ಅಬ್ಬಬ್ಬಾ… ಇವರು ನಿಜಕ್ಕೂ ಕಲಾವಿದರು ಅನ್ನೋದನ್ನು ಸಾಬೀತು ಮಾಡಿದ್ದಾರೆ. ಒಂದರ ಮೇಲೊಂದು ಸುಳ್ಳುಗಳನ್ನು ಪೋಣಿಸಿ ಮುಖಕ್ಕೆ ಬಣ್ಣ ಹಚ್ಚದೇನೆ ಒಬ್ಬರಿಗಿಂತಾ ಒಬ್ಬರು ಉತ್ತಮ ಅಭಿನಯ ನೀಡಿದ್ದಾರೆ.
ಕಳೆದ ವಾರ ಕಲಾವಿದರ ಸಂಘದಲ್ಲಿ ನಡೆದ ಹೋಮ, ಹವನ ಇತ್ಯಾದಿಗಳ ಬಗ್ಗೆ ಮೊದಲೇ ನಾವು ಮಾಹಿತಿ ನೀಡಿದ್ದೆವು. ಇದು ಯಾವ ಕಾರಣಕ್ಕಾಗಿ, ಯಾರಿಗಾಗಿ ನಡೆಯುತ್ತಿರುವ ಯಾಗ ಅನ್ನೋದನ್ನು ಸವಿವರವಾಗಿ ತಿಳಿಸಿದ್ದೆವು. ಈಗ ಅವೆಲ್ಲಾ ಅಕ್ಷರಶಃ ನಿಜವಾಗಿದೆ.
ಕಲಾವಿದರ ಸಂಘದಲ್ಲಿ ನಡೆದ ಹೋಮ ಜೈಲಲ್ಲಿರುವ ದರ್ಶನ್ ಒಳಿತಿಗಾಗಿ ಅನ್ನೋದು ನಿಜ. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಪತ್ರಿಕಾಗೋಷ್ಠಿ ನಡೆಸಿ ʻಇದು ತಳಕಚ್ಚಿರುವ ಚಿತ್ರರಂಗದ ಏಳಿಗೆಗಾಗಿ ನಡೆಸುತ್ತಿರುವ ಪೂಜೆʼ ಅಂತಾ ಏನೇನೋ ಹೇಳಿದ್ದರು. ಅವರು ಏನೇ ಹೇಳಿದರೂ, ಅಸಲೀ ಕಾರಣ ಏನು ಅನ್ನೋದು ಅದಾಗಲೇ ಊರಿಗೆಲ್ಲಾ ಪಸರ್ ಆಗಿತ್ತು.
ಅಂದು ಕಲಾವಿದರ ಸಂಘದಲ್ಲಿ ಕನ್ನಡ ಚಿತ್ರರಂಗದ ಪುರಾತನ ನಟ ದೊಡ್ಡಣ್ಣನವರು ಪತ್ನಿ ಮತ್ತು ತಮ್ಮ ಆಪ್ತ ಬಳಗದವರನ್ನೆಲ್ಲಾ ಒಟ್ಟು ಸೇರಿಸಿ ಶಕ್ತಿಶಾಲಿ ಪೂಜೆಯೊಂದನ್ನು ನಡೆಸಿ ಕೃತಾರ್ಥರಾದರು. ಅಲ್ಲಿ ಜ್ಯೋತಿ ಎನ್ನುವ ನಿವೃತ್ತ ನಟಿಯ ಮೇಲೆ ದೇವರ ಆವಾಹನೆ ಕೂಡಾ ಆಗಿತ್ತು. ಇನ್ನು ಯಾರಯಾರ ಮೇಲೆ ಏನೇನು ಅಮರಿಕೊಂಡಿತ್ತೋ ಗೊತ್ತಿಲ್ಲ. ಒಟ್ಟಾರೆ ಹೋಮ ಹವನಗಳೆಲ್ಲಾ ಯಶಸ್ವಿಯಾಗಿ ನೆರವೇರಿತು!
