’ಮಣಿಕರ್ಣಿಕಾ’ ಹಿಂದಿ ಚಿತ್ರದೊಂದಿಗೆ ನಟಿ ಕಂಗನಾ ರನಾವತ್ ನಿರ್ದೇಶಕಿಯಾಗಿ ಬಡ್ತಿ ಹೊಂದಿದರು. ಮೊದಲ ಪ್ರಯತ್ನದಲ್ಲೇ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ಚಿತ್ರ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಮಾಡಿದ್ದಲ್ಲದೆ, ಕಂಗನಾಗೂ ಹೆಸರು ತಂದುಕೊಟ್ಟಿತು. ಇದೇ ವಿಶ್ವಾಸದಲ್ಲಿ ಕಂಗನಾ ಮತ್ತೊಮ್ಮೆ ನಿರ್ದೇಶನ ಕೈಗೆತ್ತಿಕೊಳ್ಳಲಿದ್ದಾರೆ. ತಮ್ಮ ಬಯೋಪಿಕ್ ನಿರ್ದೇಶಿಸುವುದು ಅವರ ಮುಂದಿನ ಯೋಜನೆ!
“ಹೌದು, ನನ್ನ ಬದುಕಿನ ಕತೆಯನ್ನು ನಾನು ತೆರೆಗೆ ತರಲಿದ್ದೇನೆ. ಇದು ನನ್ನ ಸಾಧನೆಯನ್ನು ಬಿಂಬಿಸಿಕೊಳ್ಳುವ ಚಿತ್ರವಲ್ಲ. ಗಾಡ್ಫಾದರ್, ಶ್ರೀಮಂತಿಕೆ, ಯಾರದೂ ಪ್ರಭಾವವಿಲ್ಲದೆ ಬಾಲಿವುಡ್ನಲ್ಲಿ ಭದ್ರ ನೆಲೆ ಕಂಡುಕೊಂಡಿದ್ದೇನೆ. ನನ್ನ ಈ ಜರ್ನೀ ತೆರೆ ಮೇಲೆ ಕಾಣಿಸಲಿದೆ” ಎಂದಿದ್ದಾರೆ ಕಂಗನಾ. ’ಬಾಹುಬಲಿ’ ಸರಣಿ ಸಿನಿಮಾಗಳ ಖ್ಯಾತಿಯ ಕೆ.ವಿ.ವಿಜಯೇಂದ್ರ ’ಮಣಿಕರ್ಣಿಕಾ’ಗೆ ಚಿತ್ರಕಥೆ ಹೆಣೆದಿದ್ದರು. ಕಂಗನಾ ಬಯೋಪಿಕ್ಗೂ ಅವರೂ ಚಿತ್ರಕಥೆ ರಚಿಸಿಕೊಡಲಿದ್ದಾರಂತೆ. ’ಗ್ಯಾಂಗ್ಸ್ಟರ್’ (೨೦೦೬) ಚಿತ್ರದೊಂದಿಗೆ ಬಾಲಿವುಡ್ ಪ್ರವೇಶಿಸಿದ ಕಂಗನಾ ಚೊಚ್ಚಲ ಚಿತ್ರದಲ್ಲೇ ಗಮನ ಸೆಳೆದರು. ಮುಂದೆ ’ಲೈಫ್ ಇನ್ ಎ ಮೆಟ್ರೋ’, ’ಫ್ಯಾಷನ್’, ’ತನು ವೆಡ್ಸ್ ಮನು’, ’ಕ್ವೀನ್’ ಮುಂತಾದ ಚಿತ್ರಗಳಲ್ಲಿ ನಟಿಸಿದ ಅವರು ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.
೩೧ರ ಹರೆಯದ ಕಂಗನಾ ಸದಾ ವಿವಾದಗಳಿಂದ ಸುದ್ದಿಯಾಗುತ್ತಿರುತ್ತಾರೆ. ನಟ ಹೃತಿಕ್ ರೋಷನ್ ಜೊತೆಗಿನ ಮುರಿದುಬಿದ್ದ ಪ್ರೀತಿ, ಬಾಲಿವುಡ್ನ ಸ್ವಜನಪಕ್ಷಪಾತ ಸೇರಿದಂತೆ ಕೆಲವು ವಿಚಾರಗಳ ಬಗ್ಗೆ ಕಂಗನಾ ದಿಟ್ಟತನದಿಂದ ಮಾತನಾಡಿದ್ದಾರೆ. ಬಯೋಪಿಕ್ನಲ್ಲಿ ಅವರ ಶತ್ರುಗಳ ಕುರಿತ ಪ್ರಸ್ತಾಪವೂ ಇರಲಿದೆ. “ಸ್ನೇಹಿತರು, ಹಿತೈಷಿಗಳಷ್ಟೇ ಅಲ್ಲ ನನ್ನ ವಿರುದ್ಧ ಪಿತೂರಿ ಮಾಡಿದವರ ಬಗ್ಗೆಯೂ ಬಯೋಪಿಕ್ನಲ್ಲಿ ಪ್ರಸ್ತಾಪವಾಗಲಿದೆ” ಎಂದಿದ್ದಾರೆ ಕಂಗನಾ. ಇದು ಬಾಲಿವುಡ್ನಲ್ಲಿನ ಕೆಲವರಲ್ಲಿ ಕಸಿವಿಸಿ ಉಂಟುಮಾಡಿದೆ ಎನ್ನಲಾಗುತ್ತಿದೆ.
#