ಈ ಹಿಂದೆ ಷಡ್ಯಂತ್ರ, ರೆಡ್ ಹೀಗೆ ವಿಭಿನ್ನ ಜಾನರ್ ಚಿತ್ರಗಳನ್ನು ನಿರ್ದೇಶಿಸಿದ ರಾಜೇಶ್ ಮೂರ್ತಿ ಅವರು ಈಸಲ ಸಸ್ಪೆನ್ಸ್, ಫ್ಯಾಂಟಸಿ ಜಾನರ್ ಚಲನ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಆ ಚಿತ್ರದ ಹೆಸರು ಡಿಂಕು. ಇದು ಅವರ ನಿರ್ದೇಶನದ ಹತ್ತನೇ ಚಿತ್ರ.
ಈ ಚಿತ್ರದಲ್ಲಿ ರಾಜೇಶ್ ಮೂರ್ತಿ ಅವರ ಪುತ್ರ ಯಶಸ್ವಾ ನಾಯಕನಾಗಿ ನಟಿಸಿದ್ದಾರೆ. ಜೊತೆಗೆ ಈ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಕೂಡಾ ಬರೆದಿದ್ದಾರೆ. ಪಪ್ಪೆಟ್ ಷೋ ನಡೆಸುವ ಯುವತಿ ಹಾಗೂ ಆಕೆಯ ಪ್ರೀತಿಯ ಗೊಂಬೆಯಾದ ಡಿಂಕು ಸುತ್ತ ನಡೆಯುವ ಇಂಟರೆಸ್ಟಿಂಗ್ ಘಟನೆಗಳೇ ಈ ಚಿತ್ರದ ಪ್ರಮುಖ ಕಥಾವಸ್ತು, ಈ ಚಿತ್ರದಲ್ಲಿ ಯುವಪ್ರತಿಭೆ ಯಶಸ್ವಾ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಶಸ್ವಾ ಈಗಾಗಲೇ ಒಂದು ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ. ಅಲ್ಲದೆ ಯುವನಟಿ ಸನ್ನಿಧಿ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ.
ಚಿತ್ರದಲ್ಲಿ ಗೊಂಬೆಯ ಹೆಸರೇ ಡಿಂಕು. ಅದು ಮಾತಾಡುತ್ತದೆ. ಹಾಗಂತ ಇದೊಂದು ಹಾರರ್ ಚಿತ್ರವಲ್ಲ. ಸಸ್ಪೆನ್ಸ್ ಜೊತೆಗೆ ಕಾಮಿಡಿಯೂ ಚಿತ್ರದಲ್ಲಿದೆ.
ಡಿಂಕು ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರದ ಎಡಿಟಿಂಗ್ ಕಾರ್ಯ ಮುಗಿದು ಡಬ್ಬಿಂಗ್ ಕೊನೆಯ ಹಂತದಲ್ಲಿದೆ. ಕನ್ನಡದ ಹಿರಿಯ ನಿರ್ಮಾಪಕ ಹಾಗೂ ಛಾಯಾಗ್ರಾಹಕರೂ ಆಗಿದ್ದ ಹೆಚ್.ಎಂ.ಕೆ. ಮೂರ್ತಿ ಅವರ ಮೊಮ್ಮಗನೂ ಆದ ಯಶಸ್ವಾ ಅವರು ಈಗಾಗಲೇ ಅಗ್ನಿಲೋಕ ಎಂಬ ಚಿತ್ರದಲ್ಲಿ ನಟಿಸೋ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಡಿಂಕು ಅವರ ಅಭಿನಯದ ಎರಡನೇ ಚಿತ್ರ. ನೆಲ ಮಹೇಶ್ ಹಾಗೂ ನೇವಿ ಮಂಜು ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ 4 ಫೈಟ್ಸ್ ಇದ್ದು ಗಿರೀಶ್ ಎ.ಪಿ. ಅವರು ಕಂಪೋಜ್ ಮಾಡುತ್ತಿದ್ದಾರೆ. ಚಿತ್ರದ ಎರಡು ಹಾಡುಗಳಿಗೆ ನಿತೀಶ್ ಕುಮಾರ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ಬರುವ ಸೆಪ್ಟೆಂಬರ್ ವೇಳೆಗೆ ಡಿಂಕು ಚಿತ್ರವನ್ನು ರಿಲೀಸ್ ಮಾಡೋ ಯೋಚನೆಯಿದೆ ಎಂದು ನಿರ್ದೇಶಕರಾದ ರಾಜೇಶ್ ಮೂರ್ತಿ ಅವರು ತಿಳಿಸಿದ್ದಾರೆ.
No Comment! Be the first one.