ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ಕಾಂತಾರ ಚಿತ್ರದ ಹಾಡಿನ ಟ್ಯೂನನ್ನು ತಮ್ಮ ನವರಸಂ ಎಂಬ ಆಲ್ಬಂನಿಂದ ತೆಗೆದುಕೊಂಡಿದ್ದಾರೆ ಎಂದು ಕೇರಳದ ತೈಕುಡಂ ಬ್ರಿಡ್ಜ್ ಆರೋಪಿಸಿರುವುದು ಗೊತ್ತಿರುವ ವಿಷಯವೇ? ಈಗ ರೋಲ್ಕಾಲ್ ಮಾಡುವುದಕ್ಕಾಗಿ ಇಷ್ಟೆಲ್ಲ ಆಗುತ್ತಿದೆಯಾ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ.
ಕಾಂತಾರ ಚಿತ್ರದ ಅಂತ್ಯದಲ್ಲಿ ಬರುವ ವರಾಹ ರೂಪಂ ಗೀತೆಯು ಸಾಕಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿರುವುದಷ್ಟೇ ಅಲ್ಲ, ಚಿತ್ರವನ್ನು ಗೆಲ್ಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಆದರೆ, ಈ ಹಾಡು ತಮ್ಮ ನವರಸಂ ಎಂಬ ಸಿಂಗಲ್ನಿಂದ ತೆಗೆದುಕೊಂಡಿದ್ದಾರೆ ಮತ್ತು ಈ ಮೂಲಕ ಕಾಪಿರೈಟ್ ಹಕ್ಕುಗಳ ಉಲ್ಲಂಘನೆ ಆಗಿದೆ ಎಂದು ತೈಕುಡಂ ಬ್ರಿಡ್ಜ್ ಎಂಬ ಮ್ಯೂಸಿಕ್ ಬ್ಯಾಂಡ್ ಆರೋಪ ಮಾಡಿತ್ತು. ತೈಕುಡಂ ಬ್ರಿಡ್ಜ್ಗೂ ಕಾಂತಾರಕ್ಕೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲದಿದ್ದರೂ, ನವರಸಂ ಹಾಗೂ ವರಾಹರೂಪಂ ಗೀತೆಗಳ ನಡುವೆ ಸಾಕಷ್ಟು ಸಾಮ್ಯತೆ ಇದ್ದು, ಈ ಮೂಲಕ ಕಾಪಿರೈಟ್ಸ್ ಉಲ್ಲಂಘನೆ ಆಗಿದೆ ಎಂದು ಇನ್ಸ್ಟಾಗ್ರಾಂ ಮೂಲಕ ಎಚ್ಚರಿಸಿತ್ತು.
ಇದು ಸಂಪೂರ್ಣ ಸುಳ್ಳೇನಲ್ಲ. ಏಕೆಂದರೆ, ಆ ಹಾಡಿನಿಂದ ಸಾಕಷ್ಟು ಸ್ಫೂರ್ತಿ ಪಡೆದಿದ್ದಾಗಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಹ ಕೆಲವು ದಿನಗಳ ಹಿಂದೆ ಹೇಳಿಕೊಂಡಿದ್ದರು. ಆ ಹಾಡಿನಿಂದ ಒಂದಷ್ಟು ಪ್ರೇರಣೆ ಪಡೆದಿದ್ದು ನಿಜ, ಆದರೆ ನಕಲು ಮಾಡಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು. ಸಂಗೀತ ನಿರ್ದೇಶಕರೇ ಒಪ್ಪಿಕೊಂಡಿರುವುದರಿಂದ ಆ ಹಾಡಿನಿಂದ ಸ್ಫೂರ್ತಿ ಪಡೆದು ವರಾಹರೂಪಂ ಹಾಡನ್ನು ಮಾಡಲಾಗಿದೆ. ಆದರೆ, ಇದೆಲ್ಲ ಗೊತ್ತಿದ್ದರೂ ತೈಕುಡಂ ಬ್ರಿಡ್ಜ್ನವರು ಇಷ್ಟು ದಿನ ಸುಮ್ಮನೆ ಏಕಿದ್ದರು ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.
