ಬೆಂಗಳೂರು ಸಿಟಿ. ತಮಿಳು, ತೆಲುಗು, ಹಿಂದಿ, ಬಂಗಾಳಿ… ಹೀಗೆ ವಿವಿಧ ಭಾಷಾ ಮೂಲದ ಎಂಟು ಜನ ಕಿಡ್ನ್ಯಾಪ್ ಆಗಿರುತ್ತಾರೆ. ಅಪಹರಣಕ್ಕೊಳಗಾಗಿರುವವರೆಲ್ಲರೂ ಅನ್ಯ ಕನ್ನಡಿಗರೇ ಆಗಿರುವುದು ಸಂಚಲನ ಸೃಷ್ಟಿಸುತ್ತದೆ. ಈ ವಿಚಾರ ರಾಷ್ಟ್ರಮಟ್ಟದ ಸುದ್ದಿಯಾಗಿಬಿಡುತ್ತದೆ. ತಕ್ಷಣ ಪೊಲೀಸ್ ಇಲಾಖೆ ತಂಡವೊಂದನ್ನು ರಚಿಸಿ ಪ್ರಕರಣ ತನಿಖೆ ಆರಂಭಿಸುತ್ತದೆ. ಆ ತಂಡಕ್ಕೆ ನೇಮಕವಾಗುವ ಅಧಿಕಾರಿ ಶ್ರುತಿ ಚಕ್ರವರ್ತಿ. ಅದೇ ತನಿಖಾ ತಂಡದಲ್ಲಿ ಕಾರ್ಯನಿರ್ವಹಿಸುವ ಕಾನ್ಸ್ಟೇಬಲ್ ಸೋಮು ಎಂಬಾತನೇ ಈ ಅಪಹರಣಗಳ ಪ್ರಮುಖ ರೂವಾರಿಯಾಗಿರುತ್ತಾನೆ. ಇದು ಬರೀ ಅಪರಹಣಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಕೊಲೆಗಳೂ ನಡೆದುಹೋಗುತ್ತವೆ. ಒಬ್ಬ ಪಿ.ಸಿ. ಯಾಕೆ ಇಷ್ಟೆಲ್ಲಾ ಅಪಹರಣ ಮಾಡುತ್ತಾನೆ? ಕೊಲೆಗಳು ಯಾಕೆ ನಡೆಯುತ್ತವೆ? ಅಂತಾ ಹುಡುಕಹೊಟರೆ ಎದುರಾಗುವುದು ಕಾನ್ಸ್ಟೇಬಲ್ ಕನ್ನಡ ಪ್ರೀತಿ ಮತ್ತು ಎಲ್ಲಿಂದಲೋ ಬಂದವರ ಕನ್ನಡದ್ರೋಹಿ ನಡವಳಿಕೆಗಳು!
ಕನ್ನಡವನ್ನೇ ಉಸಿರಾಗಿಸಿಕೊಂಡಿರುವವರ ಮುಂದೆ ಎಷ್ಟೋ ಜನ ‘ಕನ್ನಡ್ ಗೊತ್ತಿಲ್ಲ ಅಂತಾ ಸಲೀಸಾಗಿ ಹೇಳಿಬಿಡುತ್ತಾರೆ. ವರ್ಷಾನುಗಟ್ಟಲೆಯಿಂದ ಈ ನೆಲದಲ್ಲಿ ವಾಸ ಮಾಡಿಕೊಂಡು, ಇಲ್ಲಿನ ಅನ್ನ ತಿಂದು, ಇಲ್ಲಿನ ಎಲ್ಲ ಸೌಕರ್ಯಗಳನ್ನೂ ಬಳಸಿಕೊಂಡು ಕನಿಷ್ಟಪಕ್ಷ ಈ ನಾಡನ್ನು ಗೌರವಿಸಬೇಕೆನ್ನುವ ಪ್ರಜ್ಞೆಯೇ ಇಲ್ಲದಂತೆ ವರ್ತಿಸುತ್ತಾರೆ. ಕನ್ನಡವನ್ನು ಕಲಿಯುವ ಸಣ್ಣ ಪ್ರಯತ್ನವನ್ನೂ ಮಾಡದೇ ಹೋಗುತ್ತಾರೆ. ವ್ಯಕ್ತಿಯೊಬ್ಬ ಬದುಕುವ ಸ್ವಾಭಾವಿಕ ಪರಿಸರದಲ್ಲಿನ ಭಾಷೆ ಎಷ್ಟು ಮುಖ್ಯ? ಯಾವ ಕಾರಣಕ್ಕೆ ಭಾಷೆಯನ್ನು ಕಲಿಯಬೇಕು? ಕಲಿಯದಿದ್ದರೆ ಆಗುವ ಅನಾನುಕೂಲಗಳೇನು?… ಹೀಗೆ ಭಾಷಾಪ್ರೇಮವನ್ನು ಮೂಲಾಧಾರವನ್ನಾಗಿಟ್ಟುಕೊಂಡು, ಅದರ ಮಹತ್ವವನ್ನು ಹೇಳುತ್ತಲೇ, ಘೋರ ಎಚ್ಚರಿಕೆಯನ್ನೂ ನೀಡುವ ಸಿನಿಮಾ ‘ಕನ್ನಡ್ ಗೊತ್ತಿಲ್ಲ!
