ಗುಬ್ಬಿ ವೀರಣ್ಣ – ಜಯಮ್ಮ, ಕೆಂಪರಾಜ ಅರಸ್ – ಭಾನುಮತಿ, ಆರ್.ನಾಗೇಂದ್ರರಾವ್ – ಲಕ್ಷ್ಮೀದೇವಿ… ಕನ್ನಡ ಚಿತ್ರರಂಗದ ಆರಂಭದ ದಿನಗಳ ಪ್ರೀತಿಯ ಜೋಡಿಗಳಿವು. ಕೌಟುಂಬಿಕ, ಸಾಮಾಜಿಕ ಕಥೆಗಳೇ ಪಧಾನವಾಗಿದ್ದ ಕಾಲ. ಗಂಡು-ಹೆಣ್ಣಿನ ಪ್ರೀತಿ ಹೊಸಿಲು ದಾಟಿ ಉದ್ಯಾನಕ್ಕೆ ಕಾಲಿಟ್ಟಿರಲಿಲ್ಲ. ೬೦ರ ದಶಕದ ಹೊತ್ತಿಗೆ ಪ್ರೀತಿಯೇ ಪ್ರಧಾನವಾದ ಕೆಲವೇ ಚಿತ್ರಗಳು ಕಾಣಿಸಿದವು. ಕಲ್ಯಾಣ್ಕುಮಾರ್ ಮತ್ತು ಭಾರತಿ ಅಭಿನಯಿಸಿದ್ದ ‘ಲವ್ ಇನ್ ಬ್ಯಾಂಗಳೂರ್’ ಪ್ರೇರಣೆಯಿಂದ ಹತ್ತಾರು ಚಿತ್ರಗಳು ತಯಾರಾದವು. ಕಲ್ಯಾಣ್ಕುಮಾರ್ರ ಅತಿ ಭಾವುಕ ನಟನೆ, ಪ್ರೀತಿಯ ಸೆಳೆತಕ್ಕೊಂದು ಉಪಮೆಯಂತೆ ಗೋಚರಿಸಿತ್ತು. ಮುಂದಿನ ದಿನಗಳಲ್ಲಿ ರಾಜ್ಕುಮಾರ್ ಜೊತೆಗೆ ಲೀಲಾವತಿ, ಭಾರತಿ ನಟಿಸಿದ ಚಿತ್ರಗಳು ಗಮನ ಸೆಳೆದವು.
೭೦ರ ದಶಕದ ‘ಎರಡು ಕನಸು’, ‘ನಾ ನಿನ್ನ ಮರೆಯಲಾರೆ’, ‘ಒಲವು ಗೆಲವು’ ಸೇರಿದಂತೆ ಹತ್ತಾರು ಲವ್ಸ್ಟೋರಿಗಳು ಹೊಸತೊಂದು ಹಾದಿ ಸೃಷ್ಟಿಸಿಕೊಟ್ಟವು. ೮೦ರ ದಶಕ, ಸ್ಯಾಂಡಲ್ವುಡ್ನ ಲವ್ ಸಿನಿಮಾಗಳಿಗೆ ಮಹತ್ವದ್ದು. ಇಲ್ಲಿನ ಬಹುತೇಕ ಚಿತ್ರಗಳ ಯಶಸ್ಸಿಗೆ ಕಾರಣವಾಗಿದ್ದು ಉತ್ತಮ ಸಂಗೀತ ಸಂಯೋಜನೆ. ‘ಬೆಸುಗೆ’, ‘ಬಂಧನ’, ‘ಅರುಣರಾಗ’, ‘ಆನಂದ್’, ‘ಗೀತಾ’ ಕೆಲವು ಉದಾಹರಣೆ. ರವಿಚಂದ್ರನ್ – ಹಂಸಲೇಖ ಜೋಡಿಯ ‘ಪ್ರೇಮಲೋಕ’ ಚಿತ್ರದೊಂದಿಗೆ ಲವ್ ಸಿನಿಮಾಗೆ ಫ್ಯಾಂಟಸಿಯ ಮೆರುಗು ಸಿಕ್ಕಿತು.
