ಇಲ್ಲಿದೆ ಲಿಂಕ್
https://m.facebook.com/story.php?story_fbid=2189506438005734&id=1694769344146115
ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಬಂದವರು ಕನ್ನಡ ಕಲಿಯುವುದಿಲ್ಲ… ಹೀಗೊಂದು ಆರೋಪಕ್ಕೆ ಬಹಳಷ್ಟು ವಯಸಾಗಿದೆ. ಆದರೆ ಇದರಲ್ಲಿ ನಮ್ಮ ಪಾಲೆಷ್ಟು ಅಂತ ಮನಸು ಮುಟ್ಟಿಕೊಂಡು ಕೇಳಿನೋಡುವ ವ್ಯವಧಾನ ಕನ್ನಡಿಗರಾದ ನಮಗೆಲ್ಲ ಇರುವುದಿಲ್ಲ. ಆದರೀಗ ಫೇಸ್ಬುಕ್ಕಿನಲ್ಲಿ ವೈರಲ್ ಆಗಿರೋ ಕಿರುಚಿತ್ರವೊಂದು ಅಂಥಾ ಸಂದರ್ಭ ಸೃಷ್ಟಿಸಿ ಬಿಟ್ಟಿದೆ.
`ಕನ್ನಡ ಸಾಮಾನ್ಯವಲ್ಲ, ವಿಶೇಷ. ಕಲಿಸುವ ಅಗತ್ಯವಿಲ್ಲ ಕಲಿಯುತ್ತಾರೆ’ ಎಂಬ ಒಕ್ಕಣೆಯಿರುವ ಈ ಕಿರು ಚಿತ್ರ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಬಿಡುಗಡೆಯಾದ ತುಸು ಸಮಯದಲ್ಲಿಯೇ ಹತ್ತು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆಯುವ ಮೂಲಕ ದಾಖಲೆಯನ್ನೇ ಸೃಷ್ಟಿಸಿದೆ. ಇದು ಬರೀ ಅಂಕಿಸಂಖ್ಯೆಗಳ ದಾಖಲೆಗಷ್ಟೇ ಸೀಮಿತವಾಗಿದ್ದರೆ ಜನರಿಂದ ಈ ಥರದ ಪ್ರತಿಕ್ರಿಯೆ ಬರುತ್ತಿರಲಿಲ್ಲ. ಅದು ಕನ್ನಡಿಗರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವಂತಿದೆ. ಕನ್ನಡವನ್ನು ಬೇರೆ ರಾಜ್ಯದವರೂ ಕಲಿಯುವಂತೆ ಮಾಡೋದು ಹೇಗೆಂಬ ಕಾರ್ಯಗತ ಉತ್ತರವೂ ಇದರಲ್ಲಿದೆ!
ಪರ ರಾಜ್ಯಗಳಿಂದ ಬಂದವರು ಕನ್ನಡ ಕಲಿಯುವುದಿಲ್ಲ ಅಂತ ಬಾಯಿ ಬಡಿದುಕೊಂಡರೆ, ಬಾಷಣ ಬಜಾಯಿಸಿದರೆ ಆಗೋ ಪರಿಣಾಮ ಏನೂ ಇಲ್ಲ. ಅದಕ್ಕೆ ಕನ್ನಡಿಗರ ಮನಸ್ಥಿತಿ ಬದಲಾಗಬೇಕು. ನಿತ್ಯ ವ್ಯವಹಾರ ನಡೆಯೋ ಜಾಗದಲ್ಲಿ ಮನ್ವಂತರವಾಗಬೇಕೆಂಬ ವಿಚಾರವನ್ನು ಈ ಕಿರುಚಿತ್ರ ಅತ್ಯಂತ ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸಿದೆ.