ಯಾರಿಗೂ ತಿಳಿಯದ ವಿಚಾರವೊಂದಿದೆ. ಅಂದು ಪೂಜೆಗೆ ಬಂದಿದ್ದ ಅಂಬರೀಶ್ ಪುತ್ರ ಅಭಿಷೇಕ್ ಕಲಾವಿದರ ಸಂಘದಿಂದ ಸೀದಾ ಹೋಗಿದ್ದು ಪರಪ್ಪನ ಅಗ್ರಹಾರಕ್ಕೆ. ದರ್ಶನ್ ಗಾಗಿ ನಡೆದ ಸುಬ್ರಹ್ಮಣ್ಯ ಸತ್ರ ಯಾಗದ ಪ್ರಸಾದ ಪೂಜೆಯ ಪವರ್ ಕಡಿಮೆಯಾಗೋ ಹೊತ್ತಿಗೆ ದರ್ಶನ್ ಕೈ ಸೇರಬೇಕಿತ್ತು. ಅದನ್ನು ಅಭಿ ಮತ್ತು ನಟ ಚಿಕ್ಕಣ್ಣ ಯಶಸ್ವಿಯಾಗಿ ನಿಭಾಯಿಸಿದ್ದರು.
ಹಾಗೆ ನೋಡಿದರೆ ಚಿಕ್ಕಣ್ಣ ಈ ಪ್ರಕರಣದ ಸಾಕ್ಷಿಗಳಲ್ಲಿ ಒಬ್ಬ. ಈಗಾಗಲೇ ಪೊಲೀಸರು ಮತ್ತು ನ್ಯಾಯಾಧೀಶರು ಈತನ ಹೇಳಿಕೆ ಪಡೆದಿದ್ದಾರೆ. ಸಾಮಾನ್ಯಕ್ಕೆ ಪ್ರಕರಣದಲ್ಲಿ ಸಾಕ್ಷಿ ಹೇಳಿಕೆ ಕೊಟ್ಟವರನ್ನು ಅರೋಪಿಯ ಭೇಟಿಗೆ ಅವಕಾಶ ಕೊಡೋದಿಲ್ಲ. ಇಲ್ಲಿ ಚಿಕ್ಕಣ್ಣ ಉದ್ದೇಶಪೂರ್ವಕವಾಗಿ ದರ್ಶನ್ ಅವರನ್ನು ಭೇಟಿ ಮಾಡಿದನಾ ಅಥವಾ ಅಚಾತುರ್ಯವೋ ಗೊತ್ತಿಲ್ಲ. ತನ್ನ ಬಾಸ್ ಮುಂದೆ ಹೋಗಿ ಒಂದು ಎಂಟ್ರಿ ಹಾಕಿ ಬಂದಿದ್ದಾನೆ!
ಹೊರಗಿದ್ದಾಗ ಬಾಸ್, ದೋಸ್ತು ಅಂತಾ ಅಟ್ಟ ಹತ್ತಿಸುತ್ತಿದ್ದವರು ಜೈಲಿಗೆ ಹೋದಮೇಲೆ ನೋಡಲು ಬರಲಿಲ್ಲ ಅಂದುಕೊಳ್ಳುತ್ತಾರೆ ಅನ್ನೋದು ಕೆಲವರ ಭಯ. ದರ್ಶನ್ ಹೊರಬಂದಮೇಲೆ ಬರದವರನ್ನೆಲ್ಲಾ ಪಟ್ಟಿ ಮಾಡಿಕೊಂಡು ಅವಕಾಶ ಕಿತ್ತುಕೊಂಡರೆ ಏನು ಗತಿ ಅಂತಾ ಹೆದರಿದವರೂ ಇದ್ದಾರೆ. ಈ ಕಾತಣಕ್ಕೆ ಕೆಲವು ಬಕೀಟು, ಡ್ರಮ್ಮು, ಚೊಂಬು, ಮಿಳ್ಳೆಗಳೆಲ್ಲಾ ಪರಪ್ಪನ ಅಗ್ರಹಾರಕ್ಕೆ ವಿಸಿಟ್ ಮಾಡುತ್ತಿವೆ. ಮೊದಲೇ ತಾವು ಹೋಗುತ್ತಿರುವ ವಿಚಾರವನ್ನು ಹಬ್ಬಿಸಿ ಯೂ ಟ್ಯೂಬುಗಳಲ್ಲಿ ಕವರೇಜು ಮಾಡಿಸಿಕೊಳ್ಳುತ್ತಿದ್ದಾರೆ.
No Comment! Be the first one.