ಕನ್ನಡದ ಹೀರೋಗಳು ತೆಲುಗು ಸಿನಿಮಾ ಮಂದಿಯ ಕಣ್ಣಿಗೆ ಯಾವಾಗಲೂ ವಿಲನ್ನುಗಳ ಹಾಗೇ ಕಾಣುತ್ತಾರಾ? ಅನ್ನೋ ಪ್ರಶ್ನೆಗೆ ʻಹೌದುʼ ಎನ್ನುವ ನಿದರ್ಶನವೇ ಕಣ್ಣೆದುರು ತೆರೆದುಕೊಳ್ಳುತ್ತಿರುತ್ತವೆ.

ಕನ್ನಡದ ಸೂಪರ್‌ ಸ್ಟಾರ್‌ ಗಳಾದ ಕಿಚ್ಚ ಸುದೀಪ್‌ ಮತ್ತು ಉಪೇಂದ್ರ ತೆಲುಗು ಸಿನಿಮಾಗಳಲ್ಲಿ ಈಗಾಗಲೇ ವಿಲನ್‌ ಗಳಾಗಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಮೊದಲೆಲ್ಲಾ ಪ್ರಕಾಶ್‌‌ ರೈ, ಸಂಪತ್ ರಾಜ್‌, ಕಿಶೋರ್‌ ಥರದ ನಟರು ಖಳನಟರಾಗಿ ಪ್ರಸಿದ್ದಿ ಪಡೆದರು.

ನಂತರ ಸುದೀಪ್‌ ಮತ್ತು ಉಪೇಂದ್ರ ರಂತಾ ಸ್ಟಾರ್‌ ನಟರು ಹೋಗಿ ಗುಡುಗಿದರು. ಹಾಗೆ ನೋಡಿದರೆ ಉಪ್ಪಿ ಮತ್ತು ಸುದೀಪ್‌ ನಿಜಕ್ಕೂ ಗ್ರೇಟ್ ಅನ್ನಿಸಿದ್ದರು. ಈ ಇಬ್ಬರೂ ನಟರಿಗೆ ಕನ್ನಡದಲ್ಲಿರುವ ಇಮೇಜೇ ಬೇರೆ. ಹೀರೋಯಿಸಮ್ಮು, ಫುಲ್‌ ಬಿಲ್ಡಪ್ಪು ಪಡೆದಿರುವ ಹೀರೋಗಳಿವರು. ತಾವು ಉಳಿಸಿಕೊಂಡಿರುವ ಇಮೇಜನ್ನು ಮೀರಿ ಪರಭಾಷೆಯ ಸಿನಿಮಾಗಳಲ್ಲಿ ಖಳನಟರ ಪಾತ್ರಗಳಲ್ಲಿ ನಟಿಸುತ್ತಿರುತ್ತಾರೆ.  ನಟ ಡಾಲಿ ಧನಂಜಯ ಕೂಡಾ ತೆಲುಗಿನಲ್ಲಿ ಈಗ ಫೇಮಸ್‌ ವಿಲನ್.

ಈಗ ದೊಡ್ಡ ಸ್ಟಾರ್‌ ಸಿನಿಮಾಗಳನ್ನೂ ಪಕ್ಕಕ್ಕೆ ಸರಿಸಿ ಗೆದ್ದಿರುವ ಸಿನಿಮಾ ಸಲಗ. ಸದ್ಯದ ಮಟ್ಟಿಗೆ ದುನಿಯಾ ವಿಜಯ್‌ ಸಲಗ ವಿಜಯ್‌ ಕುಮಾರ್ ಆಗಿ ಮಾರ್ಪಟ್ಟಿರುವುದು ಮಾತ್ರವಲ್ಲ, ಮತ್ತೆ ಮುಂಚೂಣಿ ಸ್ಥಾನದಲ್ಲಿ ಬಂದು ನಿಂತಿದ್ದಾರೆ. ಇಂಥ ಸಂದರ್ಭದಲ್ಲಿ ಇನ್ನೂ ಒಂದಿಷ್ಟು ಆಫರುಗಳನ್ನು ಒಪ್ಪಿಕೊಂಡು, ಕಾಸು ಎಣಿಸುವ ಕೆಲಸವನ್ನು ಯಾವುದೇ ಹೀರೋ ಆಗಿದ್ದರೆ ಮಾಡುತ್ತಿದ್ದರೇನೋ? ಆದರೆ ದುನಿಯಾ ವಿಜಯ್‌ ಹಾಗೆ ಮಾಡಿಲ್ಲ.

ಅವರೀಗ ಮಾಗಿದ್ದಾರೆ. ಇಮೇಜು ಮತ್ತು ಭಾಷೆಯ ಗಡಿ ಮೀರಿದರೆ ದುಡ್ಡು ಮಾತ್ರವಲ್ಲ, ಕೀರ್ತಿಯೂ ದೊಡ್ಡ ಮಟ್ಟದಲ್ಲೇ ದಕ್ಕುತ್ತದೆ ಅನ್ನೋದನ್ನು ಅರಿತಿದ್ದಾರೆ. ಹೀಗಾಗಿ ವಿಜಯ್‌ ಮೊದಲ ಬಾರಿಗೆ ತೆಲುಗು ಸಿನಿಮಾದಲ್ಲಿ ಖಳನಾಗಿ ನಟಿಸುವ ಆಫರನ್ನು ಒಪ್ಪಿದ್ದಾರೆ. ಬಾಲಕೃಷ್ಣ ನಟನೆಯ ಸಿನಿಮಾದಲ್ಲಿ ವಿಜಯ್‌ ವಿಲನ್‌ ಆಗಿ ಅವತಾರವೆತ್ತಿದ್ದಾರೆ ಎನ್ನುವ ಮಾಹಿತಿ‌ ಇದೆ. ಕಳೆದ ತಿಂಗಳು ವಿಜಯ್‌ ಹೈದರಾಬಾದ್‌ಗೆ ಹೋಗಿ ಹದಿನೈದು ದಿನಗಳ ಕಾಲ  ಶೂಟಿಂಗ್‌ ಮುಗಿಸಿಕೊಂಡು ಬಂದಿದ್ದಾರೆ. ಅಧಿಕೃತವಾಗಿ ಎಲ್ಲಿಯೂ ಹೆಚ್ಚು ಮಾಹಿತಿ ನೀಡಿಲ್ಲ ಅಷ್ಟೇ.

ವಿಜಯ್‌ ಕನ್ನಡ ಚಿತ್ರರಂಗದ ಅದ್ಭುತ ನಟ. ಬೆಳ್ಳಗಿಲ್ಲದಿದ್ದರೂ ಹೀರೋ ಆಗಬಹುದು ಅಂತಾ ತೋರಿಸಿಕೊಟ್ಟ ಕನ್ನಡಿಗರ ಪ್ರೀತಿಯ ಕರೀ ಕೋಬ್ರಾ. ತೆಗಲು ಮಾತ್ರವಲ್ಲ, ವಿಶ್ವದ ಎಲ್ಲ ಭಾಷೆಗೂ ವಿಜಯ್‌ ಸಲ್ಲುವ ನಟನಾಗಲಿ… ಗುಡ್‌ ಲಕ್!‌

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ನಟಿಯರಿಗೆ ಮಕ್ಕಳನ್ನು ಹೆರುಲು ಭಯ ಯಾಕೆ?

Previous article

ರಚ್ಚು ನೋಡಲು ಕಾತರ!

Next article

You may also like

Comments

Leave a reply

Your email address will not be published.