ತಮಿಳಿನ ರಾಘವ ಲಾರೆನ್ಸ್ ಅಂದಾಕ್ಷಣ ಸೂಪರ್ ಹಿಟ್ ಹಾರರ್ ಸಿನಿಮಾಗಳೇ ಕಣ್ಣ ಮುಂದೆ ಬಂದು ಹೋಗುತ್ತದೆ. ಅಷ್ಟರಮಟ್ಟಿಗೆ ರಾಘವ ಲಾರೆನ್ಸ್ ದೆವ್ವ, ಭೂತಗಳ ಮೂಲಕ ನೋಡುಗರ ಎದೆ ಝಲ್ಲೆನ್ನುವಂತೆ ಮಾಡಿಬಿಟ್ಟಿದ್ದಾರೆ.
ತಮಿಳಿನ ಚಿತ್ರರಂಗದಲ್ಲಿ ಹಿಂದಿನಿಂದಲೂ ಹಾರರ್ ಸಿನಿಮಾಗಳೇ ಸಾಕಷ್ಟು ನಿರ್ಮಾಣವಾಗಿದ್ದು, ಈಗೀಗ ಅದು ಟ್ರೆಂಡ್ ಕೂಡ.ಪ್ರೇಕ್ಷಕರಿಂದ ಒಮ್ಮತದ ಪಾಸಿಟೀವ್ ರೆಸ್ಪಾನ್ಸ್, ಭರ್ಜರಿ ಕಲೆಕ್ಷನ್ ಗಳಿಂದ ಹಾರರ್ ಜಾನರ್ ನ ಸಿನಿಮಾಗಳ ಸೀಕ್ವೆಲ್ ಗಳು ಒಂದರ ಹಿಂದೆ ಒಂದರಂತೆ ತಮಿಳಿನಲ್ಲಿ ನಿರ್ಮಾಣವಾಗುತ್ತಿದೆ. ಅಲ್ಲದೇ ಕನ್ನಡ, ತೆಲುಗು, ಮಲೆಯಾಳಂ ಭಾಷೆಗಳಲ್ಲೂ ಹಾರರ್ ಚಿತ್ರಗಳ ಹವಾ ಕಡಿಮೆಯೇನಿಲ್ಲ.
ಸದ್ಯಕ್ಕೆ ರಾಘವ ಲಾರೆನ್ಸ್ ನಿರ್ದೇಶನದ ಕಾಂಚನ ಸಿರೀಸ್ ನ ಕಾಂಚನ 3 ರಿಲೀಸ್ ಆಗಿರುವ ಹಾರರ್ ಸಿನಿಮಾವಾಗಿದೆ. ಇದು 2007ರಲ್ಲಿ ಬಿಡುಗಡೆಗೊಂಡಿದ್ದ ಮುನಿ ಸಿನಿಮಾದ ಮುಂದುವರೆದ ಭಾಗ. ಕಾಂಚನ ಸರಣಿಯ ಎಲ್ಲಾ ಸಿನಿಮಾಗಳನ್ನು ನಿರ್ದೇಶಿಸಿರುವ ರಾಘವ ಲಾರೆನ್ಸ್ ಅವರೇ ಪ್ರಮುಖ ಪಾತ್ರಗಳಲ್ಲೂ ಕಾಣಿಸಿಕೊಂಡಿರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್.
ಮುನಿ ಸಿನಿಮಾದ ಯಶಸ್ಸಿನಿಂದ ಪ್ರೇರೇಪಿತರಾದ ರಾಘವ್ 2011ರಲ್ಲಿ ಮುನಿ 2 ಸಿನಿಮಾವನ್ನು ನಿರ್ಮಿಸಿದ್ದು, ಇದಕ್ಕೆ ಕಾಂಚನ ಎಂದೂ ಹೆಸರಿಟ್ಟಿದ್ದರು. ಇದಕ್ಕೂ ಪ್ರೇಕ್ಷಕರಿಂದ ಮುಕ್ತ ಸ್ವಗತ ದೊರೆತಿತ್ತು. ಇದೇ ಕಾರಣಕ್ಕೆ 2015ರಲ್ಲಿ ಕಾಂಚನ 2 ನಿರ್ಮಿಸಿದ್ದರು. ಇದೀಗ ತೆರೆಕಂಡಿರುವ ಕಾಂಚನ 3 ಸಿನಿಮಾ ಮುನಿ ಸರಣಿಯ ನಾಲ್ಕುನೇ ಸಿನಿಮಾ. ವಿಶೇಷವೆಂದರೆ ಕಾಂಚನ ಸಿನಿಮಾವೂ ಕಲ್ಪನಾ, ಕಲ್ಪನಾ 2 ಹೆಸರಿನಲ್ಲಿ ಉಪೇಂದ್ರ ನಾಯಕತ್ವದಲ್ಲಿ ಕನ್ನಡಕ್ಕೂ ಬಂದಿತ್ತು. ಆದರೆ ಈ ಬಾರಿ ರಾಘವ ಲಾರೆನ್ಸ್ ಉಪೇಂದ್ರ ಅವರಿಗೆ ಆ ಅವಕಾಶ ನೀಡದೇ, ಕಾಂಚನ 3ಯನ್ನೇ ಕನ್ನಡಕ್ಕೂ ಡಬ್ಬಿಂಗ್ ಮಾಡುವ ಮೂಲಕ ಕನ್ನಡದ ನೆಲದಲ್ಲಿಯೂ ಮಿಂಚಲು ರೆಡಿಯಾಗಿದ್ದಾರೆ.