ಡಾ. ರಾಜ್ ಕುಮಾರ್ ಕುಟುಂಬದ ವ್ಯಾವಹಾರಿಕ ಪಾಲುದಾರ, ಫೈನಾನ್ಷಿಯರ್, ಹೊಟೇಲ್ ಉದ್ಯಮಿ, ನಿರ್ಮಾಪಕ ಹೀಗೆ ಸಾಕಷ್ಟು ವ್ಯಾಪಾರ, ವಹಿವಾಟುಗಳನ್ನು ನಡೆಸುತ್ತಿದ್ದ ವಿಕೆ ಮೋಹನ್ ಅಲಿಯಾಸ್ ಕಪಾಲಿ ಮೋಹನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಗಣಿತ ಆಸ್ತಿ, ದೊಡ್ಡಮನೆ ಬೆಂಬಲ ಎಲ್ಲವೂ ಇದ್ದ ಕಪಾಲಿ ಮೋಹನ್’ಗೆ ಸಾಯುವಂಥ ಸಮಸ್ಯೆಯಾದರೂ ಏನಿತ್ತು?
ಡಾ. ರಾಜ್ ಕುಮಾರ್ ಕುಟುಂಬದ ಹೊಟೇಲ್ ವ್ಯವಹಾರದಲ್ಲಿ ಕಪಾಲಿ ಮೋಹನ್ ಸಾಕಷ್ಟು ವರ್ಷಗಳಿಂದ ಪಾಲುದಾರನಾಗಿದ್ದ. ಪುನೀತ್ ರಾಜ್ ಕುಮಾರ್ ಅಭಿನಯದ ಸಾಕಷ್ಟು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನೂ ನಿಭಾಯಿಸಿದ್ದ. ೨೦೧೫ರಲ್ಲಿ ವಜ್ರೇಶ್ವರಿ ಸಂಸ್ಥೆಯ ಮ್ಯಾನೇಜರ್ ಉಮೇಶ್ ಆತ್ಮಹತ್ಯೆಯ ಹಿಂದೆ ಇದೇ ಕಪಾಲಿ ಮೋಹನನ ಹೆಸರು ಕೇಳಿಬಂದಿತ್ತು. ೨೦೧೮ರಲ್ಲಿ ಐಟಿ ದಾಳಿಯಿಂದ ಕಂಗೆಟ್ಟಿದ್ದ ಮೋಹನ್ ಅದಾದ ನಂತರ ಅಕ್ರಮ ಜೂಜು ಅಡ್ಡೆಯ ಕಿಂಗ್ ಪಿನ್ ಎನ್ನುವ ಆರೋಪದಲ್ಲಿ ತಲೆಮರೆಸಿಕೊಂಡಿದ್ದ. ನಂತರ ಪೊಲೀಸರಿಗೆ ಶರಣಾಗಿದ್ದ.
ನಟಿ ಪೂಜಾ ಗಾಂಧಿ ಕಪಾಲಿ ಮೋಹನನಿಗೆ ದೊಡ್ಡ ಮಟ್ಟದಲ್ಲಿ ವಂಚಿಸಿದ್ದಳು ಅನ್ನೋ ಮಾತಿದೆ. ಕಪಾಲಿ ಮೋಹನನಿಂದ ರಾಜರಾಜೇಶ್ವರಿ ನಗರದಲ್ಲಿ ಪೂಜಾ ಗಾಂಧಿ ಫ್ಲಾಟ್ ಪಡೆದು ದುಡ್ಡು ಕೊಡದೇ ಯಾಮಾರಿಸಿದ್ದಳು. ಅದೊಂದು ದಿನ ಪೂಜಾ ಗಾಂಧಿ ಒಂದೇ ದಿನಕ್ಕೆ ಹತ್ತು ಸಿನಿಮಾ ಘೋಷಿಸುವ ಕಾರ್ಯಕ್ರಮ ಇಟ್ಟುಕೊಂಡಿದ್ದಳು. ಆ ಸಮಾರಂಭಕ್ಕೆ ಬಂದಿದ್ದ ಕಪಾಲಿ ಮೋಹನ ತನ್ನ ಹುಡುಗರನ್ನು ಬಿಟ್ಟು ರಂಪಾಟ ಮಾಡಿಸಿದ್ದ. ಅದು ದೊಡ್ಡ ಸುದ್ದಿಯೂ ಆಗಿತ್ತು.
