ಹೇಗಾದರೂ ಸರಿ ಏಕಾಏಕಿ ದುಡ್ಡು ಮಾಡಿ ಬಿಡಬೇಕು… ಇಂಥಾ ಧಾವಂತದಿಂದ ಥರ ಥರದ ವೇಷ ತೊಟ್ಟ, ಹೆಜ್ಜೆ ಹೆಜ್ಜೆಗೂ ಮಾರಾಮೋಸ ಮಾಡಿದ ಸಜೀವ ಉದಾಹರಣೆಗಳು ಸಾಕಷ್ಟಿವೆ. ಈಗ ಪ್ರೇಕ್ಷಕರ ಮುಂದೆ ಬಂದಿರೋ ಜಗತ್ ಕಿಲಾಡಿ ಅಂಥಾ ಹತ್ತಾರು ಮೋಸಗಾರರ, ನಾನಾ ವೇಷಗಳ ಒಟ್ಟು ಮೊತ್ತದಂತಿರುವವನು. ಹಣ ಮಾಡುವ ಉದ್ದೇಶದಿಂದ ಎಂತೆಂಥಾ ಪ್ರಳಯಾಂತಕ ಕೆಲಸ ಮಾಡ ಬಹುದೆಂಬುದನ್ನು ಹೇಳುತ್ತಲೇ ಆ ಹಾದಿಯಲ್ಲಿ ಮುಂದುವರೆದರೆ ಕಡೆಗೂ ಸಿಕ್ಕೋದೇನೆಂಬ ಸಂದೇಶವನ್ನೂ ಸಾರುತ್ತಾ ಸಖತ್ ಎಂಟರ್ಟೈನಿಂಗ್ ಚಿತ್ರವಾಗಿ ಜಗತ್ ಕಿಲಾಡಿ ಪ್ರೇಕ್ಷಕರ ಮನಗೆದ್ದಿದ್ದಾನೆ!
ಆರವ್ ಧೀರೇಂದ್ರ ನಿರ್ದೇಶನದ ಈ ಚಿತ್ರ ಅಂತಿಮ ಹಂತದಲ್ಲಿ ಭಾರೀ ಸದ್ದು ಮಾಡಿತ್ತು. ನಿರಂಜನ್ ಶೆಟ್ಟಿ ಬರೋಬ್ಬರಿ ಹದಿನೈದು ಅವತಾರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರ ಅಚ್ಚರಿಗೆ ಕಾರಣವಾಗಿದ್ದರು. ಇದೀಗ ಬಿಡುಗಡೆಯಾಗಿರೋ ಈ ಚಿತ್ರ ಆರಂಭದಿಂದ ಕೊನೆಯವರೆಗೂ ಅದನ್ನು ಕಾಯ್ದುಕೊಳ್ಳುವಲ್ಲಿ ಸಫಲವಾಗಿದೆ.
ನಿರಂಜನ್ ಶೆಟ್ಟಿ ಈ ಚಿತ್ರದಲ್ಲಿ ಸತ್ಯಮೂರ್ತಿ ಎಂಬ ಪಾತ್ರದ ಮೂಲಕ ವಿರಾಟ್ ರೂಪವನ್ನೇ ಪ್ರದರ್ಶಿಸಿದ್ದಾರೆ. ಹೆಸರಲ್ಲಿಯೇ ಸತ್ಯ ಇದ್ದರೂ ಆತ ಸುಳ್ಳು, ಮೋಸ, ವಂಚನೆಗಳ ಸಾಕಾರ ಮೂರ್ತಿ. ಎಂಥಾ ಸಂದರ್ಭವನ್ನಾದರೂ ಮೋಸದಿಂದಲೇ ಕಾಸು ಕಬಳಿಸಲು ಬಳಸಿಕೊಳ್ಳೋದರಲ್ಲಿ ಆತ ಚಾಣಾಕ್ಷ. ರೈಸ್ಫುಲ್ಲಿಂಗ್ ದಂಧೆಯಿಂದ ಹಿಡಿದು, ಕುಡಿಯೋ ನೀರಿನ ಮಾಫಿಯಾದ ವರೆಗೂ ಸಕಲ ಅಡ್ಡ ಕಸುಬುಗಳಲ್ಲಿಯೂ ಈತನದ್ದೇ ಮೇಲುಗೈ. ಹಣವೇ ಸಕಲ ಸುಖಕ್ಕೂ ಮೂಲ ಎಂಬುದಾತನ ಬದುಕಿನ ಸೂತ್ರ. ಎಂಥಾ ಚಾಣಾಕ್ಷನೇ ಆಗಿದ್ದರೂ ಖಾಕಿ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬಂತೆ ಈ ಜಗತ್ ಖಿಲಾಡಿಯೂ ಪೊಲೀಸರ ಅತಿಥಿಯಾಗುತ್ತಾನೆ.