ಕಾಂತಾರ ಚಿತ್ರ ಕಳೆದ ಸೆ. 30ರಂದು ಬಿಡುಗಡೆಯಾಗಿತ್ತು. ಅದಾಗಿ ಕೆಲವು ದಿನಗಳಲ್ಲೇ ವರಾಹರೂಪಂ ಹಾಡು, ಮಲಯಾಳಂನ ನವರಸಂನಿಂದ ಸ್ಫೂರ್ತಿ ಪಡೆದಿದೆ ಎಂದು ಸುದ್ದಿಯಾಗಿತ್ತು. ಈ ವಿಷಯ ಸಾಕಷ್ಟು ಚರ್ಚೆ ಸಹ ಆಗಿತ್ತು. ಕೆಲವು ಸುದ್ದಿವಾಹಿನಿಗಳಲ್ಲಿ ಈ ಕುರಿತು ಕಾರ್ಯಕ್ರಮ ಪ್ರಸಾರವಾಗಿ, ಅದರಲ್ಲಿ ಅಜನೀಶ್ ಲೋಕನಾಥ್ ಮಾತನಾಡಿದ್ದರು. ಇಷ್ಟೆಲ್ಲ ಆಗುತ್ತಿರುವಾಗ, ಈ ವಿಷಯ ತೈಕುಡಂ ಬ್ರಿಡ್ಜ್ನವರಿಗೆ ಗೊತ್ತೇ ಇರಲಿಲ್ಲ ಎಂದೇನಲ್ಲ. ಒಂದು ಪಕ್ಷ ಗೊತ್ತಿರದಿದ್ದರೂ, ಅದಾಗಿ ಕೆಲವು ದಿನಗಳಲ್ಲೇ ಚಿತ್ರದ ಮಲಯಾಳಂ ಅವತರಣಿಕೆ ಸಹ ಬಿಡುಗಡೆಯಾಗಿದೆ. ಆಗಲಾದರೂ ಗೊತ್ತಾಗಿರಲೇಬೇಕು. ಆಗೆಲ್ಲ ಸುಮ್ಮನಿದ್ದ ಅವರು ಈಗ್ಯಾಕೆ ಕಾಪಿರೈಟ್ ಉಲ್ಲಂಘನೆ, ಕಾನೂನು ಕ್ರಮ ಮುಂತಾದ ಪದಗಳನ್ನು ಉಪಯೋಗಿಸುತ್ತಿದ್ದಾರೆ ಎಂಬ ಪ್ರಶ್ನೆ ಸಹಜವೇ.
ಮೂಲಗಳ ಪ್ರಕಾರ, ಇದು ರೋಲ್ಕಾಲ್ ಮಾಡುವ ಒಂದು ತಂತ್ರವಂತೆ. ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ನವರಸಂ ಶೈಲಿಯ ಹಾಡು ಇದ್ದರೆ ಚೆನ್ನಾಗಿರುತ್ತದೆ ಎಂದು ಹೊಂಬಾಳೆ ಫಿಲಂಸ್ನವರು ತೈಕುಡಂ ಬ್ರಿಡ್ಜ್ ತಂಡದವರನ್ನು ಸಂಪರ್ಕಿಸಿದ್ದರಂತೆ. ಹಕ್ಕುಗಳನ್ನು ಅಧಿಕೃತವಾಗಿ ಪಡೆಯುವುದಕ್ಕೆ ಸಂಭಾವನೆ ಕೊಡುವುದಕ್ಕೂ ಮುಂದಾಗಿದ್ದರಂತೆ. ಆದರೆ, ತೈಕುಲಂ ಬ್ರಿಡ್ಜ್ ತಂಡದವರು ಅದಕ್ಕೆ ಒಪ್ಪಿಲ್ಲ. ಮೌಖಿಕವಾಗಿ ಬಳಸಿಕೊಳ್ಳುವುದಕ್ಕೆ ಅನುಮತಿ ನೀಡಿದ್ದರಂತೆ. ಕಾರಣ, ಆ ಸಂದರ್ಭದಲ್ಲಿ ಅವರಿಗೂ ಈ ಹಾಡು ಇಷ್ಟು ದೊಡ್ಡ ಹಿಟ್ ಆಗಬಹುದು ಎಂದು ಗೊತ್ತಿರಲಿಲ್ಲ. ಯಾವಾಗ ಹಾಡು ಜನಪ್ರಿಯವಾಗಿ, ಚಿತ್ರ ಸೂಪರ್ ಹಿಟ್ ಆಗಿ ಹೊಂಬಾಳೆಯವರು ಕೋಟಿಕೋಟಿ ಬಾಚಿಕೊಳ್ಳುವುದಕ್ಕೆ ಮುಂದಾದರೋ, ಆಗ ತೈಕುಡಂ ಬ್ರಿಡ್ಜ್ ತಂಡದವರ ಕಣ್ಣು ಕೆಂಪಾಗಿದೆ. ತಾವು ಎಂಥಾ ಎಡವಟ್ಟು ಮಾಡಿಕೊಂಡಿದ್ದೇವೆ ಎಂದು ಅರ್ಥವಾಗಿದೆ. ಆ ನಂತರ ಅವರು ಹೊಂಬಾಳೆ ಫಿಲಂಸ್ನವರ ವಿರುದ್ಧ ಒಂದಿಷ್ಟು ಕೋಟಿಗಳಿಗೆ ಡಿಮ್ಯಾಂಡ್ ಇಟ್ಟಿದ್ದರಂತೆ.