ಒಂದು ಹಾಲಿನ ಬೂತಿನ ವಾತಾವರಣದಲ್ಲಿ ಇದನ್ನು ಚಿತ್ರೀಕರಿಸಲಾಗಿದೆ. ಪರ ರಾಜ್ಯಗಳ ಗ್ರಾಹಕರು ಬಂದು ಅವರವರ ಭಾಷೆಯಲ್ಲಿ ಮಾತಾಡಿದರೂ ಕನ್ನಡದಲ್ಲಿಯೇ ವ್ಯವಹರಿಸುತ್ತಾ, ಅವರೂ ಕನ್ನಡ ಮಾತಾಡಲಾರಂಭಿಸಿದಾಗ ಉಚಿತವಾಗಿಯೇ ಹಾಲು ಕೊಟ್ಟು ಪ್ರೋತ್ಸಾಹಿಸೋ ಅಂಗಡಿ ಮಾಲೀಕ ಕನ್ನಡಿಗರೆಲ್ಲರಿಗೂ ಮಾದರಿಯಾಗುತ್ತಾನೆ. ಪರಭಾಷೆಯವರು ಅವರ ಭಾಷೆಯಲ್ಲಿಯೇ ಮಾತಾಡಿದರೂ ಪ್ರತಿಯಾಗಿ ಕನ್ನಡದಲ್ಲೇ ಮಾತಾಡಿದರೆ ಕನ್ನಡ ಕಲಿತೇ ಕಲಿಯುತ್ತಾರೆಂಬ ಸರಳ ಸೂತ್ರವನ್ನು ಈ ಕಿರು ಚಿತ್ರ ಪರಿಣಾಮಕಾರಿಯಾಗಿ ಜಾಹೀರು ಮಾಡಿದೆ. ರೂಪೇಶ್ ರಾಜಣ್ಣ ಎಂಬುವವರು ಈ ವಿಡಿಯೋವನ್ನು ಶೇರ್ ಮಾಡಿದ್ದರು. ಅದೀಗ ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿದೆ.
ಬೇರೆ ಭಾಷೆಯಲ್ಲಿ ದಾರಿ ಕೇಳಿದರೂ ಅವರ ಭಾಷೆಯಲ್ಲೇ ಹೇಳಿ ಬಿಡುವ ಔದಾರ್ಯ ಕನ್ನಡಿಗರದ್ದು. ಅಂಗಡಿಗಳಂಥ ಪ್ರದೇಶಗಳಲ್ಲಿ ವ್ಯಾಪಾರಿ ಬುದ್ಧಿಯೂ ಪರಭಾಷಿಕರು ಕನ್ನಡ ಕಲಿಯದಂತೆ ತಡೆಯುತ್ತಿವೆ. ಇಂಥಾ ಕೊರತೆಗಳನ್ನೆಲ್ಲ ನೀಗಿಸಿ ಕನ್ನಡವನ್ನು ಸಾರ್ವತ್ರಿಕಗೊಳಿಸುವ ಪ್ರಯತ್ನವಾಗಿ ಈ ಕಿರು ಚಿತ್ರ ಗಮನ ಸೆಳೆಯುತ್ತದೆ. ಆದ್ದರಿಂದಲೇ ಇದಕ್ಕೆ ಭಾರೀ ಪ್ರತಿಕ್ರಿಯೆಗಳೂ ಸಿಕ್ಕಿವೆ. ಶ್ರೀನಿವಾಸ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಕಿರುತ್ರಕ್ಕೆ ಅಭಿಮಾನ್ ಹಾಡಿದ್ದಾರೆ. ಅಭಿಷೇಕ್ ರಾಯ್ ಸಂಗೀತ ನೀಡಿದ್ದಾರೆ, ರಾಕೇಶ್ ರಾಘವನ್ ಸಂಭಾಷಣೆ ಬರೆದಿದ್ದಾರೆ. ಪ್ರಧಾನ ಪಾತ್ರದಲ್ಲಿ ಅಶೋಕ್ ರಾಯ್ ಅಭಿನಯಿಸಿದ್ದು, ಅಭಿಮನ್ ರಾಯ್ ಅವರ ಪುತ್ರ ಮಾ. ಸೋನು ತೇಜಸರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಅಭಿಮನ್ ರಾಯ್ ಅವರ ಕುಟುಂಬದ ಬಹುತೇಕ ಸದಸ್ಯರು ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಮಗ ಸೋನು ತೇಜಸ್ ಪಾಲ್ಗೊಂಡಿದ್ದ ಅಲ್ಬಂಗಳೆಲ್ಲಾ ಸಾಕಷ್ಟು ಹೆಸರು ಮಾಡುತ್ತಿವೆ. ಈಗ ಅಶೋಕ್ ರಾಯ್ ಕೂಡಾ ಕನ್ನಡದ ಕುರಿತಾದ ಕಿರುಚಿತ್ರದ ಮೂಲಕ ಸೌಂಡು ಮಾಡುತ್ತದ್ದಾರೆ. #
Comments