ಒಂದು ಕಾಲಕ್ಕೆ ಏನೇನೂ ಇಲ್ಲದೆ ಬೆಂಗಳೂರಿಗೆ ಬಂದಿದ್ದ ಮೋಹನ್ ಆ ನಂತರ ಬಡ್ಡಿ ವ್ಯಾಪಾರ ಆರಂಭಿಸಿದ್ದ. ನೋಡ ನೋಡುತ್ತಿದ್ದಂತೇ ರಾಜ್ ಫ್ಯಾಮಿಲಿಯ ಆತ್ಮೀಯನಾಗಿ ಗುರುತಿಸಿಕೊಂಡಿದ್ದ. ಬೆಂಗಳೂರಿನ ಹಾಲಿ ಮತ್ತು ಮಾಜಿ ರೌಡಿಗಳೊಂದಿಗೂ ಒಡನಾಟಡ ಹೊಂದಿದ್ದ ಮೋಹನ್ ಕೇಸ್ ನಂಬರ್ ೧೮/೯ ಎನ್ನುವ ಸಿನಿಮಾದ ನಿರ್ಮಾಪಕರಲ್ಲೊಬ್ಬನಾಗಿದ್ದ. ಡಾ. ರಾಜ್ ಕುಟುಂಬದ ಹೊಟೇಲ್ ಉದ್ಯಮಗಳ ವ್ಯವಹಾರ, ಮಧು ಬಂಗಾರಪ್ಪನವರ ಎಲೆಕ್ಷನ್ ಓಡಾಟಗಳನ್ನೆಲ್ಲಾ ನೋಡಿಕೊಳ್ಳುತ್ತಿದ್ದದ್ದು ಇದೇ ಮೋಹನ್. ವಜ್ರೇಶ್ವರಿ ಮ್ಯಾನೇಜರ್ ಉಮೇಶ್ ಕೋಟೇಕರ್ ಅಸಹಜವಾಗಿ ಸತ್ತಮೇಲೆ ಮೋಹನನ ನಸೀಬೂ ಹದಗೆಟ್ಟಿತ್ತು. ಬೆಂಗಳೂರಿನಿಂದ ಮಂಗಳೂರಿನ ಕಡೆಗೆ ಹೋಗುತ್ತಿದ್ದಾಗ ಈತನ ಪತ್ನಿ ಕಾರು ಅಪಘಾತಕ್ಕೀಡಾಗಿ ಹಾಸಿಗೆ ಹಿಡಿದರು. ಐಟಿ ರೇಡು, ಅಕ್ರಮ ಜೂಜು ಅಡ್ಡೆ ನಡೆಸುತ್ತಿದ್ದ ಆರೋಪಗಳು ಟೋಪಿ ಮೋಹನನ ನೆತ್ತಿಗೆ ಅಂಟಿಕೊಂಡಿದ್ದವು. ಇದರ ಜೊತೆಗೆ ವಿಪರೀತ ಸಾಲದ ಸುಳಿಯಲ್ಲಿ ಮೋಹನ್ ಸಿಲುಕಿಕೊಂಡಿದ್ದ ಅನ್ನುವ ಮಾತಿದೆ. ಅದೆಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ. ಸದಾಶಿವನಗರ ಸರ್ಕಲ್ ಪೆಟ್ರೋಲ್ ಬಂಕ್ ಹಿಂಭಾಗದಲ್ಲೇ ಮೋಹನ್ ಒಡೆತನದ ಭರ್ಜರಿ ಬಂಗಲೆಯಿದೆ. ಮಾಡಿಕೊಂಡ ವ್ಯವಹಾರಗಳ ಕಾರಣಕ್ಕೆ ನೆಮ್ಮದಿಯಂತೂ ಇರಲಿಲ್ಲ. ಇವತ್ತು ತಾನೇ ನಡೆಸುತ್ತಿದ್ದ ಪೀಣ್ಯ ಬಳಿಯ ಸುಪ್ರೀಂ ಡಿಲಕ್ಸ್ ಹೊಟೇಲಿನಲ್ಲಿ ನೇಣು ಹಾಕಿಕೊಂಡು ಪ್ರಾಣ ತ್ಯಜಿಸಿದ್ದಾನೆ.