೯೦ರ ದಶಕದ ಆರಂಭದಲ್ಲಿ ತೆರೆಗೆ ಬಂದ ‘ಚೈತ್ರದ ಪ್ರೇಮಾಂಜಲಿ’ ಟ್ರೆಂಡ್ ಸೆಟರ್ ಲವ್ಸ್ಟೋರಿ. ಇದೇ ವರ್ಷ ತೆರೆಕಂಡ ‘ಮೈಸೂರು ಮಲ್ಲಿಗೆ’, ಹಾಡುಗಳಲ್ಲೇ ಪ್ರೀತಿಯ ಕಥೆ ಹೇಳಿದ ಮಧುರ ಸಿನಿಮಾ. ೯೦ರ ಕೊನೆಯಲ್ಲಿ ತೆರೆಕಂಡ ‘ನಮ್ಮೂರ ಮಂದಾರ ಹೂವೆ’, ‘ಚಂದ್ರಮುಖಿ ಪ್ರಾಣಸಖಿ’ ತ್ರಿಕೋನ ಪ್ರೇಮಕ್ಕೆ ಪೀಠಿಗೆ ಹಾಕಿದವು. ೨೦೦೦ರ ನಂತರದ ಲವ್ಸಿನಿಮಾಗಳಿಗೆ ಅದ್ಧೂರಿತನ ಮೈಗೂಡಿತು. ಆರಂಭದಲ್ಲೇ ಪುನೀತ್ (ಅಪ್ಪು) ಸುದೀಪ್(ಸ್ಪರ್ಶ) ಯಶಸ್ಸು ಕಂಡರು. ಆನಂತರದ ಸೂಪರ್ಹಿಟ್ ಲವ್ ಸಿನಿಮಾಗಳಲ್ಲಿ ಗೆದ್ದದ್ದು ನಿರೂಪಣೆ. ‘ನೆನಪಿರಲಿ’, ‘ಅಮೃತಧಾರೆ’, ‘ಮುಂಗಾರು ಮಳೆ’, ‘ಕೃಷ್ಣನ್ ಲವ್ ಸ್ಟೋರಿ’ ಕೆಲವು ಉದಾಹರಣೆ.
ಕನ್ನಡದ ಕೆಲವು ಜನಪ್ರಿಯ ಲವ್ ಸಿನಿಮಾಗಳು : ಲವ್ ಇನ್ ಬ್ಯಾಂಗಳೂರ್, ಎರಡು ಕನಸು, ನಾ ನಿನ್ನ ಮರೆಯಲಾರೆ, ಒಲವು ಗೆಲವು, ಬೆಸುಗೆ, ನಾಗರಹಾವು, ಪ್ರೇಮಲೋಕ, ಬಂಧನ, ಶ್ರೀಗಂಧ, ಹೊಂಬಿಸಿಲು, ಒಲವಿನ ಉಡುಗೊರೆ, ಅರುಣರಾಗ, ಗೀತಾ, ಆನಂದ್, ರಥಸಪ್ತಮಿ, ಮನಮೆಚ್ಚಿದ ಹುಡುಗಿ, ಚೈತ್ರದ ಪ್ರೇಮಾಂಜಲಿ, ಹೃದಯ ಹಾಡಿತು, ಮೈಸೂರು ಮಲ್ಲಿಗೆ, ಬೆಳ್ಳಿ ಕಾಲುಂಗರ, ಚಂದ್ರಮುಖಿ ಪ್ರಾಣಸಖಿ, ಜನುಮದ ಜೋಡಿ, ನಮ್ಮೂರ ಮಂದಾರ ಹೂವೆ, ಅಪ್ಪು, ಸ್ಪರ್ಶ, ನೆನಪಿರಲಿ, ಅಮೃತಧಾರೆ, ಮುಂಗಾರು ಮಳೆ, ತಾಜ್ಮಹಲ್, ಕೃಷ್ಣನ್ ಲವ್ಸ್ಟೋರಿ
#