ಕಳೆದ ವಾರ ರಿಲೀಸಾದ ಬಡವ ರಾಸ್ಕಲ್ ಸಿನಿಮಾ 2021 ರಲ್ಲಿ ಬಿಡುಗಡೆಯಾದ ಕನ್ನಡದ ನೂರನೇ ಸಿನಿಮಾ. ಈ ವರ್ಷ ಸರಿ ಸುಮಾರು ನೂರಾ ಐದು ಕನ್ನಡ ಸಿನಿಮಾಗಳು ತೆರೆಗೆ ಬಂದಿವೆ. ಕೋವಿಡ್ ಸೃಷ್ಟಿಸಿದ ಕೋಲಾಹಲದಲ್ಲಿ ಇಷ್ಟು ಸಿನಿಮಾಗಳು ತೆರೆಗೆ ಬಂದಿರೋದೇ ಹೆಚ್ಚು. ಪುನೀತ್ ರಾಜ್ ಕುಮಾರ್ ರಂಥಾ ಸೂಪರ್ ಸ್ಟಾರ್ ನಟನ ಅಗಲಿಕೆ ಕೂಡಾ ಕನ್ನಡ ಚಿತ್ರರಂಗವನ್ನು ಬಡವಾಗಿಸಿದೆ. ಇಷ್ಟೂ ಸಿನಿಮಾಗಳು ಥೇಟರಿನಲ್ಲೇನು ಬಂದಿಲ್ಲ. ಹಲವು ಚಿತ್ರಗಳು ನೇರವಾಗಿ ಓಟಿಟಿಯಲ್ಲಿ ರಿಲೀಸಾಗಿವೆ.
ರಾಘವೇಂದ್ರ ರಾಜ್ ಕುಮಾರ್ ನಟನೆಯ ರಾಜತಂತ್ರ ಸಿನಿಮಾ 2021ರಲ್ಲಿ ಬಿಡುಗಡೆಯಾದ ಮೊದಲ ಕನ್ನ ಸಿನಿಮಾ. ರಿಲೀಸಾಗಿರುವ ನೂರೂ ಚಿಲ್ಲರೆ ಚಿತ್ರಗಳಲ್ಲಿ ಕಾಸು ಮಾಡಿರೋದು ಕೆಲವೇ ಸಿನಿಮಾಗಳು ಮಾತ್ರ. ರಾಮಾರ್ಜುನ ಥೇಟರಲ್ಲಿ ಅಂಥಾ ಕಲೆಕ್ಷನ್ ಮಾಡದಿದ್ದರೂ, ಉತ್ತಮ ವ್ಯಾಪಾರ ಮಾಡಿದೆ. ಟಿವಿ, ಡಬ್ಬಿಂಗ್, ಡಿಜಿಟಲ್ ರೈಟ್ಸುಗಳಲ್ಲೇ ಹಾಕಿದ ಬಂಡವಾಳವನ್ನು ವಾಪಾಸು ಪಡೆದಿತ್ತು. ಪ್ರಜ್ವಲ್ ನಟನೆಯ ಇನ್ಸ್ ಪೆಕ್ಟರ್ ವಿಕ್ರಂಗೆ ಹಾಕಿದ ಬಂಡವಾಳ, ಬಡ್ಡೀ ಸಾಲದ ಕಾರಣ ವ್ಯಾಪಾರವಾದರೂ ಲಾಭವಾಗಲಿಲ್ಲ. ದರ್ಶನ್ ಅತಿಥಿ ಪಾತ್ರದಲ್ಲಿದ್ದಿದ್ದಕ್ಕೆ ತೀರಾ ದೊಡ್ಡ ನಷ್ಟದಿಂದ ಇನ್ಸ್ ಪೆಕ್ಟರ್ ವಿಕ್ರಂ ಪಾರಾದ. ಮಂಗಳವಾರ ರಜಾ ದಿನ ಎನ್ನುವ ಕಾಮಿಡಿ ಸಿನಿಮಾ ಕಡಿಮೆ ಬಜೆಟ್ಟಲ್ಲಿ ತಯಾರಾಗಿ, ತಕ್ಕ ಮಟ್ಟಿಗೆ ಲಾಭವನ್ನೂ ಮಾಡಿತು. ಈ ವರ್ಷದ ದೊಡ್ಡ ಫೇಲ್ಯೂರ್ ಪೊಗರು ಸಿನಿಮಾದ್ದು. ಕಳೆದ ನಾಲ್ಕೂವರೆ ವರ್ಷಗಳ ದೀರ್ಘ ಸಮಯದಲ್ಲಿ ನಿರ್ಮಾಣಗೊಂಡಿದ್ದ ಪೊಗರು ಭೀಕರವಾಗಿ ಸೋಲನುಭವಿಸಿತು. ಧ್ರುವಾ ಸರ್ಜಾ, ರಶ್ಮಿಕಾ ಮಂದಣ್ಣ ಜೋಡಿಯ ಈ ಸಿನಿಮಾದ ಕಥೆಯೇ ಖರಾಬಾಗಿದ್ದಿದ್ದರಿಂದ ಪ್ರೇಕ್ಷಕರು ಸ್ವೀಕರಿಸಲಿಲ್ಲ.