ಉಮೇಶನ ಸಾವಿನ ಹಿಂದೆ ಮೋಹನನ ನೆರಳಿತ್ತು!
ಅವನು ಉಮೇಶ್ ಕೋಟೇಕರ್. ಡಾ.ರಾಜ್ ಮತ್ತು ಪಾರ್ವತಮ್ಮನವರ ಒಡೆತನದ ವಜ್ರೇಶ್ವರಿ ಕಂಬೈನ್ಸ್ನಲ್ಲಿ ಸರಿಸುಮಾರು ೨೭ ವರ್ಷಗಳಿಂದ ಅಕೌಂಟೆಂಟ್ ಆಗಿದ್ದವನು. ಯಾರೆಂದರೆ ಯಾರನ್ನೂ ಸುಮ್ಮನೇ ನಂಬದ, ಅಪ್ಪಿತಪ್ಪಿಯೂ ಹತ್ತಿರಕ್ಕೆ ಬಿಟ್ಟುಕೊಳ್ಳದ ರಾಜ್ ಕುಟುಂಬದವರ ಬಳಿ ಬರೋಬ್ಬರಿ ೨೭ ವರ್ಷ ಕೆಲಸ ಮಾಡಿದ್ದನೆಂದರೆ, ಅದೂ ಭಯಂಕರ ಪ್ರಾಮಾಣಿಕ ಎಂಬಂತೆ ನಂಬಿಸಿದ್ದ ಎಂದರೆ ಉಮೇಶ ಎಂಬ ಈ ವ್ಯಕ್ತಿ ಕಡಿಮೆ ಆಸಾಮಿಯಾಗಿರಲಿಲ್ಲ. ಆರಂಭದಲ್ಲಿ ಅಕೌಂಟೆಂಟ್ ಆಗಿದ್ದವನು ಬರಬರುತ್ತಾ ವಜ್ರೇಶ್ವರಿ ಸಂಸ್ಥೆಯ ಆಲ್ ಇನ್ ಆಲ್ ಎಂಬಂತಾಗಿದ್ದ. ಸಿನಿಮಾ ಪೋಸ್ಟ್ ಪ್ರೊಡಕ್ಷನ್ಗಳು, ಹಳೇ ಸಿನಿಮಾಗಳ ಬಿಡುಗಡೆ ಸೇರಿದಂತೆ ಎಲ್ಲಾ ವ್ಯವಹಾರಗಳನ್ನೂ ಉಮೇಶನೇ ನೋಡಿಕೊಳ್ಳುತ್ತಿದ್ದ. ‘ಉಮೇಶ ಸಿಕ್ಕಾಪಟ್ಟೆ ಹಾನೆಸ್ಟು ಕಣ್ರೀ’ ಎಂದು ಸ್ವತಃ ರಾಘಣ್ಣ ಸಿಕ್ಕವರ ಬಳಿಯೆಲ್ಲಾ ಹೇಳಿಕೊಳ್ಳುತ್ತಿದ್ದರು.
