ರಘುರಾಮ್ ನಿರ್ದೇಶನದ ಮಿಸ್ಸಿಂಗ್ ಬಾಯ್ ಚಿತ್ರ ಟ್ರೈಲರ್ ಮತ್ತೆ ಸದ್ದು ಮಾಡಿದೆ. ಈಗ ಬಿಡುಗಡೆಗೊಂಡಿರೋ ಟ್ರೈಲರ್ ತುಂಬಾ ಆವರಿಸಿಕೊಂಡ ತಬ್ಬಲಿತನ, ಕರುಳ ಸಂಕಟದ ಸೂಕ್ಷ್ಮ ಕಂಪನ ನೋಡಿದ ಪ್ರತಿಯೊಬ್ಬರನ್ನೂ ಆವರಿಸಿಕೊಳ್ಳುವಂತಿದೆ. ಈ ಮೂಲಕ ಮಿಸ್ಸಿಂಗ್ ಬಾಯ್ ಎಂಬ ರಘುರಾಮ್ ಕನಸಿನ ಕೂಸು ತಮ್ಮದೆಂಬ ಭಾವವೊಂದು ಪ್ರೇಕ್ಷಕರೆದೆಗೂ ದಾಟಿಕೊಂಡಿದೆ.
ಮಿಸ್ಸಿಂಗ್ ಬಾಯ್ ಅನ್ನೋದು ವರ್ಷಾಂತರಗಳ ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ನಡೆದಿದ್ದ ನೈಜ ಘಟನೆಯಾಧಾರಿತ ಸಿನಿಮಾ ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಹೊರ ಬಂದಿರೋ ಟ್ರೈಲರ್ ಇಡೀ ಚಿತ್ರದ ಒಟ್ಟಾರೆ ಸಾರವನ್ನು ಹಸಿಯಾಗಿಗೇ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶ ಕಂಡಿದೆ. ಕೊಂಚ ತಡವಾದರೂ, ಈ ಹಾದಿಯಲ್ಲಿ ಒಂದಷ್ಟು ತೊಳಲಾಟ ಅನುಭವಿಸಿದರೂ ರಘುರಾಮ್ ಒಂದೊಳ್ಳೆ ಚಿತ್ರವನ್ನೇ ಮಾಡಿದ್ದಾರೆಂಬುದನ್ನು ಈ ಟ್ರೈಲರ್ ಸಾಕ್ಷೀಕರಿಸುವಂತಿದೆ.
ಹುಬ್ಬಳ್ಳಿ ಸೀಮೆಯಲ್ಲಿ ಆಟಾಡುತ್ತಲೇ ಟ್ರೈನು ಹತ್ತಿ ಕಳೆದು ಹೋದ ಹುಡುಗನೊಬ್ಬನ ಮನ ಮಿಡಿಯುವ ಕಥೆ ಮಿಸ್ಸಿಂಗ್ ಬಾಯ್ ಚಿತ್ರದ್ದು. ಹೀಗೆ ಕಡಿದು ಹೋದ ಬಂಧ ಅದೆಷ್ಟೋ ವರ್ಷಗಳಾದ ಮೇಲೂ ಕಾಡುತ್ತಾ, ಅದೆಷ್ಟೋ ಮೈಲಿ ದೂರದೂರಿನಿಂದ ಕರುಳ ಬಳ್ಳಿ ಮತ್ತೆಬೆಸೆದುಕೊಳ್ಳುತ್ತಾ ಎಂಬುದರ ಸುತ್ತ ಮಿಸ್ಸಿಂಗ್ ಬಾಯ್ ಚಿತ್ರದ ಭಾವುಕ ಯಾನ ನಡೆಯುತ್ತೆ. ಇದೀಗ ಬಿಡುಗಡೆಯಾಗಿರೋ ಕೆಲವೇ ಸೆಕೆಂಡುಗಳ ಈ ಟ್ರೈಲರ್‌ನಲ್ಲಿ ರಘುರಾಮ್ ಅಂಥಾ ಆರ್ಧ್ರ ಭಾವನೆಗಳನ್ನೆಲ್ಲ ಪರಿಣಾಮಕಾರಿಯಾಗಿಯೇ ಹಿಡಿದಿಟ್ಟಿದ್ದಾರೆ. ಇದರಿಂದಾಗಿಯೇ ಮಿಸ್ಸಿಂಗ್ ಬಾಯ್ ಮೇಲೆ ಮತ್ತಷ್ಟು ಪ್ರೇಕ್ಷಕರ ಒಲವು ಮೂಡಿಕೊಂಡಿದೆ.ಮನಮಿಡಿಯುವಂಥಾ, ಎಲ್ಲರಿಗೂ ತಮ್ಮದೇ ಅನ್ನಿಸುವ ದೃಷ್ಯ ಕಟ್ಟೋದರಲ್ಲಿ ರಘುರಾಮ್ ಸಿದ್ಧಹಸ್ತರು. ಅಂಥಾ ರಘುರಾಮ್ ಭಾವನೆಗಳ ತೊಳಲಾಟದ, ಕರುಳ ಸಂಕಟದ ಈ ಕಥಾನಕವನ್ನ ಯಶಸ್ವಿಯಾಗಿ ದೃಷ್ಯೀಕರಿಸಿರುತ್ತಾರೆಂಬ ನಂಬಿಕೆ ಎಲ್ಲರಲ್ಲಿಯೂ ಇತ್ತು. ಅದನ್ನು ಈ ಟ್ರೈಲರ್ ಮತ್ತಷ್ಟು ಬಲಗೊಳಿಸಿದೆ.
No Comment! Be the first one.