ರಂಜನಿ ರಾಘವನ್ ಬರೆದಿರುವ ‘ಕತೆ ಡಬ್ಬಿ’ ರಿಲೀಸಿಗೆ ಮುಂಚೆಯೇ ದಾಖಲೆ ಪ್ರಮಾಣದಲ್ಲಿ ಆನ್ ಲೈನ್ ಬುಕಿಂಗ್ ಪಡೆದಿದೆ. ಓದುಗರು ಕಾಯ್ದಿರಿಸುತ್ತಿರುವ ಪ್ರತಿಗಳ ಸಂಖ್ಯೆ ನೋಡಿದರೆ ಬಹುಶಃ ಕೃತಿ ಬಿಡುಗಡೆಗೆ ಮುಂಚೆಯೇ ಮೊದಲ ಆವೃತ್ತಿ ಖರ್ಚಾಗಿಬಿಡುವಂತಿದೆ.
ಮೊದಲೆಲ್ಲಾ ʻಪುಟ್ ಗೌರಿʼ ಅಂತಾನೇ ಫೇಮಸ್ಸಾಗಿದ್ದವರು ನಟಿ ರಂಜನಿ ರಾಘವನ್. ಕೇವಲ ಒಂದು ಧಾರಾವಾಹಿ, ಅದರ ನಟನೆ, ಅದರಿಂದಲೇ ಹುಟ್ಟಿಕೊಂಡ ಜನಪ್ರಿಯತೆಯಲ್ಲೇ ಸವೆದುಹೋಗಬಾರದು ಅನ್ನೋದು ಈಕೆಯ ಅಭಿಪ್ರಾಯ. ಇಂಥದ್ದೊಂದು ಫೀಲು ಮನಸೊಳಗೆ ಹುಟ್ಟದಿದ್ದರೆ, ಬಹುಶಃ ಮತ್ತೊಂದು ಗೆಲುವನ್ನು ಎದುರುಗೊಳ್ಳೋದು ಯಾವುದೇ ಕಲಾವಿದರಿಗೆ ಕಷ್ಟಸಾಧ್ಯ. ಈಗ ರಂಜನಿ ಪುಟ್ಟ ಗೌರಿ ಇಮೇಜಿನಿಂದ ಹೊರಬಂದು ʻಕನ್ನಡತಿ’ಯಾಗಿ ಜಗತ್ಪಸಿದ್ಧಿ ಪಡೆದಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದರೆ ಮುಂದೆ, ಜನ ಇವರನ್ನು ʻಕತೆ ಡಬ್ಬಿʼ ರಂಜನಿ ಅಂತಾ ಕರೆಯುವ ಸಾಧ್ಯತೆಗಳಿವೆ!
ರಂಜನಿ ರಾಘವನ್ ನಟನೆಯ ಜೊತೆಗೇ ಅಪಾರವಾಗಿ ಓದುವ ಹವ್ಯಾಸ ಮೈಗೂಡಿಸಿಕೊಂಡವರು. ನಾಲ್ಕನೇ ಕ್ಲಾಸಿನ ಬೇಸಿಗೆ ರಜೆಯಲ್ಲಿ ಮನೆಯಲ್ಲಿ ಕೂತಿದ್ದ ರಂಜನಿ ಕೈಗೆ ಅವರಪ್ಪ ಪುಸ್ತಕವೊಂದನ್ನು ತಂದುಕೊಟ್ಟಿದ್ದರು. ಅದು ಅನುಪಮಾ ನಿರಂಜನರ ʻದಿನಕ್ಕೊಂದು ಕತೆʼ. ಈ ಪುಸ್ತಕದಿಂದ ಶುರುವಾದ ರಂಜನಿಯ ಓದುವ ಹುಚ್ಚು ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳು ಸೇರಿದಂತೆ ಕನ್ನಡದ ಸಾಕಷ್ಟು ಬರಹಗಾರನ್ನು ಪರಿಚಯಿಸಿತ್ತು. ಓದುವ ರುಚಿಯನ್ನೂ ಹತ್ತಿಸಿತ್ತು. ತಾವೇ ನಟಿಸಿ, ನಿರ್ಮಿಸಿದ್ದ ಇಷ್ಟದೇವತೆ ಧಾರಾವಾಹಿ ಮೂಲಕ ರಂಜನಿ ಸ್ವತಃ ಸ್ಕ್ರಿಪ್ಟ್ ರೈಟರ್ ಆಗಿಯೂ ಪರಿಚಯಗೊಂಡರು. ಧಾರಾವಾಹಿ, ಸೀರಿಯಲ್ಲು, ಸಿನಿಮಾ – ಹೀಗೆ ಹಂತ ಹಂತವಾಗಿ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಕನ್ನಡತಿ ಈಗ ಸಾಹಿತ್ಯ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ.