ಯಾವಾಗ, ಹೊಂಬಾಳೆಯವರು ನಿರಾಕರಿಸಿದರೋ, ಆಗ ಕಾಪಿರೈಟ್ ಉಲ್ಲಂಘನೆ ಮತ್ತು ಕಾನೂನು ಕ್ರಮದಂತಹ ನಾಟಕಗಳು ಶುರುವಾಗಿದೆ. ಒಂದು ಪಕ್ಷ ತೈಕುಡಂ ಬ್ರಿಡ್ಜ್ನವರು ಗಂಭೀರವಾಗಿದ್ದರೆ, ಇನ್ಸ್ಟಾಗ್ರಾಂ ಮೂಲಕ ಎಚ್ಚರಿಸುತ್ತಿರಲಿಲ್ಲ. ನೇರವಾಗಿ ಕಾನೂನು ಕ್ರಮದ ಹೋರಾಟಕ್ಕೆ ಮುಂದಾಗಿರುತ್ತಿದ್ದರು. ಆದರೆ, ತಮ್ಮದೇ ತಪ್ಪಿರುವುದರಿಂದ ಮತ್ತು ಹೀಗೆ ಹೆದರಿಸುವ ಮೂಲಕ ಒಂದಿಷ್ಟಾದರೂ ರೋಲ್ಕಾಲ್ ಮಾಡಿ ಕಿತ್ತುಕೊಳ್ಳುವುದಕ್ಕೆ ಮುಂದಾಗಿದೆ. ಇದೆಲ್ಲದರ ಹಿಂದೆ ಕೇರಳದ ಮಾತೃಭೂಮಿ ಸಂಸ್ಥೆಯ ಮುಖ್ಯಸ್ಥ ಶ್ರೇಯಮ್ಸ್ ಕುಮಾರ್ ಚಿತಾವಣೆ ಇದೆ ಎಂದು ಹೇಳಲಾಗುತ್ತಿದೆ. ಕಪ್ಪಂ ಟೀವಿಯ ಮುಂದಾಳುವೂ ಆಗಿರುವ ಶ್ರೇಯಮ್ಸ್ ಎಡಪಂಥೀಯ ಧೋರಣೆಯ ರಾಜಕಾರಣಿ ಕೂಡಾ ಹೌದು.
ಯಾವಾಗ ʻಕಾಂತಾರʼದ ಸುತ್ತ ಹಿಂದುತ್ವದ ನೆರಳು ಆವರಿಸಿತೋ, ಶ್ರೇಯಮ್ಸ್ ಕುಮಾರ್ ಅದನ್ನು ಸಹಿಸದಾದರು. ಈಗ ತೈಕುಡಂ ಬ್ರಿಡ್ಸ್ ತಂಡದವರನ್ನು ಛೂ ಬಿಟ್ಟು, ಖುದ್ದು ತಾವೇ ಎಲ್ಲ ರಾದ್ದಾಂತ ಸೃಷ್ಟಿಸುತ್ತಿದ್ದಾರೆ. ಜೊತೆಗೆ ಕೋಟಿಗಟ್ಟಲೆ ಹಣ ಪೀಕುವ ಹುನ್ನಾರ ಮಾಡಿದ್ದಾರೆ ಎನ್ನಲಾಗುತ್ತಿದೆ. ಇಷ್ಟೆಲ್ಲಾ ಆದರೂ, ಹೊಂಬಾಳೆಯವರು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಸದ್ಯ ಇಡೀ ಭಾರತದಲ್ಲಿ ಮುಂಚೂಣಿಯಲ್ಲಿರುವ ಹೊಂಬಾಳೆ ಕಿಡಿಗೇಡಿಗಳ ಕಿತಾಪತಿಗಳಿಗೆ, ಕುತಂತ್ರಗಳಿಗೆ ಮಣಿಯುವ ಮಾತೇ ಇಲ್ಲ. ಏನೇ ಆದರೂ ಮೌನವಾಗಿರುವುದು ಮತ್ತು ಎಂಥದ್ದೇ ಆರೋಪ ಬಂದರೂ ಎದುರಿಸುವುದಕ್ಕೆ ತಯಾರಾಗಿರುವುದು ತೈಕುಡಂ ಬ್ರಿಡ್ಜ್ ಅವರನ್ನು ಇನ್ನಷ್ಟು ಉರಿಸಿದೆ. ಈ ಪ್ರಕರಣ ಮುಂದಿನ ದಿನಗಳಲ್ಲಿ ಯಾವ ತರಹದ ತಿರುವನ್ನು ಪಡೆಯುತ್ತದೋ ಎಂಬ ಕುತೂಹಲ ಎಲ್ಲರಿಗೂ ಇದೆ.
No Comment! Be the first one.