ಕನ್ನಡ ಕೋಗಿಲೆ ಸೂಪರ್ ಸೀಸನ್ ಪ್ರಸಾರವಾಗಿ ಜನಮನಕ್ಕೆ ಲಗ್ಗೆ ಹಾಕಿರುವುದಂತೂ ಸತ್ಯದ ಸಂಗತಿ. ಅಪರೂಪದ , ಪ್ರಬುದ್ಧ , ಪ್ರತಿಭಾವಂತ ಸಂಗೀತಗಾರರೇ ಈ ವೇದಿಕೆಯಲ್ಲಿ ಹಾಡಿ, ಅಚ್ಚಕನ್ನಡದ, ಸ್ವಚ್ಛ ಕಂಠದ ಅನಾವರಣ ಮಾಡುತ್ತಾ, ಕನ್ನಡದ ಕಂಪನ್ನು, ಸಂಗೀತಲೋಕಕ್ಕೆ ಧಾರೆ ಎರೆಯುತ್ತಿದ್ದಾರೆ. ಆ ಪೈಕಿ ಹಲವರಂತೂ ಅದೆಷ್ಟು ಅದ್ಭುತವಾಗಿ ಹಾಡುತ್ತಿದ್ದಾರೆ ಎಂದರೆ ಕೇಳಲು ಎರಡು ಕಿವಿಗಳೂ ಸಾಲದು. ಇತ್ತೀಚೆಗೆ ಪ್ರಸಾರವಾದ ಪ್ರಕರಣವೊಂದರಲ್ಲಿ ಅನಂತರಾಜ್ ಮಿಸ್ತ್ರಿ ಎಂಬ ಹಾಡುಗಾರ ‘ರಂಗ, ಮೌಲಾ, ಕೃಷ್ಣ’ ಎಂದು ಒಗ್ಗೂಡಿಸಿ ಹಾಡಿದ ಸೊಗಸಾದ ಹಾಡು, ಅದೆಷ್ಟು ಅದ್ಭುತವಾಗಿತ್ತು ಎಂದರೆ, ತೀರ್ಪುಗಾರರಾದ ಅರ್ಚನಾ ಉಡುಪ ಮತ್ತು ಚಂದನ್ ಶೆಟ್ಟಿ ಅವರಿಂದ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲೂ ಸಾಧ್ಯವಾಗದೆ, ಮಂತ್ರ ಮುಗ್ಧರಂತೆ ಕುಳಿತುಬಿಟ್ಟಿದ್ದರು.
ಸಾಧುಕೋಕಿಲಾ ಮಾತ್ರ ಸ್ಥಿತಪ್ರಜ್ಞರಂತೆ ‘ಈ ಸೀಸನ್ನಿನ ಬೆಸ್ಟ್ ಸಾಂಗ್ ಇದು’ ಎಂದು ತುಂಬು ಕಂಠದಿಂದ ಶ್ಲಾಘಿಸಿದರು. ಅತ್ಯಂತ ಸೊಗಸಾಗಿ ನಡೆದ ಈ ಕಾರ್ಯಕ್ರಮವನ್ನು ಹಾಳು ಮಾಡಿದ್ದು ಮಾತ್ರ ‘ಊರಿಗೊಬ್ಬಳೇ ಪದ್ಮಾವತಿ’ ಎಂದು ಭಾವಿಸಿರುವ ನಿರೂಪಕಿ ಸಿರಿ. ತೀರ್ಪುಗಾರರಿಗಿಂತ ಹೆಚ್ಚಾಗಿ ಮಾತನಾಡುವ ಈಕೆ , ‘ತಾನೊಬ್ಬ ಶ್ರೇಷ್ಠ ನಿರೂಪಕಿ’ ಎಂದೇ ಸ್ವತಃ ಭಾವಿಸಿಬಿಟ್ಟಿದ್ದಾರೆ. ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತೆ, ಈಕೆಯ ಮಾತನ್ನು ಕೇಳಿದವರಿಗೆ, ಕೇಳಿಸಿಕೊಳ್ಳಲು ಅತ್ಯಂತ ಮುಜುಗರವಾಗುತ್ತದೆ.
“ನಮ್ಮೆಲ್ಲರ ಮನಸ್ಸನ್ನು ‘ಗೆದ್ದಿ’ , ನಮ್ಮ ವೀಕ್ಷಕರ ಮನಸ್ಸನ್ನು ‘ಗೆದ್ದಿ’ ಎಂದು ಕನ್ನಡ ನಿಘಂಟಿನಲ್ಲಿಯೇ ಇಲ್ಲದ , ತನ್ನದೇ ಆದ ಕನ್ನಡ ಎಂಬ ಪದದ ‘ಲದ್ದಿ’ ಹಾಕುವ ಈಕೆ , ‘ಕನ್ನಡ ಕೋಗಿಲೆ ಸೂಪರ್ ಸೀಸನ್ ನ ಕಾಗೆಮರಿ’ ಎಂದರೂ ತಪ್ಪಿಲ್ಲ. ಅಲ್ಲದೆ, ಅನಂತರಾಜು ಅವರನ್ನು ಹಾಡಲು ವೇದಿಕೆಗೆ ಕರೆಯುವಾಗ, ‘ ಹಾಡಿ, ಆರಾಧಿಸೋದಕ್ಕೆ ‘ಬರ್ತಾ ಇದ್ದಾನೆ’ ಅನಂತರಾಜ್ ಮಿಸ್ತ್ರಿ ಎಂದು ಕೆಟ್ಟದಾಗಿ ಏಕವಚನದ ಪ್ರಯೋಗ ಮಾಡಿ , ಹಿಸ್ಟರಿ ಬೇರೆ ಕ್ರಿಯೇಟ್ ಮಾಡುತ್ತಾರೆ. ಅಂದಹಾಗೆ ವಾಹಿನಿಯವರು ಇವರನ್ನು ಕಂಟ್ರೋಲ್ ಮಾಡುವುದೇ ಇಲ್ಲವೇ ?
– ನಕ್ಷತ್ರಿಕ