ಮೇಲ್ನೋಟಕ್ಕೆ ಭಾಳಾ ಸಾಚಾ ಥರಾ ನಡೆದುಕೊಳ್ಳುತ್ತಿದ್ದ ಉಮೇಶ ಒಳಗೊಳಗೇ ಗೆಬರುತ್ತಿದ್ದ ಪರಿಯಿತ್ತಲ್ಲಾ.. ಅಬ್ಬಬ್ಬಾ! ವರ್ಷಗಳ ಕೆಳಗೆ ಡಾ. ರಾಜ್ ವಾಸವಿದ್ದ ಸದಾಶಿವನಗರದ ಹಳೇ ಬಂಗಲೆಯನ್ನು ಕೆಡವಿ ನೆಲಸಮ ಮಾಡಿ ಅದೇ ಜಾಗದಲ್ಲಿ ಬೃಹತ್ ಅವಳಿ ಕಟ್ಟಡಗಳೆರಡು ತಲೆಯೆತ್ತಿದವಲ್ಲಾ? ಆ ಸಮಯದಲ್ಲಿ ಈ ಅಕೌಂಟೆಂಟ್ ಉಮೇಶ ಮಾಡಿದ ಮೇಲ್ಕಾಸಿನ ಲೆಕ್ಕ ಸ್ವತಃ ಅವನಿಗೇ ತಿಳಿದಿದ್ದತೋ ಇಲ್ಲವೋ? ಯಾಕೆಂದರೆ, ಈ ಕಟ್ಟದ ನಿರ್ಮಾಣದ ಸಮಯದಲ್ಲಿ ಪ್ಲಂಬರ್ನಿಂದ ಹಿಡಿದು ಪೇಂಟರ್ ತನಕ ಎಲ್ಲರ ಬಳಿಯೂ ಕಮಿಷನ್ ಫಿಕ್ಸ್ ಮಾಡಿಕೊಂಡು ದೊಡ್ಡ ಇಡುಗಂಟನ್ನೇ ಲೂಟಿ ಮಾಡಿದ್ದ. ದುರಾದೃಷ್ಟವೆಂದರೆ ಡಾ. ರಾಜ್ ಫ್ಯಾಮಿಲಿಯ ಇಡೀ ವಹಿವಾಟನ್ನು ನೋಡಿಕೊಳ್ಳುವ ರಾಘವೇಂದ್ರ ರಾಜ್ಕುಮಾರ್ಗೆ ತನ್ನ ಬಗಲಲ್ಲೇ ಹೆಗ್ಗಣವೊಂದು ಸಮಾ ಮೇಯುತ್ತಿದೆ ಎನ್ನುವುದರ ಸಣ್ಣ ಕುರುಹೂ ಸಿಕ್ಕಿರಲಿಲ್ಲ. ಆ ಮಟ್ಟಕ್ಕೆ ನಂಬಿಸಿ, ವಂಚನೆಯ ಬಲೆ ಬೀಸಿದ್ದ ಉಮೇಶ.
ಇಂಥ ಸಂದರ್ಭದಲ್ಲೇ ಅದೊಂದು ದಿನ ಇಡೀ ರಾಜ್ ಸಾಮ್ರಾಜ್ಯದ ಬೆನ್ನೆಲುಬಾಗಿದ್ದ ರಾಘವೇಂದ್ರ ರಾಜ್ ಕುಮಾರ್ ಜಿಮ್ ಮಾಡುವ ಸಂದರ್ಭದಲ್ಲಿ ಮನೆಯಲ್ಲೇ ಕುಸಿದು ನೆಲಕ್ಕುರುಳಿದ್ದರು. ಹಾಗೆ ಬಿದ್ದು ಹಾಸಿಗೆ ಹಿಡಿದ ರಾಘಣ್ಣ ಕೊಲಂಬಿಯಾ ಆಸ್ಪತ್ರೆಯಲ್ಲಿ ಕೋಮಾಗೆ ತಲುಪಿದ್ದರು. ಇನ್ನು ಇವರ ಕತೆ ಮುಗಿದೇ ಹೋಯಿತೆನ್ನುವ ಮಾತು