ಗರುಡ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರ `ಕಪಟನಾಟಕ ಪಾತ್ರಧಾರಿ’. ಈ ಚಿತ್ರದ `ಯಾಕೆ ಅಂತಾ ಗೊತ್ತಿಲ್ಲ ಕಣ್ರೀ… ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ..’ ಹಾಡು ಈಗ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿದೆ. ಆಪರೇಷನ್ ಅಲಮೇಲಮ್ಮ ಮತ್ತು ಕವಲು ದಾರಿ ಖ್ಯಾತಿಯ ನಟ ರಿಷಿ ಈ ಮೊದಲ ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ.
ಗಿರೀಶ್ ಕಾರ್ನಾಡ್ ಸೇರಿದಂತೆ ಸಾಕಷ್ಟು ಜನರೊಂದಿಗೆ ರಂಗಭೂಮಿಯಲ್ಲಿ ದುಡಿದು ನಂತರ ಚಿತ್ರರಂಗಕ್ಕೆ ಬಂದವರು ನಟ ಬಾಲು ನಾಗೇಂದ್ರ. ದುನಿಯಾ ಸೂರಿ ಅವರ ಸಾಕಷ್ಟು ಸಿನಿಮಾಗಳಲ್ಲಿ ಬಾಲು ನಾಗೇಂದ್ರ ಪಾತ್ರ ನಿರ್ವಹಿಸಿದ್ದರು. `ಕಡ್ಡಿಪುಡಿ’ ಸಿನಿಮಾದ ರೆಕ್ಕೆ ವೆಂಕಟೇಶ ಕ್ಯಾರೆಕ್ಟರ್ರು ಬಾಲು ಅವರಿಗೆ ಅತ್ಯುತ್ತಮ ಹೆಸರು ತಂದುಕೊಟ್ಟಿತ್ತು. ನಂತರ ಹುಲಿರಾಯ ಸಿನಿಮಾದಲ್ಲಿ ಬಾಲು ಪೂರ್ಣ ಪ್ರಮಾಣದ ನಾಯಕ ನಟನಾಗಿ ಕೂಡಾ ಅಭಿನಯಿಸಿದರು. ಸದ್ಯ `ಕಪಟನಾಟಕ ಪಾತ್ರಧಾರಿ’ ಚಿತ್ರ ಬಿಡುಗಡೆಗೆ ತಯಾರಾಗಿದೆ. ಈ ಸಿನಿಮಾದ ಒಂದು ಹಾಡು ಈಗ ಬಿಡುಗಡೆಯಾಗಿದ್ದು ಆನ್ ಲೈನ್ನಲ್ಲಿ ಸದ್ದು ಮಾಡುತ್ತಿದೆ.
`ಕಪಟನಾಟಕ ಪಾತ್ರಧಾರಿ’ ಬೆಂಗಳೂರಿನ ಸುತ್ತಮುತ್ತ ಚಿತ್ರಕ್ಕೆ ಚಿತ್ರೀಕರಣ ನಡೆಸಲಾಗಿದೆ. ಕ್ರಿಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ಆದಿಲ್ ನದಾಫ್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದು, ಕ್ರಿಶ್, ವೇಣು ಹಸ್ರಾಳಿ, ಚಾಣಕ್ಯ, ಅನಿರುದ್ಧ್ ಶಾಸ್ತ್ರಿ ಹಾಡುಗಳನ್ನು ರಚಿಸಿದ್ದಾರೆ. ಹರಿಚರಣ್, ಸಿದ್ಧಾರ್ಥ್, ಮಾಧುರಿ ಶೇಷಾದ್ರಿ, ಇಶಾ ಸುಚಿ, ಪವನ್ ಪಾರ್ಥ ಹಾಗೂ ಅನಿರುದ್ದ್ ಶಾಸ್ತ್ರಿ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಕಿರಣ್ ಚಂದ್ರ ಹಾಗೂ ವೇಣು ಹಸ್ರಾಳಿ ಸಂಭಾಷಣೆ ಬರೆದಿದ್ದಾರೆ. ಪರಮೇಶ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಶ್ರೀಕಾಂತ್ ಅವರ ಸಂಕಲನವಿದೆ. ಸಂಗೀತ ಭಟ್, ಬಾಲು ನಾಗೇಂದ್ರ, ಕರಿ ಸುಬ್ಬು, ಶಂಕರ್ ನಾರಾಯಣ್, ಪ್ರಕಾಶ್ ತುಮ್ಮಿನಾಡು, ಉಗ್ರಂ ಮಂಜು, ಜಯದೇವ್, ನವೀನ್ ವಾಸುದೇವ್, ಸುನೀಲ್ ಕುಲಕರ್ಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.