ಹಿರಿಯ ಪತ್ರಕರ್ತ, ಬರಹಗಾರ ಜಿ.ಎನ್. ಮೋಹನ್ ಸಾರಥ್ಯದ ಜಾಲತಾಣ ‘ಅವಧಿ’. ಕನಸುಗಳ ಬೆಂಬತ್ತಿ ನಡೆಯುತ್ತಾ, ಸಾಹಿತ್ಯ ಲೋಕದ ಅಚ್ಛರಿಯಾಗಿಯೇ ಉಳಿದಿರುವ ʻಅವಧಿʼ ವೆಬ್ ಮ್ಯಾಗಜ಼ೀನ್ ಗಾಗಿ, ಲಾಕ್ ಡೌನ್ ಕಾಲದಲ್ಲಿ ರಂಜನಿ ಕಥಾಸರಣಿ ಬರೆಯಲು ಶುರು ಮಾಡಿದ್ದರು. ಅದು ಅಪಾರ ಜನಪ್ರಿಯತೆಯನ್ನೂ ಪಡೆಯಿತು. ಈಗ ʻಬಹುರೂಪಿʼ ಪ್ರಕಾಶನ ಆ ಕಥೆಗಳನ್ನೆಲ್ಲ ಒಟ್ಟುಮಾಡಿ ʻಕತೆ ಡಬ್ಬಿʼಯಾಗಿ ಪ್ರಕಟಿಸುತ್ತಿದೆ. ಇದೇ ಸೆಪ್ಟೆಂಬರ್ 29ರಂದು ಈ ಕಥಾ ಗುಚ್ಛ ಲೋಕಾರ್ಪಣೆಯಾಗುತ್ತಿದೆ. ಪತ್ರಕರ್ತ, ಸಾಹಿತಿ ಜೋಗಿ, ನಿರ್ದೇಶಕ ಜಯತೀರ್ಥ, ನಟ ರಿಷಿ ಮತ್ತು ಪತ್ರಕರ್ತೆ ಚೇತನಾ ತೀರ್ಥಹಳ್ಳಿ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬರಲಿದ್ದಾರೆ.
ಇದರ ಜೊತೆಗೊಂದು ಖುಷಿಯ ವಿಚಾರವಿದೆ. ರಂಜನಿಯ ಕತೆ ಡಬ್ಬಿ ರಿಲೀಸಿಗೆ ಮುಂಚೆಯೇ ದಾಖಲೆ ಪ್ರಮಾಣದಲ್ಲಿ ಆನ್ ಲೈನ್ ಬುಕಿಂಗ್ ಪಡೆದಿದೆ. ಕಾಯ್ದಿರಿಸುತ್ತಿರುವ ಪ್ರತಿಗಳ ಸಂಖ್ಯೆ ನೋಡಿದರೆ ಬಹುಶಃ ಕೃತಿ ಬಿಡುಗಡೆಗೆ ಮುಂಚೆಯೇ ಮೊದಲ ಆವೃತ್ತಿ ಖರ್ಚಾಗಿಬಿಡುವಂತಿದೆ. ಸೀರಿಯಲ್ ಇಂಡಸ್ಟ್ರಿಯಲ್ಲಿ ತಮ್ಮ ಧಾರಾವಾಹಿಗಳ ಮೂಲಕ ದಾಖಲೆ ಸೃಷ್ಟಿಸಿರುವ, ಅಗಣಿತ ಅಭಿಮಾನಿಗಳನ್ನು ಹೊಂದಿರುವ ರಂಜನಿ ಸಾಹಿತ್ಯ ಲೋಕದಲ್ಲೂ ತಮ್ಮದೇ ಆದ ಕ್ರೇಜ಼ು ಸೃಷ್ಟಿಸಿಕೊಳ್ಳುವ ಲಕ್ಷಣಗಳು ಎದ್ದುಕಾಣುತ್ತಿವೆ.