ಹರಿದಾಡಲಾರಂಭಿಸಿತು. ಆ ಸಂದರ್ಭದಲ್ಲಿ ಖುದ್ದು ರಾಘಣ್ಣನ ಸಹೋದರ ಶಿವರಾಜ್ಕುಮಾರ್ ಸಿಂಗಾಪುರದ ಫೋರ್ಟ್ ಎಲಿಜೆಬೆತ್ ಆಸ್ಪತ್ರೆಗೆ ಕರೆದೊಯ್ದು ಜೀವ ನೀಡಿಸಿ ಕರೆದುಕೊಂಡುಬಂದರು. ಈ ಹೊತ್ತಿಗೆ ಕಡಿಮೆಯೆಂದರೂ ರಾಘಣ್ಣ ಆರೆಂಟು ತಿಂಗಳುಗಳ ಕಾಲ ವಜ್ರೇಶ್ವರಿ ಆಫೀಸಿಗೆ ತಲೆಹಾಕಲಿಲ್ಲ. ಈ ಸಂದರ್ಭದಲ್ಲಿ ಲೆಕ್ಕಿಗ ಉಮೇಶನ ತಲೆಯಲ್ಲಿ ಏನೇನು ಗುಣಾಕಾರ ಭಾಗಾಕಾರ ಲೆಕ್ಕಗಳುತ್ಪತ್ತಿಯಾದವೋ ಗೊತ್ತಿಲ್ಲ. ಎಸ್.ಎ. ಗೋವಿಂದರಾಜ್ ಅವರಿಗೆ ಸಂದಾಯವಾಗಬೇಕಿದ್ದ ಹಣ, ಪೂರ್ಣಿಮಾಗೆ ಸೇರಬೇಕಿದ್ದ ಶೇರು… ಹೀಗೆ ಸಿಕ್ಕಸಿಕ್ಕವನ್ನೆಲ್ಲಾ ಬಾಚಿ ಬಾಚಿ ಬಳಿದು ಬಾಯಿಗೆ ಹಾಕಿಕೊಂಡು, ರಾಘಣ್ಣನ ಚೆಕ್ಗಳಿಗೆ ಫೋರ್ಜರಿ ಸಹಿ ಹಾಕಿ ತನ್ನದೇ ಖಾತೆಗೆ ಜಮಾ ಮಾಡಿಕೊಂಡಿದ್ದ. ಸದ್ದಿಲ್ಲದೇ ಭರ್ಜರಿ ಉಂಡು ಕುಂತಿದ್ದ ಉಮೇಶನ ನಿರೀಕ್ಷೆಯನ್ನೂ ಮೀರಿ ರಾಘವೇಂದ್ರ ರಾಜ್ಕುಮಾರ್ ಅನೋರಾಗ್ಯದಿಂದ ಚೇತರಿಸಿಕೊಂಡು ಮತ್ತೆ ಆಫೀಸಿನ ಕಡೆ ಬಂದೇ ಬಿಟ್ಟರಲ್ಲಾ? ಆಗ ಶುರುವಾಗಿತ್ತು ಉಮೇಶನ ಎದೆಯಲ್ಲಿ ಚುಮುಚುಮು ಚಳಕು. ಅಷ್ಟರಲ್ಲಾಗಲೇ ಮಾರ್ಚ್ ತಿಂಗಳ ಅಕೌಂಟ್ ಇಯರ್ ಎಂಡಿಂಗ್ಗೆಂದು ಆಡಿಟಿಂಗ್ ಕೆಲಸಗಳು ಶುರುವಾದವು. ನುಂಗಿದ್ದು ಸಣ್ಣಪುಟ್ಟದ್ದಾಗಿದ್ದರೆ ಉಮೇಶ ಬಚಾವಾಗಿಬಿಡುತ್ತಿದ್ದ ಆದರೆ, ಉಣ್ಣುವ ಭರದಲ್ಲಿ ಅನೇಕಾನೇಕ ಯಡವಟ್ಟುಗಳನ್ನು ಉಳಿಸಿಬಿಟ್ಟಿದ್ದ ಉಮೇಶ.
