ತೀರಾ ಕೆಳವರ್ಗದಲ್ಲಿ ಹುಟ್ಟಿ ಬೆಳೆದ ಹುಡುಗರಿಗೆ ಒಂಥರಾ ಸಂಕಟವಿರುತ್ತದೆ. ಈಕಡೆ ನೆಟ್ಟಗೆ ಓದಲೂ ಆಗಲಿಲ್ಲ, ಜೊತೆಗಿದ್ದ ಸ್ನೇಹಿತರೊಂದಿಗೆ ಸೇರಿ ಒಳ್ಳೇದಾರಿ ಹಿಡಿಯಲೂ ಸಾಧ್ಯವಾಗಲಿಲ್ಲ. ಹೆತ್ತವರನ್ನು ಉತ್ತಮವಾಗಿ ನೋಡಿಕೊಳ್ಳಬೇಕು ಅನ್ನೋ ಬಯಕೆ ಇರುತ್ತದೆ. ಆದರೆ ಅವರ ಮುಂದೆಯೇ ಕೈವೊಡ್ಡಿ ನಿಲ್ಲುವಂತಾ ದೈನೇಸಿ ಸ್ಥಿತಿ…

ಇಂಥಾ ಹುಡುಗರ ಗುರಿ ಒಂದೇ. ಹೇಗಾದರೂ ಮಾಡಿ ಒಂದು ಆಟೋ ಖರೀದಿಸೋದು. ಹಾಗೆ ಅಪ್ಪ ಕೊಡುವ ದುಡ್ಡಿನಲ್ಲಿ ಸೆಖೆಂಡ್ ಹ್ಯಾಂಡ್ ಆಟೋ ಪರ್ಚೇಸು ಮಾಡುವ ಹುಡುಗ. ಅವನಿಗೆ ಎದುರಾಗುವ ಹುಡುಗಿ. ಹುಡುಗನ ಡ್ರೀಮು, ಸಾಂಗು, ಕೂಲಿಂಗ್ ಗ್ಲಾಸು, ಶೋಕಿ… ಹೀಗೇ ಆರಂಭವಾಗುವ ಕತೆ ಯಾರೂ ನಿರೀಕ್ಷೆ ಮಾಡದ ರೇಂಜಿಗೆ ಹೋಗಿ ನಿಲ್ಲುತ್ತದೆ. ಪ್ರೀತಿಸಿದವಳಿಗಾಗಿ ಏನು ಬೇಕಾದರೂ ಮಾಡಿಬಿಡಲು ಮುಂದಾಗುವ ಹುಡುಗ ತಾನು ಎಂಥವರನ್ನೂ ಮಾತಿನಲ್ಲೇ ಮರುಳು ಮಾಡಿ, ಕಥೆ ಕಟ್ಟಿ ದಿಕ್ಕುತಪ್ಪಿಸಬಲ್ಲೆ ಅಂದುಕೊಂಡಿರುತ್ತಾನೆ. ಆದರೆ ಅಸಲೀ ಆಟ ಬೇರೆಯದ್ದೇ ಇರುತ್ತದೆ. ಈ ಕಪಟನಾಟಕಕ್ಕೆ ಸೂತ್ರಧಾರಿ ಯಾರು? ಪಾತ್ರಧಾರಿ ಯಾರು ಅನ್ನೋದು ಸಿನಿಮಾದ ಕೊನೆಗೆ ಗೊತ್ತಾಗುತ್ತದೆ. ಇಲ್ಲಿ ಹುಡುಗ, ಹುಡುಗಿ ಮತ್ತು ಆಟೋ ಪ್ರಮುಖ ಪಾತ್ರಗಳಾಗಿವೆ. ಇದರ ಜೊತೆಗೆ ದೆವ್ವ ಕೂಡಾ ಇದೆ. ಆಗಾಗ ಆಟೋವನ್ನು ಅಲುಗಾಡಿಸಿ, ಪಾತ್ರಗಳು ಪತರಗುಟ್ಟುವಂತೆ ಮಾಡುತ್ತದೆ!

