ಯುವ ನಿರ್ದೇಶಕ ಕ್ರಿಶ್ ನಿರ್ದೇಶನದಲ್ಲಿ, ಬಾಲು ನಾಗೇಂದ್ರ ಮತ್ತು ಸಂಗೀತಾ ಭಟ್ ಜೋಡಿಯಾಗಿ ನಟಿಸಿರುವ ಸಿನಿಮಾ ‘ಕಪಟನಾಟಕ ಪಾತ್ರಧಾರಿ’. ಆಟೋ ಡ್ರೈವರ್ ಒಬ್ಬನ ಆತ್ಮಕತೆಯಂಥಾ ವಿಚಾರ ಈ ಸಿನಿಮಾದಲ್ಲಿದೆ.
ಈ ಚಿತ್ರದ ಟ್ರೇಲರ್ ಮತ್ತು ಮೂರು ಹಾಡುಗಳ ಲಿರಿಕಲ್ ವಿಡಿಯೋ ಈಗ ಲೋಕಾರ್ಪಣೆಗೊಂಡಿದೆ. ಸಿಂಪಲ್ ಸುನಿ, ತರುಣ್ ಸುಧೀರ್ ಮತ್ತು ನಟಿ ಸೋನು ಗೌಡ ಈ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದರು. ‘ಇದು ಇಂಥದ್ದೇ ಜಾನರಿನ ಸಿನಿಮಾ ಅಂತಾ ಒಂದೇ ಸಲಕ್ಕೆ ಹೇಳಲಿಕ್ಕಾಗುವುದಿಲ್ಲ. ಸಣ್ಣ ಟ್ರೇಲರಿನಲ್ಲಿ ಕೂಡಾ ಎಲ್ಲವನ್ನೂ ವಿವರಿಸಲು ಸಾಧ್ಯವಿಲ್ಲ. ಒಂದು ವೇಳೆ ಚಿತ್ರದ ಪ್ರಮುಖ ಅಂಶಗಳನ್ನು ಟ್ರೇಲರಿನಲ್ಲಿ ತೋರಿಸಿದರೆ, ಇಡೀ ಕತೆಯನ್ನೇ ಬಿಟ್ಟುಕೊಟ್ಟಂತಾಗುತ್ತದೆ. ನಾನು ಈಗಾಗಲೇ ಸಿನಿಮಾ ನೋಡಿದ್ದೀನಿ. ಸಿನಿಮಾ ನೋಡುತ್ತಾ ಸಾಗಿದಂತೆ ನೋಡುವ ಪ್ರೇಕ್ಷಕ ಕೂಡಾ ಕಥೆಗಾರನಂತಾಗುತ್ತಾನೆ. ಇದು ಹೀಗೇ ಘಟಿಸುತ್ತದೆ ಅಂತಾ ಊಹೆ ಮಾಡಲು ಸಾಧ್ಯವಾಗೋದಿಲ್ಲ. ಪ್ರತಿ ಕ್ಷಣ ಕೂಡಾ ಸೀಟಿನ ತುದಿಗೆ ಕೂರುವಂತಾ ನಿರೂಪಣೆ ಈ ಚಿತ್ರದಲ್ಲಿದೆ. ಹೊಸ ಬಗೆಯ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ಈ ಚಿತ್ರ ಖಂಡಿತಾ ರುಚಿಸುತ್ತದೆ” ಎಂದು ನಿರ್ದೇಶಕ ಸುನಿ ಹೇಳಿದರು.
“ಈ ಚಿತ್ರದ ನಿರ್ದೇಶಕರ ಕ್ರಿಶ್ ಅವರ ಸಿನಿಮಾ ಮೋಹ ದೊಡ್ಡದು. ತಮ್ಮ ಸ್ನೇಹಿತರನ್ನೆಲ್ಲಾ ಸೇರಿಸಿ ‘ಕಪಟನಾಟಕ ಪಾತ್ರಧಾರಿ’ಯನ್ನು ನಿರ್ಮಿಸಿದ್ದಾರೆ. ಸಿನಿಮಾವೊಂದಕ್ಕೆ ನಾಯಕಿ ನಾಯಕಿಯ ಮುಖ ಪ್ರಧಾನವಾಗಿರುತ್ತದೆ. ಅವರನ್ನು ಬಳಸಿ ನಾವು ವ್ಯಾಪಾರ ಕೂಡಾ ಮಾಡಬೇಕಾಗುತ್ತದೆ. ಹೀಗಿರುವಾಗ ಸಿನಿಮಾ ನಿರ್ಮಾಣಹಂತದಲ್ಲಿ ಏನೇ ಸಮಸ್ಯೆಗಳಾಗಿದ್ದರೂ, ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳದೇ ಒಂದಾಗಿ ಬೆರೆತು ಪ್ರಚಾರ ಮಾಡಬೇಕು. ಒಂದು ಸಿನಿಮಾವನ್ನು ನೋಡಿ, ಆ ಚಿತ್ರದ ಪಾತ್ರಧಾರಿಗಳಿಗೆ ಮತ್ತೊಂದು ಸಿನಿಮಾದ ಅವಕಾಶ ಸಿಗುತ್ತದೆ. ಆದರೆ ಅದನ್ನು ಕಲಾವಿದರು ಸಮರ್ಥವಾಗಿ ಬಳಸಿಕೊಳ್ಳಬೇಕು” ಎಂದು ನಿರ್ದೇಶಕ ತರುಣ್ ಸುಧೀರ್ ತಿಳಿಸಿದರು.
