದ ಕಾಲೇಜ್ ಕುಮಾರ್ ಕೂಡಾ ಹರಿ ಸಂತು ನಿರ್ದೇಶನದಲ್ಲಿ ಹೊರಬಂದಿತ್ತು. ಎರಡು ಹಿಟ್ ಚಿತ್ರಗಳು ಸಿಕ್ಕಮೇಲೆ ಮೇಲಿಂದ ಮೇಲೆ ಎಷ್ಟು ಸಿನಿಮಾಗಳನ್ನು ಬೇಕಿದ್ದರೂ ವಿಕ್ಕಿ ಒಪ್ಪಬಹುದಿತ್ತು. ಸಿನಿಮಾಗಳ ಸಂಖ್ಯೆಗಿಂತಾ ಕ್ವಾಲಿಟಿ ಮುಖ್ಯ ಅನ್ನೋದರ ಅರಿವಿತ್ತು. ಈ ಕಾರಣಕ್ಕೇ ಈ ವರೆಗೂ ಎಲ್ಲೂ ಬರದ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡರು. ರಾಮರಾಮರೇ ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್ ಬರೆದುಕೊಟ್ಟ ಕಥೆಯನ್ನು ಖುದ್ದು ವಿಕ್ಕಿಯೇ ನಿರ್ದೇಶನ ಮಾಡಿಕೊಂಡರು. ಅದು ಕಾಲಾಪತ್ಥರ್!
ಕಾಲಾಪತ್ಥರ್ ಸುತ್ತ ವಿಸ್ತೃತವಾದ ವಿಚಾರಗಳಿವೆ. ಅದನ್ನು ವಿಕ್ಕಿ ಬಲು ಶ್ರದ್ಧೆ ವಹಿಸಿ ಕಟ್ಟಿದ್ದಾರೆ. ಈಗಾಗಲೇ ಲೋಕಾರ್ಪಣೆಗೊಂಡಿರುವ ಕಾಲಾಪತ್ಥರ್ ಚಿತ್ರದ ಟ್ರೇಲರ್ ನೋಡಿದ ಎಲ್ಲರಿಗೂ ಇಷ್ಟವಾಗಿದೆ. ಟ್ರೇಲರಲ್ಲಿ ಕೊಟ್ಟಿರುವ ಒಂದೊಂದು ಶಾಟ್ಸ್ ಕೂಡಾ ಅಷ್ಟು ಬ್ಯೂಟಿಫುಲ್ ಆಗಿ ಮೂಡಿ ಬಂದಿವೆ.
ಸೂರಿ ನಿರ್ದೇಶನದ ಜಾಕಿ, ಅಣ್ಣಾಬಾಂಡ್ ಮತ್ತು ಕಡ್ಡಿಪುಡಿ ಜೊತೆಗೆ ಯೋಗರಾಜ್ ಭಟ್ಟರ ಪರಮಾತ್ಮ ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದವರು ವಿಕ್ಕಿ. ಅದ್ಯಾವ ಘಳಿಗೆಯಲ್ಲಿ ಸೂರಿಗೆ ಈ ಹುಡುಗನನ್ನು ನಾಯಕನಟನನ್ನಾಗಿ ಲಾಂಚ್ ಮಾಡಬೇಕು ಅಂತನ್ನಿಸಿತೋ ಗೊತ್ತಿಲ್ಲ. ಆರಂಭದಲ್ಲಿ ಸೂರಿ ಕೆಂಡಸಂಪಿಗೆಯನ್ನು ಅನೌನ್ಸ್ ಮಾಡಿದಾಗ, ಇಂಡಸ್ಟ್ರಿಯಲ್ಲೇ ತಲೆಗೊಂದು ಮಾತಾಡಿದ್ದರು. ಆದರೆ ಸೂರಿ ಸುಖಾಸುಮ್ಮನೆ ಯಾರನ್ನೂ ಮುಟ್ಟೋದಿಲ್ಲ ಅನ್ನೋದನ್ನೂ ತಳ್ಳಿಹಾಕುವಂತಿರಲಿಲ್ಲ. ಸಿನಿಮಾ ಜಗತ್ತಿನಲ್ಲೇ ಓಡಾಡಿಕೊಂಡಿದ್ದರೂ ಯಾರೊಬ್ಬರೂ ನೆಟ್ಟಗೆ ಗುರುತಿಸದ ಸೀದಾಸಾದಾ ಹುಡುಗನನ್ನು ದುನಿಯಾ ಎನ್ನುವ ಸಿನಿಮಾ ಸೂಪರ್ ಸ್ಟಾರ್ ಪಟ್ಟಕ್ಕೆ ತಂದು ಕೂರಿಸಿತ್ತು. ಅಲ್ಲಿ ಕೂಡಾ ವರ್ಕೌಟ್ ಆಗಿದ್ದಿದ್ದು ಇದೇ ಸೂರಿಯ ಆಯ್ಕೆ. ಕೆಂಡಸಂಪಿಗೆಯಲ್ಲೂ ಅದು ಮುಂದುವರೆಯಿತು. ವಿಕ್ಕಿಯ ಸಹಜ ಅಭಿನಯ ಎಲ್ಲರಿಗೂ ಇಷ್ಟವಾಗಿತ್ತು. ಒಂಭತ್ತು ವರ್ಷಗಳ ಈ ದೀರ್ಘ ಅವಧಿಯಲ್ಲಿ ವಿಕ್ಕಿಯ ಮೂರನೇ ಚಿತ್ರ ತೆರೆಗೆ ಬರುತ್ತಿದೆ. ಪುತ್ಥಳಿಯೊಂದರ ಸುತ್ತ ನಡೆಯುವ ಕಥಾನಕವನ್ನು ಕಾಲಾಪತ್ಥರ್ ಅನಾವರಣಗೊಳಿಸುತ್ತಿದೆ… ಇದೇ ಸೆಪ್ಟೆಂಬರ್ 13ಕ್ಕೆ ತೆರೆಗೆ ಬರುತ್ತಿರುವ ಈ ಸಿನಿಮಾವನ್ನು ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿದ್ದಾರೆ. ಅನೂಪ್ ಸಿಳೀನ್ ಅವರ ಚೆಂದನೆಯ ಸಂಗೀತ, ಸಂದೀಪ್ ಕುಮಾರ್ ಅವರ ಕ್ಯಾಮೆರಾ ಕಲೆ ಇದರಲ್ಲಿ ಬೆರೆತಿದೆ.
ವಿಕ್ಕಿಯ ಈ ಮೂರನೇ ಪ್ರಯತ್ನ ಕೈ ಹಿಡಿದರೆ ಹ್ಯಾಟ್ರಿಕ್ ಗೆಲುವು ಇವರದ್ದಾಗುತ್ತದೆ. ಅದು ಸಾಧ್ಯವಾಗಲಿ…
No Comment! Be the first one.