ಇಲ್ಲಿನವರ ಪಾಲಿಗೆ ಅವರು ಕಾಣೆಯಾದವರು. ಪೊಲೀಸರು ಎಲ್ಲ ಕಡೆ ʻಪ್ರಕಟಣೆʼಯನ್ನೂ ಹೊರಡಿಸಿರುತ್ತಾರೆ. ಆದರೆ ಅಲ್ಲಿ ಆ ಮೂವರೂ ವಿಲಾಸೀ ಬದುಕನ್ನು ಅನುಭವಿಸುತ್ತಿರುತ್ತಾರೆ. ಹೇಳಿ ಕೇಳಿ ಅದು ಬ್ಯಾಂಕಾಕ್.‌ ಸುತ್ತ ಹುಡುಗೀರು, ಎಣ್ಣೆ ಏಟಲ್ಲಿ ಮೈಮರೆತಿರುತ್ತಾರೆ. ‌ಹಾಗೆ ತಮ್ಮನ್ನು ತಾವು ಕಳೆದುಕೊಂಡು ದಾರಿ ಗೊತ್ತಿರದ ಊರಲ್ಲಿ ಮನಸೋ ಇಚ್ಛೆ ಮಾಡಲು ಹೋದವರು ಅರವತ್ತು ಪ್ಲಸ್‌ ವಯಸ್ಸಿನವರು ಅನ್ನೋದು ನಿಜಕ್ಕೂ ವಿಶೇಷ!

ಧಡಕ್ಕಂತಾ ಫ್ಲಾಷ್‌ ಬ್ಯಾಕ್‌ ಓಪನ್‌ ಆಗುತ್ತದೆ. ಮೂವರೂ ದೋಸ್ತಿಗಳ ವಾಲ್ಯ, ಪ್ರೌಢ ಮತ್ತು ಯೌವನದ ದಿನಗಳು ಹಂತಹಂತವಾಗಿ ತೆರೆದುಕೊಳ್ಳುತ್ತದೆ. ವಾಸ್ತವ ಮತ್ತು ನೆನಪುಗಳು ಹಿಂದಕ್ಕೂ ಮುಂದಕ್ಕೂ ಚಲಿಸುತ್ತಿರುತ್ತವೆ.

ಅಸಲಿಗೆ ಈ ಮೂವರು ಯಾರು? ಮಧ್ಯದಲ್ಲಿ ಹೇಗೆ ಬೇರೆಯಾಗಿದ್ದರು? ಮತ್ತೆ ಒಂದು ಸೇರಿದ್ದು ಎಲ್ಲಿ? ಯಾಕೆ? ಈಗ ಮೂವರೂ ಹೆಚ್ಚೂಕಮ್ಮಿ ತಲೆ ತಪ್ಪಿಸಿಕೊಂಡು ಮಲೇಶಿಯಾ, ಥಾಯ್‌ ದೇಶಗಳಿಗೆ ಬಂದದ್ದರ ಕಾರಣ ಏನು? ಅನ್ನೋದೆಲ್ಲಾ ಮಜಮಜವಾಗಿ ಗೊತ್ತಾಗುತ್ತದೆ. ದೊಡ್ಡದೊಂದು ಆತಂಕವೂ ಎದುರಾಗುತ್ತದೆ. ಇಲ್ಲೆಲ್ಲೋ ನಡೆದ ಕೊಲೆಗೂ ವೃದ್ಧರಿಗೂ ಏನು ಸಂಬಂಧ ಅನ್ನೋದರ ಹಿನ್ನೆಲೆ ರೋಚಕವಾಗಿ ಅನಾವರಣಗೊಂಡಿದೆ!

ಕಾಣೆಯಾದವರ ಬಗ್ಗೆ ಪ್ರಕಟಣೆ ಸಿನಿಮಾವನ್ನು ನೋಡುವಾಗ ಇದು ನಿಖರವಾಗಿ ಇದೇ ದಿಕ್ಕಿಗೆ ಸಾಗುತ್ತದೆ ಅಂತಾ ಹೇಳಿಕ್ಕಾಗುವುದಿಲ್ಲ. ರಂಗಾಯಣ ರಘು, ರವಿಶಂಕರ್‌ ಮತ್ತು ತಬಲಾ ನಾಣಿ – ಮೂವರೂ ಗೊತ್ತೂ ಗುರಿ ಇಲ್ಲದ ದೇಶದಲ್ಲಿ ಬಿಂದಾಸಾಗಿ ಎಂಜಾಯ್‌ ಮಾಡಲು ಹೋಗಿರುತ್ತಾರೆ. ಅಲ್ಲಿ ಗೈಡ್‌ ಚಿಕ್ಕಣ್ಣ ಕೂಡಾ ಜೊತೆಯಾಗುತ್ತಾನೆ. ನಡುವೆ ಹೀರೋಯಿನ್‌ ಆಶಿಕಾ ಕೂಡಾ ಬಂದು ಹೋಗುತ್ತಾಳೆ.

