ಕೆಂಡಸಂಪಿಗೆ, ಕಾಲೇಜ್ ಕುಮಾರ್ ನಂತರ ಹೊರಬರುತ್ತಿರುವ ವಿಕ್ಕಿ ವರುಣ್ ಚಿತ್ರ ಕಾಲಾಪತ್ಥರ್. ಈ ಸಿನಿಮಾದ ಮೂಲಕ ವಿಕ್ಕಿ ನಟನೆಯ ಜೊತೆಗೆ ನಿರ್ದೇಶನಕ್ಕೂ ಕೈ ಇಟ್ಟಿರೋದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಈ ಚಿತ್ರದ ಮೂಲಕ ವಿಕ್ಕಿ ಹ್ಯಾಟ್ರಿಕ್ ಗೆಲುವು ಪಡೆಯುತ್ತಾರಾ ಇಲ್ಲವಾ ಎನ್ನುವ ಪ್ರಶ್ನೆಗೆ ಇಂದು ತೆರೆಗೆ ಬಂದಿರುವ ಕಾಲಾಪತ್ಥರ್ ಉತ್ತರ ಕೊಟ್ಟಿದೆ.
ಅವನು ಶಂಕರ. ಸೇನೆಯಲ್ಲಿ ನೌಕರಿ ಮಾಡುವವನು. ದೇಶ ಕಾಯುವ ಯೋಧರಿಗೆ ಅಡುಗೆ ಮಾಡಿ ಬಡಿಸೋ ಕೆಲಸ ಅವನದ್ದು. ಇವನ ಊರಿನ ಜನಕ್ಕೂ ಇವನ ಕೆಲಸದ ವಿವರ ಗೊತ್ತಿರೋದಿಲ್ಲ. ಅದೊಂದು ದಿನ ಕ್ಯಾಂಪ್ ಒಳನುಸುಳಿದ ದೇಶದ್ರೋಹಿ ಭಯೋತ್ಪಾದಕರ ಪಡೆಯನ್ನೀತ ಒಬ್ಬಂಟಿಯಾಗಿ ಬಡಿದು ಬಿಸಾಕುತ್ತಾನೆ. ಮೀಡಿಯಾದವರು ಇವನನ್ನು ಹೀರೋ ಮಾಡುತ್ತಾರೆ. ಊರಿನವರು ದೇವರಂತೆ ಶಂಕರನ ಮೂರ್ತಿಯನ್ನು ಕೆತ್ತಿಸಿ ನಿಲ್ಲಿಸುತ್ತಾರೆ. ಇದರ ಸುತ್ತ ರಾಜಕೀಯ, ನಂಬಿಕೆ, ಆಚರಣೆಗಳೂ ಶುರುವಾಗುತ್ತವೆ.
ಇದರ ನಡುವೆ ಶಂಕರ ರಜೆಮೇಲೆ ಊರಿಗೂ ಬರುತ್ತಾನೆ. ತನ್ನದೇ ಕಲ್ಲಿನ ಪುತ್ಥಳಿಯನ್ನು ತಾನೆ ನಿಂತು ಕಾವಲು ಕಾಯಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಅದು ಏನು ಅನ್ನೋದರಲ್ಲೇ ಅಡಗಿದೆ ಕಾಲಾಪತ್ಥರ್ ಕಥೆಯ ʻಜೀವಾಳ’!
ಒಂದು ಕಡೆ ನೀರೇ ಕಾಣದ ಊರಿಗೆ ನೀರಿನ ವ್ಯವಸ್ಥೆಯಾಗಬೇಕು. ಆ ಊರಲ್ಲಿ ಶಂಕರನ ಶಿಲೆಯ ಕೆಳಗೆ ಹೊರತು ಪಡಿಸಿ ಇನ್ನೆಲ್ಲೂ ನೀರಿನ ಸೆಲೆ ಇರೋದಿಲ್ಲ. ಈತ ಸೇನೆಯಲ್ಲಿ ಕೆಲಸ ಮಾಡುತ್ತಾನೆ ಅನ್ನೋ ಒಂದೇ ಕಾರಣಕ್ಕೆ ಪ್ರೀತಿಸಿದ ಹುಡುಗಿಯ ತಂದೆ ಇವರ ಮದುವೆಯನ್ನು ತೀವ್ರವಾಗಿ ವಿರೋಧಿಸುತ್ತಾನೆ. ಯಾರೆಲ್ಲಾ ಈ ಪುತ್ಥಳಿಯ ಸ್ಥಾಪನೆಗೆ ಕಾರಣರಾಗಿರುತ್ತಾರೋ ಅವರೇ ಕಲ್ಲಿನ ಪ್ರತಿಮೆಯಿಂದ ದೂರ ಉಳಿಯುತ್ತಾರೆ. ದೇಶ ಕಾಯಲು ಹೋಗಿ ಹೆಸರು ಮಾಡಿದವನು ತನ್ನದೇ ಪ್ರತಿಮೆಯ ಪಹರೆಗೆ ನಿಲ್ಲುತ್ತಾನೆ. ಇದರಿಂದ ಜಗತ್ತಿನ ಕಣ್ಣಿಗೆ ಅರೆಹುಚ್ಚನಂತೆ ಕಾಣುತ್ತಾನೆ. ಯಾರೆಲ್ಲಾ ಹೆಮ್ಮೆಯಿಂದ ಮೆರೆಸಿದರೋ ಅವರೇ ಇವನನ್ನು ಮೂದಲಿಸಲು ಶುರು ಮಾಡುತ್ತಾರೆ.