ಹೀಗೆ ತಗುಲಿಕೊಂಡಾಗಲೂ ಮತ್ತೊಂದು ಮೋಸದ ಬಲೆ ಹೆಣೆದು ಬಚಾವಾಗೋದರಲ್ಲಿ ಸತ್ಯ ಮೂರ್ತಿಯನ್ನು ಮೀರಿಸೋ ಮತ್ತೊಬ್ಬರಿಲ್ಲ. ಸಾಮಾನ್ಯವಾಗಿ ಪ್ರೀತಿ ಎಂಥವರನ್ನೂ ಬದಲಿಸುತ್ತೇ ಅನ್ನೋದಿದೆ. ಆದರೆ ಹಣದ ಹಿಂದೆ ಬಿದ್ದ ಈತನಿಗೆ ತನ್ನ ಹಿಂದೆ ಬಿದ್ದ ಹುಡುಗಿಯೊಬ್ಬಳ ಅಂತರಾಳ ಮುಖ್ಯ ಅನ್ನಿಸೋದಿಲ್ಲ. ಆದರೂ ಮೋಸದ ಜಾಲದಲ್ಲಿ ಬಂಧಿಯಾಗಿ ಖೈದಿಯಾದ ಸಂದರ್ಭದಲ್ಲಿ ಪೊಲೀಸರು ಹೇಳಿದ ಮಾತು ಆತನನ್ನು ಕಾಡುತ್ತೆ. ಸತ್ಯಮೂರ್ತಿ ಬದಲಾಗುವ ಪಥದತ್ತ ಹೊರಳಿಕೊಳ್ಳುತ್ತಾನೆ. ಅದು ಸಾಧ್ಯವಾಗುತ್ತಾ? ಹಣದ ಹಿಂದೆ ಬಿದ್ದ ಅಸಡ್ಡೆ ಮಾಡಿದ್ದ ಪ್ರೀತಿ ಆತನಿಗೆ ದಕ್ಕುತ್ತಾ ಎಂಬುದು ಅಸಲೀ ಕ್ಯೂರಿಯಾಸಿಟಿ.
ಆರಂಭದಿಂದ ಕಡೆಯವರೆಗೂ ಕ್ಷಣ ಕ್ಷಣವೂ ಕಾಡುವಂತೆ, ಹೊತ್ತಿನ ಪರಿವೆಯೂ ನೆನಪಾಗದಂತೆ ಚಿತ್ರವನ್ನು ಕಟ್ಟಿ ಕೊಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ನಾಯಕನಾಗಿ ನಿರಂಜನ್ ಶೆಟ್ಟಿ ಎಲ್ಲ ಶೇಡುಗಳ ಪಾತ್ರವನ್ನೂ, ಅವತಾರಗಳನ್ನೂ ಆವಾಹಿಸಿಕೊಂಡಂತೆ ನಟಿಸಿದ್ದಾರೆ. ನಾಯಕಿ ಅಮಿತಾ ಕುಲಾಲ್ ಕೂಡಾ ಇದಕ್ಕೆ ತಕ್ಕುದಾಗಿಯೇ ನಟಿಸಿದ್ದಾರೆ. ಪ್ರತೀ ಪಾತ್ರ, ಸನ್ನಿವೇಶಗಳೂ ಕೂಡಾ ಪ್ರೇಕ್ಷಕರನ್ನು ಕುತೂಹಲಕ್ಕೆ ತಳ್ಳುವ ಮೂಲಕ ಇಡೀ ಚಿತ್ರ ನೋಡಿಸಿಕೊಂಡು ಹೋಗುತ್ತೆ. ಇಡೀ ಚಿತ್ರದಲ್ಲಿನ ವೇಗ, ಅಚ್ಚುಕಟ್ಟಾದ ಚಿತ್ರಕಥೆ, ಬಿಗಿ ಕಳೆದುಕೊಳ್ಳದ ಕಥೆ ಮತ್ತು ಅದಕ್ಕೆ ತಕ್ಕುದಾದ ಪಾತ್ರ ಪೋಷಣೆಯ ಮೂಲಕ ಈ ಚಿತ್ರ ಪ್ರೇಕ್ಷಕರನ್ನು ಸೆಳೆದುಕೊಂಡಿದೆ.
ಸಿನಿಮಾ ರೇಟಿಂಗ್ : ***/****** #
No Comment! Be the first one.