ಹಿಂದಿ ನಟಿ ಕಂಗನಾ ರನಾವತ್ ಸದ್ಯ ’ಮಣಿಕರ್ಣಿಕಾ’ ಚಿತ್ರದ ಯಶಸ್ಸಿನಲ್ಲಿ ಬೀಗುತ್ತಿದ್ದಾರೆ. ಸಾಕಷ್ಟು ವಿವಾದಗಳೊಂದಿಗೇ ತೆರೆಕಂಡ ಸಿನಿಮಾ ಈಗಲೂ ಆ ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಚಿತ್ರದ ನಿರ್ದೇಶಿಸುತ್ತಿದ್ದ ಕ್ರಿಷ್ ತಂಡದಿಂದ ಹೊರನಡೆದಾಗ ಸ್ವತಃ ಕಂಗನಾ ನಿರ್ದೇಶನ ಕೈಗೆತ್ತಿಕೊಂಡು ಚಿತ್ರ ಪೂರ್ಣಗೊಳಿಸಿದರು. ಬಿಡುಗಡೆಯ ನಂತರ ನಿರ್ದೇಶಕ ಕ್ರಿಷ್ ಮತ್ತಿತರರೊಂದಿಗಿನ ಅವರ ವಾದ ಮುಂದುವರಿದಿದೆ. ಮೊನ್ನೆ ಮಾಧ್ಯಮ ಗೋಷ್ಠಿಯೊಂದರಲ್ಲಿ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ಅವರು, ಬಾಲಿವುಡ್ನಲ್ಲಿನ ಎಲ್ಲರ ನಿಜಬಣ್ಣ ಬಯಲು ಮಾಡುತ್ತೇನೆ ಎನ್ನುವ ವಿವಾದದ ಹೇಳಿಕೆ ಕೊಟ್ಟಿದ್ದಾರೆ. ಸಹಜವಾಗಿಯೇ ಇದು ಬಾಲಿವುಡ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಿಮ್ಮ ಚಿತ್ರಗಳ ಬಿಡುಗಡೆ ಸಂದರ್ಭದಲ್ಲಿ ಬಾಲಿವುಡ್ನವರು ಏಕೆ ಬೆಂಬಲಕ್ಕೆ ನಿಲ್ಲುವುದಿಲ್ಲ? ಎಂದು ಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಪ್ರಶ್ನಿಸಿದರು. ಇದಕ್ಕೆ ನೇರವಾಗಿ ಉತ್ತರಿಸಿದ ಕಂಗನಾ, ನನಗೀಗ ೩೧ ವರ್ಷ ಮತ್ತು ನಾನು ಚಿತ್ರನಿರ್ಮಾಪಕಿ. ಉತ್ತಮ ನಟನೆಗೆ ನನಗೆ ರಾಷ್ಟ್ರಪ್ರಶಸ್ತಿಗಳು ಸಿಕ್ಕಿವೆ. ನನ್ನನ್ನು ಮತ್ತು ನನ್ನ ಚಿತ್ರವನ್ನು ಇತರರು ಪ್ರಮೋಟ್ ಮಾಡಲಿ ಎಂದು ನಾನು ಅಪೇಕ್ಷಿಸುವುದಿಲ್ಲ ಎನ್ನುವ ಅವರು ಬಾಲಿವುಡ್ನವರ ದ್ವಿಮುಖ ವ್ಯಕ್ತಿತ್ವವನ್ನು ಪ್ರಶ್ನಿಸುತ್ತಾರೆ. ಝಾನ್ಸಿ ರಾಣಿ ನನ್ನ ಆಂಟಿ ಅಲ್ಲ! ಹಾಗಿದ್ದಮೇಲೆ ಬಾಲಿವುಡ್ನವರೇಕೆ ನನ್ನ ಚಿತ್ರದ ಬಗ್ಗೆ ಮಾತನಾಡಬಾರದು? ಅವರಲ್ಲೇ ಕೆಲವು ಗುಂಪುಗಳಿವೆ. ಪರಸ್ಪರರು ಬೆಂಬಲಿಸುತ್ತಾ ಬೆನ್ನು ತಟ್ಟಿಕೊಳ್ಳುತ್ತಾರೆ. ಮುಂದೊಂದು ದಿನ ಬಾಲಿವುಡ್ನವರ ನಿಜಬಣ್ಣ ಬಯಲು ಮಾಡಲಿದ್ದೇನೆ! ಎಂದಿದ್ದಾರೆ ಕಂಗನಾ. ಅವರ ಈ ಮಾತಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
#