ಆದರೆ ಹೀರೋಗಿರುವ ಮಾರ್ಕೆಟ್ಟಿಂದ ಒಳ್ಳೆ ವ್ಯಾಪಾರ-ವಹಿವಾಟು ನಡೆಸಿ ಮೂವತ್ತು ಕೋಟಿ ಇನ್ವೆಸ್ಟ್ ಮಾಡಿದ್ದ ನಿರ್ಮಾಪಕರಿಗೆ ಬಡ್ಡಿಬಾಸೆಗಳೆಲ್ಲಾ ಕಳೆದು ಒಂದು ಕೋಟಿ ರುಪಾಯಿಗಳ ಸಣ್ಣ ಲಾಭ ಕೈ ಸೇರಿತು. ರಿಷಬ್ ಶೆಟ್ಟಿಯ ಹೀರೋ ಮತ್ತು ಗರುಡ ಗಮನ ವೃಷಭ ವಾಹನ ಸಿನಿಮಾಗಳು ಬಂಡವಾಳ ಕಡಿಮೆಯಾದರೂ ನಾಲ್ಕು ಪಟ್ಟು ಲಾಭ ಮಾಡಿಕೊಂಡಿವೆ. ದರ್ಶನ್ ಅವರ ರಾಬರ್ಟ್ ಕೂಡಾ ಉತ್ತಮ ಪ್ರಾಫಿಟ್ ಮಾಡಿದೆ. ಯುವರತ್ನ, ಕೋಟಿಗೊಬ್ಬ-೩, ಭಜರಂಗಿ೨, ಮದಗಜ ಸಿನಿಮಾಗಳಲ್ಲಿ ಸ್ಟಾರ್ ನಟರಿದ್ದರೂ ಶೋಚನೀಯ ಸೋಲನುಭವಿಸಿದ್ದನ್ನು ಒಪ್ಪಲೇಬೇಕು. ಈ ಸಿನಿಮಾಗಳಿಂದ ಹಾಕಿದ ಬಂಡವಾಳ ವಾಪಾಸು ಬಂದು ನಿರ್ಮಾಪಕರು ಸೇಫ್ ಆಗಿರಬಹುದು. ಆದರೆ, ನಿರ್ಮಾಪಕರಿಗೆ ಹಣ ಬಂದೇಟಿಗೆ ಅದು ಗೆಲುವಾಗುವುದಿಲ್ಲವಲ್ಲಾ? ಈ ಚಿತ್ರಗಳನ್ನು ಖರೀದಿಸಿದ್ದ ವಿತರಕರು ಕೈ ಸುಟ್ಟುಕೊಳ್ಳದೇ, ಲಾಭ ಮಾಡಿದಾಗ ಮಾತ್ರ ಅದು ಪರಿಪೂರ್ಣ ಯಶಸ್ವಿಯಾಗುತ್ತದೆ. ನಿಜಕ್ಕೂ ಹಿಟ್ ಸಿನಿಮಾ ಅನ್ನಿಸಿಕೊಂಡರೆ, ರಿಲೀಸಾದ ವಾರದೊಪ್ಪತ್ತಿಗೇ ಅದು ಓಟಿಟಿಯಲ್ಲಿ ಕಾಣಿಸಿಕೊಳ್ಳಲು ಸಾಧ್ಯವೇ ಇಲ್ಲ. ಥೇಟರಿನಲ್ಲಿ ಲಾಭ ಮಾಡುತ್ತಿರುವ ಸಿನಿಮಾವನ್ನು ಯಾವುದೇ ಕಾರಣಕ್ಕೂ ಓಟಿಟಿಯಲ್ಲಿ ಪ್ರದರ್ಶಿಸುವಂತಿಲ್ಲ. ಇವೆಲ್ಲಾ ಮೊದಲೇ ಅಗ್ರಿಮೆಂಟ್ ಕೂಡಾ ಆಗಿರುತ್ತದೆ.