ರವಿಶಂಕರ್, ರಂಗಾಯಣ ರಘುವಿಗೆ ಹೋಲಿಸಿದರೆ ತಬಲಾ ನಾಣಿಗೆ ಯಥಾಪ್ರಕಾರ ಕುಡುಕನ ಪಾತ್ರವೇ ಇಲ್ಲೂ ಸಿಕ್ಕಿದೆ. ಫ್ಲಾಷ್‌ ಬ್ಯಾಕ್‌ ನಲ್ಲಿ ಬಂದುಹೋಗಿರುವ ನಿರ್ದೇಶಕ ಅನಿಲ್‌ ಕುಮಾರ್‌ ಪಾತ್ರ ಗಮನ ಸೆಳೆಯುತ್ತದೆ. ಜೊತೆಗೆ ತಮಿಳಿನ ವಡಾ ಚೆನ್ನೈನ ರಾಜನ್‌ ಪಾತ್ರವನ್ನು ನೆನಪಿಗೆ ತರುತ್ತದೆ. ಪೊಲೀಸ್‌ ಪಾತ್ರದಲ್ಲಿ ತಿಲಕ್‌ ಅಬ್ಬರವಿಲ್ಲದೆ ನಟಿಸಿ ಇಷ್ಟವಾಗುತ್ತಾರೆ.

ಭೂತ, ಭವಿಷ್ಯ ಮತ್ತು ವರ್ತಮಾನಗಳ ವಿಚಾರಗಳನ್ನು ಒಂದೇ ಹಿಡಿಯಲ್ಲಿ ಕಟ್ಟಿಕೊಟ್ಟಿರುವ ಈ ಚಿತ್ರ ಮೇಲ್ನೋಟಕ್ಕೆ ಹಾಸ್ಯ ಲೇಪಿತವಾಗಿದೆ. ಹಣವೊಂದನ್ನು ಆನ್‌ ಲೈನಲ್ಲಿ ಕಳಿಸಿಬಿಟ್ಟರೆ, ಅರಮನೆಯಂತಾ ಮನೆಯಲ್ಲಿ ಹೆತ್ತವರು ನೆಮ್ಮದಿಯಾಗಿರುತ್ತಾರೆ ಅಂದುಕೊಂಡಿರುವ ಎನ್ನಾರೈ ಮಕ್ಕಳು, ಗಂಡು ಮಗುವೇ ಬೇಕು ಅಂತಾ ಜೀವಮಾನವಿಡೀ ಹೆಣ್ಣುಮಕ್ಕಳನ್ನು ನಿಂದಿಸುವ ಅಪ್ಪಂದಿರು, ತಮ್ಮಿಡೀ ಜೀವ, ಜೀವನವನ್ನು ಮುಡಿಪಾಗಿಟ್ಟು ಸಾಕಿದವರು ಅಂತಲೂ ನೋಡದೆ ಪೋಷಕರನ್ನು ಬೀದಿಗೆ ಬಿಡುವ, ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳು, ಆಸ್ತಿಗಾಗಿ ಜೀವ ನೀಡಿದವರನ್ನೇ ಸುಪಾರಿ ಕೊಟ್ಟು ಕೊಲ್ಲಿಸುವ ನೀಚ ಮಕ್ಕಳು… ಹೀಗೆ ಹಲವು ಸತ್ಯಗಳನ್ನು, ಗಂಭೀರ ವಿಚಾರಗಳನ್ನೂ ತಣ್ಣಗೆ ಹೇಳಿದ್ದಾರೆ.

ಈ ಕಾರಣಕ್ಕಾದರೂ ಒಮ್ಮೆ ʻಕಾಣೆಯಾದವರ ಬಗ್ಗೆ ಪ್ರಕಟಣೆʼಯನ್ನು ನೋಡಿ ಬನ್ನಿ!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಸಮಾಜಕ್ಕೆ ಶ್ರೀ ಕಿರಿಕ್‌ ಶಂಕರ್ ಅವರ ಕೊಡುಗೆಗಳು….!

Previous article

ನಕ್ಕು ನಗಿಸುತ್ತಲೇ ಕಾಡುವ ವ್ಹೀಲ್ ಚೇರ್ ರೋಮಿಯೋ!

Next article

You may also like

Comments

Leave a reply

Your email address will not be published.