ಇಷ್ಟೆಲ್ಲದಕ್ಕೂ ಕಾರಣವಾದ ಆ ವಿಚಾರ ಯಾವುದು? ಶಂಕರ ಮತ್ತೆ ಸೇನೆಗೆ ಹೋಗುತ್ತಾನಾ? ಅಷ್ಟು ವರ್ಷಗಳಿಂದ ಪ್ರೀತಿಸಿದವಳು ಜೊತೆಯಾಗುತ್ತಾಳಾ? ಪುತ್ಥಳಿಯ ಸುತ್ತ ನಡೆಯುವ ಪವಾಡಗಳೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಹಂತ ಹಂತವಾಗಿ ಉತ್ತರವನ್ನು ನೀಡುತ್ತಾ ಸಾಗುವ ಚಿತ್ರ ಕಾಲಾಪತ್ಥರ್!
ಕೆಲವೊಮ್ಮೆ ಸಾಧನೆಗೆ ಸಿಕ್ಕ ಸತ್ಕಾರಗಳೇ ಅಹಂಕಾರವಾಗಿ ಮಾರ್ಪಡುತ್ತದೆ. ಇತ್ತೀಚೆಗೆ ಚಿತ್ರರಂಗದಲ್ಲೇ ನಡೆದ ಪ್ರಮುಖ ಪ್ರಕರಣವೊಂದು ಇದಕ್ಕೆ ಸಾಕ್ಷಿ. ಯಾವ ಪುರಸ್ಕಾರಗಳನ್ನು ಸ್ವೀಕರಿಸಿ ಮನುಷ್ಯ ಮತ್ತಷ್ಟು ಗಟ್ಟಿಗೊಳ್ಳಬೇಕೋ, ಅದೇ ಹೊಗಳಿಕೆಗಳು ವ್ಯಕ್ತಿಯ ವ್ಯಕ್ತಿತ್ವ, ಮನಸ್ಥಿತಿಯಮೇಲೆ ಗಾಢ ಪರಿಣಾಮ ಬೀರುತ್ತದೆ. ನಕಾರಾತ್ಮಕ ಫಲಿತಾಂಶವನ್ನು ನೀಡುತ್ತದೆ.
ಕಾಲಾಪತ್ಥರ್ ಚಿತ್ರದಲ್ಲಿ ಇಂಥದ್ದೊಂದು ಮನಸ್ಥಿತಿಗೆ ಪರಿಹಾರವನ್ನು ಸೂಚಿಸಿದ್ದಾರೆ. ಕಾಕತಾಳೀಯವಾಗಿ ನಡೆದ ಘಟನೆಗಳನ್ನು ತಮ್ಮ ಖಾಸಗೀ ವಿಚಾರಗಳಿಗೆ ಹೊಂದಿಸಿಕೊಂಡು ಭ್ರಮೆಗೆ ಬೀಳುವ ಮನುಷ್ಯಸಹಜ ಗುಣಗಳ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ತಮ್ಮನ್ನು ತಾವು ಅತಿಯಾಗಿ ಮೋಹಿಸಿ, ಅತಿರೇಕಕ್ಕೆ ತಲುಪಿದರೆ ಏನೆಲ್ಲಾ ಯಡವಟ್ಟುಗಳು ಸಂಭವಿಸಬಹುದು ಅನ್ನೋದನ್ನು ಕಲ್ಲಿನ ಪ್ರತಿಮೆಯ ರೂಪಕದ ಮೂಲಕ ಬಿಚ್ಚಿಟ್ಟಿದ್ದಾರೆ. ಕಥೆ ನಡೆಯುವ ಆ ಊರಿಗೆ ಮೂಡಲಪುರ ಅಂತಾ ಹೆಸರಿಟ್ಟಿರುವುದು ಕೂಡಾ ಸೂಚ್ಯವಾಗಿ ಹೇಳಿದ್ದಾರೆ.
