ನಟ, ನಿರ್ದೇಶಕ ವಿಕಾಸ್ ಅಭಿನಯದಲ್ಲಿ ಮೂಡಿಬಂದಿರುವ ಕಾಣದಂತೆ ಮಾಯವಾದನು ಚಿತ್ರ ಇನ್ನೇನು ತೆರೆಗೆ ಬರಲು ಸಿದ್ಧವಾಗಿದೆ. ಹೇಳಿ ಕೇಳಿ ಇದು ಪುನೀತ್ ರಾಜ್ ಕುಮಾರ್ ಹಾಡಿ, ಅಭಿನಯಿಸಿದ್ದ ‘ಕಾಣದಂತೆ ಮಾಯವಾದನು’ ಹಾಡಿನ ಸಾಲನ್ನೇ ಶೀರ್ಷಿಕೆಯನ್ನಾಗಿಸಿಕೊಂಡಿರುವ ಸಿನಿಮಾ. ವಿಕಾಸ್ ಮತ್ತು ನಡುವೆ ಯಾವುದೋ ಹೇಳಲಾಗದಂಥ ನಂಟಿದೆ. ಅದೇನೆನ್ನೋದನ್ನು ಸ್ವತಃ ವಿಕಾಸ್ ಹೇಳಿದ್ದಾರೆ. ಓದಿ!

ನಾನು ಟಿವಿ ಸೀರಿಯಲ್ಲುಗಳಿಗೆ ಎಡಿಟರ್ ಆಗಿದ್ದೆ. ಚೆನ್ನಾಗಿ ಕಾಣ್ತೀನಿ ಅಂತ ನಟನೆ ಅವಕಾಶ ಸಿಕ್ಕಿತು. ಆದರೆ ಎಡಿಟಿಂಗ್ ನಲ್ಲಿ ಹೆಚ್ಚು ಹಣ ಗಳಿಸುತ್ತಿದ್ದೆ.. ಹೀಗಾಗಿ ನಟನೆ ಬೇಡ ಅಂತ ನಿರ್ಧಾರ ಮಾಡಿದ್ದೆ. ನನ್ನ ಸ್ನೇಹಿತ ಮತ್ತು ಖ್ಯಾತ ಕಿರುತೆರೆ ನಿರ್ದೇಶಕ ಎ.ಜಿ ಶೇಷಾದ್ರಿ ಆಗ “ಬೆಳದಿಂಗಳಾಗಿ ಬಾ” ಎನ್ನುವ ಧಾರಾವಾಹಿ ನಿರ್ದೇಶಿಸುತ್ತಿದ್ದರು. ಆ ಧಾರಾವಾಹಿಯನ್ನು ಪೂರ್ಣಿಮಾ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿತ್ತು. ಅದೊಂದು ದಿನ ನಾನು ಅವನ ಜೊತೆ ಸುಮ್ಮನೇ ವಜ್ರೇಶ್ವರಿ ಸಂಸ್ಥೆಗೆ ಹೋಗಿದ್ದೆ. ಅಲ್ಲಿ ಅಪ್ಪು ಸರ್ ನನ್ನ ನೋಡಿ. ‘ಆ ರೋಲ್ಗೆ ಯಾಕ್ ಹುಡ್ಕಾಡ್ತೀರ. ಇವರಿಗೆ ಗ್ಲಾಸಸ್ ಹಾಕಿಸ್ಬಿಡಿ. ಸಾಫ್ಟ್ವೇರ್ ಇಂಜಿನಿಯರ್ ಥರ ಕಾಣ್ತಾರೆ’ ಅಂದ್ರು. ಅಪ್ಪು ಸರ್ ಹೇಳಿದ್ದರಿಂದ ಮತ್ತೆ ಬಣ್ಣ ಹಚ್ಚಿದೆ. ನಂತರ ಜಾಕಿ ಸಿನಿಮಾ ನಾನು ಮೊದಲು ಸ್ಕ್ರಿಪ್ಟ್ ಕೆಲಸ ಮಾಡಿದ ಸಿನಿಮಾ. ಅಲ್ಲೂ ಅಪ್ಪು ಸರ್ ಹೀರೋ.
