ಈ ಘಟನೆ ನಡೆದು ಎರಡು ವರ್ಷವಾಯ್ತು ಅನ್ನೋದನ್ನೇ ನೆನಪಿಸಿಕೊಂಡ ನಟ ಕಮಲ್ ಹಾಸನ್ ಶುದ್ಧ ಗಾಳಿಗಾಗಿ ಹೋರಾಡಿದ ರೈತರು, ನಾಗರಿಕರ ಜೀವ ತೆಗೆಸಿದ ಸರ್ಕಾರ ಮತ್ತು ಮನುಷ್ಯತ್ವವನ್ನು ಮರೆತು ಪಾಪದ ಜನರ ಜೀವ ತೆಗೆದ ಕ್ರೂರಿ ಪೊಲೀಸರಿಗೆ ಧಿಕ್ಕಾರ ಎಂದಿದ್ದಾರೆ…
ನ್ಯಾಯ ಕೇಳಿದವರ ಎದೆಗೆ ಬುಲೆಟ್ಟು ನುಗ್ಗಿಸಿ ಕೊಲ್ಲಿಸುವುದು ಆಳುವ ಸರ್ಕಾರಗಳ ಹಳೆಯ ಮಾರ್ಗ. ಇದೇ ಮೇ 22ಕ್ಕೆ ಆ ಘಟನೆ ನಡೆದು ಎರಡು ವರ್ಷ. ತಮಿಳುನಾಡಿನ ತೂತುಕುಡಿಯಲ್ಲಿ ಸ್ಥಾಪಿಸಲಾಗಿದ್ದ ಬಹುರಾಷ್ಟ್ರೀಯ ಕಂಪನಿಯೊಂದರ ವಿರುದ್ಧ ಜನ ಪ್ರತಿಭಟನೆ ನಡೆಸುತ್ತಿದ್ದರು. ಹೋರಾಟಗಾರರ ಉಸಿರು ತೆಗೆಸುವ ಮೂಲಕ ತಮಿಳುನಾಡಿನ ಸರ್ಕಾರ ತನ್ನ ನೀಚತನವನ್ನು ಪ್ರದರ್ಶಿಸಿತ್ತು.
ಸ್ಟೆರ್ ಲೈಟ್ ತಾಮ್ರ ಸಂಸ್ಕರಣ ಘಟಕವನ್ನು ಮುಚ್ಚಲು ಆಗ್ರಹಿಸಿ ರೈತರು ಮತ್ತು ನಾಗರಿಕರು ನೂರು ದಿನಗಳ ಕಾಲ ಸತ್ಯಾಗ್ರಹ ನಡೆಸುತ್ತಿದ್ದರು. ಕಂಪನಿಯು ಹರಡುತ್ತಿದ್ದ ವಿಷಾನಿಲ, ಪರಿಸರ ಹಾನಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚಿದ್ದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹೋರಾಟಕ್ಕೆ ಮುಂದಾಗಿದ್ದರು. ಪ್ರತಿಭಟನೆಯನ್ನು ನಿಯಂತ್ರಿಸುವ ನೆಪದಲ್ಲಿ ಪ್ರತಿಭಟನಾಕಾರರ ಮೇಲೆ ಕ್ರೂರಿ ಪೋಲೀಸರು ಗೋಲಿಬಾರ್ ನಡೆಸಿ ಸುಮಾರು ಹದಿಮೂರು ಜನರ ಜೀವ ತೆಗೆದಿದ್ದರು. ನೂರಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಖಾಸಗಿ ಬಂಡವಾಳಶಾಹಿ ಮತ್ತು ಕೈಗಾರಿಕೋದ್ಯಮಿಗಳಿಗಾಗಿ ಸರ್ಕಾರವೇ ನಡೆಸಿದ ಭಯೋತ್ಪಾದನೆ ಇದಾಗಿತ್ತು. ಈ ಘಟನೆ ನಡೆದು ಎರಡು ವರ್ಷವಾಯ್ತು ಅನ್ನೋದನ್ನೇ ನೆನಪಿಸಿಕೊಂಡ ನಟ ಕಮಲ್ ಹಾಸನ್ ʻʻಶುದ್ಧ ಗಾಳಿಗಾಗಿ ಹೋರಾಡಿದ ರೈತರು, ನಾಗರಿಕರ ಜೀವ ತೆಗೆಸಿದ ಸರ್ಕಾರ ಮತ್ತು ಮನುಷ್ಯತ್ವವನ್ನು ಮರೆತು ಪಾಪದ ಜನರ ಕೊಂದ ಕ್ರೂರಿ ಪೊಲೀಸರಿಗೆ ಧಿಕ್ಕಾರ. ಜನರ ಕೂಗನ್ನು ಕೇಳಿಸಿಕೊಳ್ಳಲಾರದ ಸರ್ಕಾರ ಬಂಡವಾಳ ಶಾಹಿಗಳ ಕಾಲಬುಡದಲ್ಲಿ ಸ್ವಾಭಿಮಾನವನ್ನು ಅಡವಿಟ್ಟಿದೆʼʼ ಅಂತಾ ಟ್ವೀಟ್ ಮಾಡಿದ್ದಾರೆ.