ಈ ಸಿನಿಮಾದ ವಿಶೇಷವೆಂದರೆ, ರಾಜ್ ಕುಮಾರ್ ಅವರನ್ನು ʻಅಣ್ಣಾವ್ರಾಗಿʼಯೇ ಇಲ್ಲಿ ಮರುಸೃಷ್ಟಿಸಲಾಗಿದೆ. ಅದು ಕಥೆಗೆ ಪೂರಕವೂ ಆಗಿದೆ. ನಾಯಕನಟ ವಿಕ್ಕಿ ತಮ್ಮ ಸಹಜಾಭಿನಯದ ಜೊತೆಗೆ ಸಮರ್ಥ ನಿರ್ದೇಶನ ಸಿನಿಮಾದ ಸಾಮರ್ಥ್ಯ ಅನ್ನಬಹುದು. ಸತ್ಯಪ್ರಕಾಶ್ ಬರೆದಿರುವ ಇಷ್ಟು ವಿಸ್ತಾರವಾದ ಕತೆ ಹೇಳಲು ಅವರು ಬಳಸಿರುವ ಸ್ಕ್ರೀನ್ ಪ್ಲೇ ಪ್ಯಾಟ್ರನ್ ಕೂಡಾ ಎಲ್ಲೂ ಗೊಂದಲ ಅನ್ನಿಸುವುದಿಲ್ಲ. ಕಥೆಯನ್ನು ಹೇಳಿರುವ ಧಾಟಿ ಕೂಡಾ ಸರಳವಾಗಿರುವುದರಿಂದ ನೋಡುಗರಿಗೆ ಎಲ್ಲೋ ಬೇಸರ ಅನ್ನಿಸುವುದಿಲ್ಲ. ಅತಿಯಾದ ರೋಚಕತೆಯನ್ನು ಬೆರೆಸಿಲ್ಲ. ಸಾಹಸ ದೃಶ್ಯಗಳು ಕೂಡಾ ಕಥೆಯ ಚೌಕಟ್ಟಿನ ಒಳಗೇ ನಿಲ್ಲುತ್ತವೆ.
ಅನೂಪ್ ಸಿಳೀನ್ ಹಾಡು ಮತ್ತು ಹಿನ್ನೆಲೆ ಸಂಗೀತ ಪ್ರತೀ ದೃಶ್ಯದ ಶಕ್ತಿ ಹೆಚ್ಚಿಸಿದೆ. ಧನ್ಯಾ ರಾಮ್ ಕುಮಾರ್ ದನಿಯಲ್ಲೇ ಒಂಥರಾ ಸಮ್ಮೋಹಕ ಗುಣವಿದೆ. ಸಂಪತ್ ಮೈತ್ರೇಯ, ನಾಗಾಭರಣ, ಶಿವಪ್ರಸಾದ್, ರಾಜೇಶ್ ನಟರಂಗ ಮುಂತಾದ ನಟರನ್ನು ನಿರ್ದೇಶಕ ವಿಕ್ಕಿ ಸಮರ್ಥವಾಗಿ ದುಡಿಸಿಕೊಂಡಿದ್ದಾರೆ. ಚಂದ್ರಚೂಡ್ ಚಕ್ರವರ್ತಿ ಅವರ ಪಾತ್ರ ಸಣ್ಣದು ಅನ್ನಿಸಿದರೂ ವಿಶೇಷವಾಗಿದೆ. ಉತ್ತರ ಕರ್ನಾಟಕದ ಹಿನ್ನೆಲೆಗೆ ಮೈಸೂರು ಪ್ರಾಂತ್ಯದ ಭಾಷೆಯನ್ನು ಬ್ಲೆಂಡ್ ಮಾಡಿರೋದು ಮಜಾ ಅನ್ನಿಸುತ್ತದೆ. ಛಾಯಾಗ್ರಾಹಕ ಸಂದೀಪ್ ಕುಮಾರ್ ಬಳಸಿರುವ ಟೋನ್ ಮತ್ತು ಕೆಲವು ಬ್ಯೂಟಿ ಶಾಟ್ಸ್ ಸಿನಿಮಾದ ಒಟ್ಟಂದವನ್ನು ಹೆಚ್ಚಿಸಿದೆ.
ಕಲಾತ್ಮಕ ಕಂಟೆಂಟನ್ನು ಕಮರ್ಷಿಯಲ್ ಚೌಕಟ್ಟಿಗೆ ತಂದು ನಿಲ್ಲಿಸೋದು ಕಷ್ಟದ ಕೆಲಸ. ಪರಭಾಷೆಗಳಲ್ಲಿ ಇಂಥ ಪ್ರಯತ್ನಗಳಾದಾಗ ಇಷ್ಟಪಡುವವರು ಕನ್ನಡದಲ್ಲೇ ರೂಪುಗೊಂಡಿರುವ ಈ ಸಿನಿಮಾವನ್ನು ಹೆಮ್ಮೆಯಿಂದ ಸ್ವೀಕರಿಸುವ ಮನಸ್ಸು ಮಾಡಬೇಕು.
ಕೊಟ್ಟ ಕಾಸಿಗೆ ಮೋಸ ಮಾಡದ, ಭರಪೂರ ಮನರಂಜನೆಯನ್ನೂ ನೀಡುವ, ಕಟ್ಟಕಡೆಯದಾಗಿ ಎಲ್ಲರೂ ತಿಳಿಯಬೇಕಾದ ಮೆಸೇಜನ್ನೂ ಕೊಟ್ಟಿರುವ ಕಾಲಾಪತ್ಥರ್ ಚಿತ್ರವನ್ನು ಯಾರು ಬೇಕಾದರೂ ಧಾರಾಳವಾಗಿ ನೋಡಬಹುದು!
No Comment! Be the first one.