https://www.youtube.com/watch?v=mpapBTUrLuw&feature=youtu.be
ಅದರಲ್ಲಿ ಜಾಕಿ ತಾಯಿಯ ಹೆಸರು ಜಯಮ್ಮ. ನನ್ನ ಮೊದಲ ನಿರ್ದೇಶನದ ಸಿನಿಮಾ ಜಯಮ್ಮನ ಮಗ. ಪ್ರಸ್ತುತ ಕಾಣದಂತೆ ಮಾಯವಾದನು ಸಿನಿಮಾಗೆ ‘ರಮ್ಮಿ’ ಅಂತ ಶೀರ್ಷಿಕೆ ಇಡಬೇಕಿತ್ತು. ಆದರೆ ಬೇರೊಬ್ಬರು ನೋಂದಾಯಿಸಿದ್ದರು. ಎಪ್ಪತ್ತು ಟೈಟಲ್ ಪ್ರಯತ್ನಿಸಿದರು ಒಂದೂ ಸಿಗಲಿಲ್ಲ. ಎಲ್ಲವೂ ರಿಜಿಸ್ಟರ್ ಆಗಿದ್ದವು. ತಲೆ ಮೇಲೆ ಕೈ ಹೊತ್ತು ಕೂತಿದ್ದಾಗ ನಿರ್ದೇಶಕ ರಾಜ್ ‘ಕಾಣದಂತೆ ಮಾಯವಾದನು’ ಅನ್ನೋದು ಹೇಗಿರುತ್ತೆ ಅಂತ ಕೇಳಿದ. ನನಗೆ ಅಲ್ಲೇ ೧೦೦% ಗ್ಯಾರೆಂಟಿ ಆಗೋಯ್ತು. ಈ ಟೈಟಲ್ಲೇ ನಮಗೆ ಸಿಗೋದು ಅಂತ. ಯಾಕೆಂದರೆ ಅಪ್ಪು ಸರ್ಗೂ ನನಗೂ ಒಂದು ಬಗೆಯ ಅಗೋಚರ ನಂಟಿದೆ. ಅಂದುಕೊಂಡಂತೇ ಟೈಟಲ್ ಓಕೆ ಆಯ್ತು. ಈ ಚಿತ್ರದಲ್ಲಿ ಅವರ ಭಾಗೀದಾರಿಕೆ ಇದ್ದರೆ ಇನ್ನೂ ಚೆನ್ನ ಎಂದು ಅವರ ಧ್ವನಿಯಲ್ಲಿ ಒಂದು ಹಾಡನ್ನಾದರೂ ಹೇಳಿಸುವ ಪ್ಲಾನು ಮಾಡಿದ್ವಿ. ಹಾಗೆ ರೂಪುಗೊಂಡಿದ್ದೇ ‘ಕಳೆದೋದ ಕಾಳಿದಾಸ’.

ಸಾಹಿತ್ಯ: ಡಾ|| ವಿ. ನಾಗೇಂದ್ರ ಪ್ರಸಾದ್
ಸಂಗೀತ: ಗುಮ್ಮಿನೇನಿ ವಿಜಯ್
ನಿರ್ದೇಶನ : ರಾಜ್ ಪತ್ತಿಪಾಟಿ
ನಿರ್ಮಾಪಕರು : ಚಂದ್ರಶೇಖರ್ ನಾಯ್ಡು, ಸೋಮ್ ಸಿಂಗ್, ಪುಷ್ಪ ಸೋಮ್ಸಿಂಗ್
ತಾರಾಗಣ : ವಿಕಾಸ್, ಸಿಂಧು ಲೋಕ್ನಾಥ್, ಉದಯ್, ಭಜರಂಗಿ ಲೋಕಿ, ಸುಚೇಂದ್ರ ಪ್ರಸಾದ್, ಧರ್ಮಣ್ಣ ಮುಂತಾದವರು
https://youtu.be/emEqNEPlVuY