ಇನ್ನು ನಟಿ ಸೋನು ಗೌಡ ಮಾತಾಡುತ್ತಾ “ಈ ಕಪಟನಾಟಕ ಪಾತ್ರಧಾರಿ ಸಿನಿಮಾ ತಂಡದ ಬಗ್ಗೆ ಎಲ್ಲವನ್ನೂ ತಿಳಿದಿದ್ದೇನೆ. ಇಂಥ ಸಿನಿಮಾಗಳನ್ನು ಗೆಲ್ಲಿಸಲೇಬೇಕಿರುವ ಜವಾಬ್ದಾರಿ ನಮ್ಮದೂ ಆಗಿರುತ್ತದೆ. ಈ ಕಾರಣದಿಂದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದೇನೆ” ಎಂದು ನುಡಿದರು. ಈ ಚಿತ್ರದ ನಾಯಕನಟಿ ಸಂಗೀತಾ ಭಟ್ ಸದ್ಯ ಖಾಸಗೀ ಕಾರಣಗಳಿಗಾಗಿ ಹೊರಗಿರುವುದರಿಂದ ವಿಡಿಯೋ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಇನ್ನು ನಿರ್ದೇಶಕ ಕ್ರಿಶ್ ಮಾತನಾಡುತ್ತಾ “ಹುಲಿರಾಯ ಚಿತ್ರದ ಟ್ರೇಲರ್ ನೋಡಿ, ಆ ಚಿತ್ರದಲ್ಲಿ ನಟಿಸಿದ್ದ ಬಾಲು ನಾಗೇಂದ್ರ ಅವರನ್ನು ನನ್ನ ಚಿತ್ರಕ್ಕೆ ನಾಯಕನಾಗಿ ಮಾಡಬೇಕು ಅಂತಾ ಬಯಸಿದೆ. ಅದರಂತೆಯೇ ಬಾಲು ಅವರನ್ನು ಸಂಪರ್ಕಿಸಿ, ಅವರನ್ನು ಒಪ್ಪಿಸಿ ಕಪಟನಾಟಕ ಪಾತ್ರಧಾರಿ ಸಿನಿಮಾವನ್ನು ಕಟ್ಟಲಾಯಿತು” ಎಂದರು.
‘ಕಪಟನಾಟಕ ಪಾತ್ರಧಾರಿ’ ಗರುಡ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿದ್ದು, ಕ್ರಿಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ಆದಿಲ್ ನದಾಫ಼್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದು, ಕ್ರಿಶ್, ವೇಣು ಹಸ್ರಾಳಿ, ಚಾಣಕ್ಯ, ಅನಿರುದ್ಧ್ ಶಾಸ್ತ್ರಿ ಹಾಡುಗಳನ್ನು ರಚಿಸಿದ್ದಾರೆ. ಹರಿಚರಣ್, ಸಿದ್ಧಾರ್ಥ್, ಮಾಧುರಿ ಶೇಷಾದ್ರಿ, ಇಶಾ ಸುಚಿ, ಪವನ್ ಪಾರ್ಥ ಹಾಗೂ ಅನಿರುದ್ದ್ ಶಾಸ್ತ್ರಿ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಕಿರಣ್ ಚಂದ್ರ ಹಾಗೂ ವೇಣು ಹಸ್ರಾಳಿ ಸಂಭಾಷಣೆ ಬರೆದಿದ್ದಾರೆ. ಪರಮೇಶ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಶ್ರೀಕಾಂತ್ ಅವರ ಸಂಕಲನವಿದೆ. ಸಂಗೀತ ಭಟ್, ಬಾಲು ನಾಗೇಂದ್ರ, ಕರಿ ಸುಬ್ಬು, ಶಂಕರ್ ನಾರಾಯಣ್, ಪ್ರಕಾಶ್ ತುಮ್ಮಿನಾಡು, ಉಗ್ರಂ ಮಂಜು, ಜಯದೇವ್, ನವೀನ್ ವಾಸುದೇವ್, ಸುನೀಲ್ ಕುಲಕರ್ಣಿ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
Comments