ಇನ್ನೊಂದು ಮಜವಾದ ವಿಚಾರವಿದೆ. ಸಿನಿಮಾ ಚಿತ್ರೀಕರಣಗಳಿಗೆಂದು ಹೊರ ದೇಶಗಳಿಗೆ ಹೋದಾಗ ನಟನಟಿಯರು ಬಿಂದಾಸಾಗಿ ಓಡಾಡಿಕೊಂಡು, ಬೇಕಾದ್ದು ತಿಂದು ಮಜಾ ಮಾಡಿ ಬರೋದಿದೆ. ರಂಜನಿ ಈ ವಿಚಾರದಲ್ಲೂ ಭಿನ್ನ. ದರ್ಶನ್ ಫ್ಯಾಮಿಲಿ ಹುಡುಗ ಮನೋಜ್ ಹೀರೋ ಆಗಿ ನಟಿಸುತ್ತಿರುವ ʻಟಕ್ಕರ್ʼ ಸಿನಿಮಾದಲ್ಲಿ ರಂಜನಿಯೇ ನಾಯಕಿ. ಈ ಚಿತ್ರದ ಡ್ಯುಯೆಟ್ ಸಾಂಗ್ ಶೂಟಿಂಗಿಗೆಂದು ಮಲೇಷಿಯಾಗೆ ಹೋಗಿದ್ದರು. ಬೇರೆಲ್ಲರೂ ಹೊರಗೆ ಸುತ್ತಾಡಿ, ಪಾರ್ಟಿ ಮಾಡುವ ಮೂಡ್ ನಲ್ಲಿದ್ದರೆ ರಂಜನಿ ಮಾತ್ರ ರೂಮಲ್ಲಿ ಕೂತು, ಕೈಲೊಂದು ಬಟ್ಟಲು ಹಿಡಿದು ಏನನ್ನೋ ತಿನ್ನುತ್ತಿದ್ದರಂತೆ. ಕುತೂಹಲ ತಡೆಯಲಾರದೆ ಚಿತ್ರದ ನಿರ್ಮಾಪಕ ನಾಗೇಶ್ ಕೋಗಿಲು ಕೇಳಿಯೇ ಬಿಟ್ಟಿದ್ದಾರೆ.. ʻಏನ್ ಮೇಡಮ್ ಅದು?ʼ ಅಂತಾ… ʻಅಮ್ಮ ಕುಟ್ಟವಲಕ್ಕಿ ಮಾಡಿ ಕಳಿಸಿದ್ದಾರೆ. ನೀವು ತಿಂದುನೋಡಿʼ ಅನ್ನುತ್ತಾ ಎದುರಿಗಿದ್ದವರಿಗೂ ವಿನಿಯೋಗ ಮಾಡಿದರಂತೆ ಕನ್ನಡತಿ. ಅಮ್ಮ ಮಾಡಿಕೊಟ್ಟ ಕುಟ್ಟವಲಕ್ಕಿಯ ರುಚಿ ಈಗ ರಂಜನಿಯ ʻಕತೆ ಡಬ್ಬಿʼ ತೆಗೆದು ಓದಿದವರಿಗೂ ದಕ್ಕಲೆನ್ನುವುದು ಆಶಯ…
Comments