ಸಂಚಾರಿ ವಿಜಯ್ ಅಭಿನಯದ ಪುಕ್ಸಟ್ಟೆ ಲೈಫು ಸದಭಿರುಚಿಯ ಸಿನಿಮಾ ಅನ್ನಿಸಿಕೊಂಡಿದೆ. ರವಿಚಂದ್ರನ್ ಮಗ ಮನೋರಂಜನ್ ನಟನೆಯ ಮುಗಿಲ್ ಪೇಟೆ ಬಂದಿದ್ದು, ಹೋಗಿದ್ದು ಕೂಡಾ ಗೊತ್ತಾಗಿಲ್ಲ. ದೃಶ್ಯ-೨, 100, ಪ್ರೇಮಂ ಪೂಜ್ಯಂ ಮುಂತಾದ ಸಿನಿಮಾಗಳು ಸರಾಸರಿ ಲಾಭ ಗಳಿಸಿವೆ. ವರ್ಷದ ಕೊನೆಗೆ ಬಿಡುಗಡೆಯಾಗಿರುವ ನಿಖಿಲ್ ಕುಮಾರ್ ಅಭಿನಯದ ರೈಡರ್, ಬಡವ ರಾಸ್ಕಲ್, ಲವ್ ಯೂ ರಚ್ಚು ಮತ್ತು ಹುಟ್ಟುಹಬ್ಬದ ಶುಭಾಶಯಗಳು ಕೂಡಾ ಹಾಕಿದ ಬಂಡವಾಳಕ್ಕೆ ಮೋಸ ಮಾಡಿಲ್ಲ.
ಓಟಿಟಿಯಲ್ಲಿ ರಿಲೀಸಾದ ರತ್ನನ್ ಪ್ರಪಂಚ, ಇಕ್ಕಟ್, ಕನ್ನಡಿಗ ಸಿನಿಮಾಗಳು ತೀರಾ ಅದ್ಭುತ ಅನ್ನಿಸಿಕೊಳ್ಳದಿದ್ದರೂ ಪರವಾಗಿಲ್ಲ ಎನ್ನುವ ಮಟ್ಟಕ್ಕಿದ್ದವು. ಸಿನಿಮಾಗಳ ನಡುವೆ ಅತಿ ಹೆಚ್ಚು ಹಣ ಮಾಡಿದ ಏಕೈಕ ಸಿನಿಮಾ ಸಲಗ. ದುನಿಯಾ ವಿಜಯ್ ಅವರಿಗೆ ಈ ಹಿಂದಿನ ವರ್ಷಗಳಲ್ಲಿ ಕುಸಿದಿದ್ದ ಮಾರುಕಟ್ಟೆ ಸಲಗದಿಂದ ಮತ್ತೆ ಮೇಲೆದ್ದಿದೆ. ಈ ವರ್ಷದ ಸೂಪರ್ ಸ್ಟಾರ್ ಆಗಿ ಎದ್ದು ನಿಲ್ಲಲು ವಿಜಿಗೆ ಸಲಗ ಸಾಥ್ ನೀಡಿದೆ. ನಾಯಕಿಯರಲ್ಲಿ ರಚಿತಾ ರಾಮ್ ಮತ್ತು ಅದಿತಿ ಪ್ರಭುದೇವ ಪರಸ್ಪರ ಪೈಪೋಟಿ ನೀಡಿದ್ದಾರೆ. ಅಂಕಿಗಳ ಲೆಕ್ಕದಲ್ಲಿ ಅದಿತಿ ನಟಿಸಿದ ಸಿನಿಮಾಗಳ ಸಂಖ್ಯೆ ಹೆಚ್ಚು. ಬಡವ ರಾಸ್ಕಲ್ ಸಿನಿಮಾದ ನಿರ್ದೇಶಕ ಶಂಕರ್ ಗುರು, ಸಲಗದಿಂದ ನಟ ವಿಜಯ್ ನಿರ್ದೇಶಕರಾಗಿ ಹೆಸರು ಮಾಡಿಕೊಂಡಿದ್ದಾರೆ. ಸಿಂಪಲ್ ಸುನಿ, ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್ನಿನ ಸಖತ್ ಸಿನಿಮಾ ಪ್ರೇಕ್ಷಕರನ್ನು ಹೆಚ್ಚು ರಂಜಿಸಿದೆ ಮತ್ತು ಗಣೇಶ್ ಅವರಿಗೆ ಗೆಲುವಿನ ಟಾನಿಕ್ ನೀಡಿದೆ.
ಲಾಕ್ ಡೌನ್, ಫಿಫ್ಟಿ ಪರ್ಸೆಂಟ್, ಕೋವಿಡ್ ನಿಯಮಾವಳಿಗಳ ನಡುವೆ ನೂರಕ್ಕೂ ಅಧಿಕ ಸಿನಿಮಾಗಳು ಬಿಡುಗಡೆಯಾಗಿರೋದೇ ಕನ್ನಡ ಚಿತ್ರರಂಗದ ಹೆಚ್ಚುಗಾರಿಕೆ. ಪುಣ್ಯಕ್ಕೆ ಒಮಿಕ್ರಾನುಗಳೆಲ್ಲಾ ಅಟಕಾಯಿಸಿಕೊಳ್ಳದೇ, ಕನ್ನಡ ಚಿತ್ರರಂಗ ಸಹಜ ಸ್ಥಿತಿಗೆ ಮರಳಿದರೆ 2022ರಲ್ಲಿ ಆಶಾದಾಯಕ ವಾತಾವರಣ ನಿರ್ಮಾಣವಾಗಲಿದೆ….
Comments