ಸ್ಟೇಟ್ ಮೆಂಟು, ಲೆಕ್ಕ ಅಂತಾ ಕೇಳಿದ್ದಕ್ಕೆ ಕಛೇರಿಗೂ ಬರದೆ ತಲೆಮರೆಸಿಕೊಂಡುಬಿಟ್ಟ. ಫೋನೆತ್ತುವುದನ್ನೂ ನಿಲ್ಲಿಸಿದ. ನೋಡುವ ತನಕ ನೋಡಿ ರಾಘವೇಂದ್ರ ರಾಜ್ ಕುಮಾರ್ ಒಂದು ಪ್ಲಾನು ಮಾಡಿದರು. ತನ್ನ ಬ್ಯುಸಿನೆಸ್ ಪಾರ್ಟನರ್ ಕಪಾಲಿ ಮೋಹನನ ಹುಡುಗರನ್ನು ಕಳಿಸಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಕೆಎಸ್ಆರ್ಟಿಸಿ ಬಸ್ ಸ್ಟಾಂಡ್ನಲ್ಲಿ ನಡೆಸುತ್ತಿರುವ ಹೋಟೇಲು, ಬನಶಂಕರಿಯ ಕಲ್ಯಾಣ ಮಂಟಪ ಸೇರಿದಂತೆ ಅನೇಕ ಬ್ಯುಸಿನೆಸ್ಸುಗಳಿಗೆ ಕಪಾಲಿ ಮೋಹನ ಪಾಲುದಾರ! ಮಂಗಳೂರು ಮೂಲದ ಕಪಾಲಿ ಮೋಹನ ರಾಜ್ ಸಂಸ್ಥೆಯಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದವನು ನಂತರ ಅವರ ಕುಟುಂಬದ ವ್ಯವಹಾರಗಳಲ್ಲಿ ಪಾಲುದಾರನಾಗಿದ್ದರ ಹಿಂದೆ ದೊಡ್ಡ ಇತಿಹಾಸವೇ ಇದೆ; ಹಾಗೇ ಕಪಾಲಿ ಮೋಹನನ ಚರಿತ್ರೆಗೂ ಕೂಡ! ಇಂಥ ಕಪಾಲಿ ಮೋಹನನ ಹುಡುಗರು ನೇರ ಉಮೇಶನ ಮನೆಗೇ ಎಡತಾಕಲು ಶುರು ಮಾಡಿದ್ದರು. ಅಂತೂ ಕಡೆಗೊಂದು ದಿನ ಉಮೇಶನನ್ನು ಅವನ ಮನೆಯಲ್ಲೇ ಹಿಡಿದು ಆತನ ಆಸ್ತಿ ಪತ್ರಗಳನ್ನೆಲ್ಲಾ ಬರೆಸಿಕೊಂಡಿದ್ದರು. ಹೆಸರಿಗೆ ವಜ್ರೇಶ್ವರಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿದ್ದ ಉಮೇಶ ಮಾಡಿಟ್ಟಿರುವ ಆಸ್ತಿ ಪಾಸ್ತಿ ಭರ್ಜರಿಯಾಗೇ ಇದೆ. ಬಸವನಗುಡಿ ಮಾಡೆಲ್ ಹೌಸ್ ಸ್ಟ್ರೀಟ್ನಲ್ಲೊಂದು ಮನೆ, ತ್ಯಾಗರಾಜನಗರ ಗಣೇಶ ಮಂದಿರದ ಬಳಿಯೊಂದು ಮನೆ, ಕಾರುಗಳು, ಬೈಕುಗಳು ಹೀಗೇ ಸಾಕಷ್ಟು ಸ್ಥಿತಿವಂತವಾಗಿತ್ತು ಉಮೇಶನ ಕುಟುಂಬ. ಇಂಥ ಉಮೇಶನಿಗೆ ಅದೊಂದು ವಿಚಿತ್ರ ಕ್ರೇಜೂ ಇತ್ತು. ತನ್ನ ಎಲ್ಲಾ ಕಾರು, ಬೈಕುಗಳ ನಂಬರು ‘೧’ ಎಂದಿರುಬೇಕೆಂದು. ಇದಕ್ಕೆಂದೇ ಆರ್.ಟಿ.ಓ.ಗೆ ಲಕ್ಷಾಂತರ ರುಪಾಯಿಯ ಫೀಸು ಕಟ್ಟಿ ಒಂದನೇ ನಂಬರನ್ನೇ ಪಡೆಯುತ್ತಿದ್ದ. ಆಫೀಸಿನ ಹೊರತಾಗಿ ಕೋಟಿಗಟ್ಟಲೆ ವ್ಯವಹಾರ ಮಾಡಿಕೊಂಡಿದ್ದ. ಬಡ್ಡಿಗೆ ಹಣ ಬಿಟ್ಟಿದ್ದ.