ಇದು ಕ್ರಿಶ್ ನಿರ್ದೇಶನದ ಮೊದಲ ಸಿನಿಮಾ ಆದರೂ, ಹೊಸತನದಿಂದ ಕತೆಯನ್ನು ನಿರೂಪಿಸುವ ಪ್ರಯತ್ನ ಮಾಡಿದ್ದಾರೆ. ಬಾಲು ನಾಗೇಂದ್ರ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಅನ್ನೋದು ಈಗಾಗಲೇ ಸಾಬೀತಾಗಿದೆ. ದುನಿಯಾ ಸೂರಿ ನಿರ್ದೇಶನದ ಸಿನಿಮಾಗಳಲ್ಲಿ ಪಾತ್ರ ನಿರ್ವಹಿಸುತ್ತಲೇ ಹುಲಿರಾಯದಂಥ ಚಿತ್ರದಲ್ಲಿ ಹೀರೋ ಆದವರು ಬಾಲು. ಎಂಥಾ ಪಾತ್ರ ಕೊಟ್ಟರೂ ನಿಭಾಯಿಸಬಲ್ಲ ಬಾಲು ನಾಗೇಂದ್ರ ಕಪಟನಾಟಕ ಪಾತ್ರಧಾರಿಯಾಗಿ ಅವತಾರವೆತ್ತಿದ್ದಾರೆ. ಅಮಾಯಕ ಹುಡುಗನಾಗಿ ಮಾತ್ರವಲ್ಲದೆ ಫೈಟ್ ಸೀಕ್ವೆನ್ಸಿನಲ್ಲೂ ಬಾಲು ಅಬ್ಬರಿಸಿದ್ದಾರೆ. ಕಣ್ಣಮುಂದೆಯೇ ದೃಶ್ಯಗಳು ನಡೆಯುತ್ತಿವೆ ಎನ್ನಿಸುವಷ್ಟರ ಮಟ್ಟಿಗೆ ಕ್ಯಾಮೆರಾ ಕೆಲಸ ನೈಜವಾಗಿ ಮೂಡಿಬಂದಿದೆ. ಆದಿಲ್ ನದಾಫ್ ಸಂಗೀತ ಮತ್ತು ಹಿನ್ನೆಲೆ ಸಂಗೀತದ ಕೆಲಸ ನೋಡಿದರೆ ಭವಿಷ್ಯದಲ್ಲಿ ಇವರು ಕನ್ನಡ ಚಿತ್ರರಂಗದಲ್ಲಿ ಬಿಡುವಿರದ ಕೆಲಸ ಪಡೆಯೋದರಲ್ಲಿ ಅನುಮಾನಗಳಿಲ್ಲ. ತಾಂತ್ರಿಕವಾಗಿ ಇನ್ನೊಂದಿಷ್ಟು ಇಂಪ್ರೂವ್ ಮಾಡಿದ್ದಿದ್ದರೆ ಸಿನಿಮಾ ಮತ್ತೊಂದು ಲೆವೆಲ್ಲಿನಲ್ಲಿ ನಿಲ್ಲುತ್ತಿತ್ತು.

ಕರಿಸುಬ್ಬು, ರೇಣು, ಜೈದೇವ್ ಮುಂತಾದವರು ಅಚ್ಚುಕಟ್ಟಾಗಿ ನಟಿಸಿದ್ದಾರೆ. ಬಿಳೀ ಹುಡುಗಿ ಸಂಗೀತಾ ಭಟ್ ಮತ್ತು ಕಪ್ಪು ಹುಡುಗ ಬಾಲು ಕಾಂಬಿನೇಷನ್ ಮುದ್ದಾಗಿದೆ. ಹೆಣ್ಮಕ್ಕಳನ್ನು ಕೆಟ್ಟದೃಷ್ಟಿಯಲ್ಲಿ ನೋಡುವವರು, ಅವರ ಮೇಲೆ ದೌರ್ಜನ್ಯವೆಸಗುವ ಕೇಡುಗರ ಪಾಲಿಗೆ ಈ ಸಿನಿಮಾ ಸರಿಯಾದ ಪಾಠ ಕಲಿಸುತ್ತದೆ. ಅದೇನು ಅನ್ನೋದನ್ನು ಥಿಯೇಟರಿನಲ್ಲೇ ನೋಡಬೇಕು. ಮಿಸ್ ಮಾಡದೇ ನೋಡಿ…!