ಮಯೂರ ರಾಘವೇಂದ್ರ ನಿರ್ದೇಶನದ ಮೊದಲ ಸಿನಿಮಾದಲ್ಲೇ ಕ್ರಾಂತಿಕಾರಕ ವಿಚಾರವನ್ನು ಆಯ್ದುಕೊಂಡಿದ್ದಾರೆ. ಈ ಚಿತ್ರವನ್ನು ನೋಡಿದವರು ಭಾಷಾಪ್ರೇಮವನ್ನು ಮನುಷ್ಯತ್ವದ ಹಾದಿಯಲ್ಲೇ ತಿಳಿ ಹೇಳಬಹುದಿತ್ತು. ಅಮಾನುಷ ಕೃತ್ಯ ಬೇಕಿತ್ತಾ ಅಂತಾ ಪ್ರಶ್ನಿಸಿದರೆ ಅವರದ್ದು ಶಾಂತಿಮಾರ್ಗ. ಇಲ್ಲ.. ಹೀಗೆ ಮಾಡೋದೇ ಕರೆಕ್ಟು ಅಂದರೆ ಉಗ್ರಾತಿಉಗ್ರ ಹೋರಾಟಕ್ಕೆ ಬೆಂಬಲ. ಯಾಕೆಂದರೆ, ‘ಕನ್ನಡ್ ಗೊತ್ತಿಲ್ಲ ಅಂದವರನ್ನು ಕೊಂದುಬಿಡಬೇಕು ಎನ್ನುವ ಲೋಕಾರೂಢಿಯ ಮತುಗಳನ್ನು ಕೇಳಿರುತ್ತೇವಲ್ಲಾ? ಅದನ್ನಿಲ್ಲಿ ಅಕ್ಷರಶಃ ಕಾರ್ಯರೂಪಕ್ಕಿಳಿಸಿದ್ದಾರೆ ನಿರ್ದೇಶಕರು!
ಪೊಲೀಸ್ ಅಧಿಕಾರಿಯಾಗಿ ಹರಿಪ್ರಿಯಾ ಪವರ್ರು ತೋರಿದ್ದಾರೆ. ಸುಧಾರಾಣಿ ಪಾತ್ರ ಚಿಕ್ಕದಾಗಿದ್ದರೂ ಚೊಕ್ಕವಾಗಿದೆ. ಪವನ್ ಕುಮಾರ್ ಮತ್ತು ಧರ್ಮಣ್ಣ ಸಿನಿಮಾದ ಪ್ರಾಮುಖ್ಯತೆಯನ್ನು ಹೆಚ್ಚಿಸಿದ್ದಾರೆ. ಗಿರಿಧರ್ ದಿವಾನ್ ಛಾಯಾಗ್ರಹಣ ನೋಡುಗರನ್ನು ಪರದೆಮೇಲಿನ ಪ್ರಕರಣಗಳಿಗೆ ಕಣ್ಣಾರೆ ಕಂಡ ಸಾಕ್ಷಿಗಳನ್ನಾಗಿಸುತ್ತದೆ. ನಕುಲ್ ಅಭಯಂಕರ್ ಅವರ ಹಿನ್ನೆಲೆ ಸಂಗೀತ ಸಿನಿಮಾದ ವ್ಯಾಲ್ಯೂ ಹೆಚ್ಚಿಸಿದೆ. ಮಾತೃಭಾಷೆಗೆ ಆಪತ್ತೆದುರಾಗಿರುವ ಈ ಕಾಲದಲ್ಲಿ ಇಂಥದ್ದೊಂದು ಸಿನಿಒಮಾದ ಅಗತ್ಯವಿದ್ದು, ಎಲ್ಲ ಭಾಷಾಪ್ರೇಮಿಗಳೂ ಈ ಚಿತ್ರವನ್ನೊಮ್ಮೆ ನೋಡಬಹುದಾಗಿದೆ!