ಹೀಗೆ ಮನೆ, ವಾಹನ, ಶ್ರೀಮಂತಿಕೆಯ ದುರಾಸೆಗೆ ಬಿದ್ದಿದ್ದ ಉಮೇಶನ ಆಸ್ತಿಪಾಸ್ತಿಯನ್ನೆಲ್ಲಾ ವಜ್ರೇಶ್ವರಿ ಸಂಸ್ಥೆ ಒಂದೇ ಏಟಿಗೆ ತಮ್ಮ ವಕೀಲರ ಮೂಲಕ ಅಧಿಕೃತವಾಗಿ ಬರೆಸಿಕೊಂಡಿದ್ದು ಉಮೇಶನನ್ನು ಇನ್ನಿಲ್ಲದಂತೆ ಘಾಸಿ ಮಾಡಿತ್ತು. ಇದೇ ವೇಳೆಗೇ ಉಮೇಶ ಬಡ್ಡಿಗೆ ಬಿಟ್ಟಿದ್ದವರೂ ಕೈಯೆತ್ತಿದರಂತೆ. ತನ್ನ ವ್ಯವಹಾರಗಳೆಲ್ಲಾ ತಲೆಕೆಳಗಾಗಿವೆ. ಇದೆಲ್ಲದರಿಂದ ಆತಂಕಕ್ಕೊಳಗಾದ ಉಮೇಶ ಮನೆಯಿಂದ ಹೊರಗೇ ಉಳಿಯುವ ಪರಿಪಾಠ ಬೆಳೆಸಿಕೊಂಡಿದ್ದ. ಇಂಥ ಉಮೇಶ ಮಾನಸಿಕ ಸ್ಥಿತಿ ಯಾವ ಮಟ್ಟಕ್ಕೆ ಹದಗೆಟ್ಟಿತ್ತೆಂದರೆ, ೨೦೧೫ರ ಜೂನ್ ತಿಂಗಳಲ್ಲಿ ಕಾಟನ್ ಪೇಟೆ ವ್ಯಾಪ್ತಿಯಲ್ಲಿರುವ ಮಂಜುನಾಥ ಪ್ಯಾರಡೈಸ್ ಎಂಬ ಹೋಟೆಲ್ನಲ್ಲಿ ೨ ದಿನಗಳ ಕೊಠಡಿ ಬಾಡಿಗೆ ಪಡೆದುಕೊಂಡು ಅದೇ ಕೊಠಡಿಯಲ್ಲಿ ಕುತ್ತಿಗೆ ಬಿಗಿದುಕೊಂಡು ಜೀವಬಿಟ್ಟಿದ್ದ. ಇದಕ್ಕೆ ರಾಘವೇಂದ್ರ ರಾಜ್ ಕುಮಾರ್ ಹಾಗೂ ಅವರ ಪತ್ನಿ ಮಂಗಳಾ ಅವರೇ ಕಾರಣ ಎಂದು ಮೃತ ಉಮೇಶನ ಪತ್ನಿ ಸುಮನಾ ಮತ್ತು ಮಗ ವಿನಾಯಕ್ ಆರೋಪಿಸಿದ್ದರು. ದೂರಿನನ್ವಯ ಭಾರತೀಯ ದಂಡ ಸಂಹಿತೆ ೩೦೬ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದ ಮೇಲೆ ದೂರು ದಾಖಲಿಸಿಕೊಳ್ಳಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಕಾಟನ್ಪೇಟೆ ಪೊಲೀಸರು, ವಿಚಾರಣೆಗೆ ಮುಂದಾಗಿದ್ದು, ರಾಘವೇಂದ್ರ ರಾಜ್ ಕುಮಾರ್ ಹಾಗೂ ಅರ ಪತ್ನಿ ಅವರಿಂದ ವಿವರಣೆ ಕೇಳಿದ್ದರು. ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘಣ್ಣ ದಂಪತಿಗಳಿಗೆ ನ್ಯಾಯಲಯದಲ್ಲಿ ಜಾಮೀನು ಸಹಾ ದೊರಕಿತ್ತು.
ಅಂದು ಉಮೇಶನ ಸಾವಿನ ಹಿಂದೆ ಮೋಹನನ ನೆರಳಿತ್ತು. ಇವತ್ತು ಸ್ವತಃ ಮೋಹನ ಕೂಡಾ ಉಮೇಶನಂತೆಯೇ ಲಾಡ್ಜಿನ ರೂಮಲ್ಲಿ ಹಗ್ಗ ಬಿಗಿದುಕೊಂಡಿದ್ದಾನೆ…
No Comment! Be the first one.