ಎಂ ಸಿರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿ, ಡಾ.ಮಂಜುನಾಥ್ ಡಿ.ಎಸ್ ನಿರ್ಮಾಣ ಮಾಡಿರುವ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ‘ಊರ್ವಶಿ…’ ಕಳೆದ ವಾರ ಬಿಡುಗಡೆಯಾಗಿತ್ತು. ಆ ಹಾಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಕೇಳಿಬಂದ ಹಿನ್ನೆಲೆಯಲ್ಲಿ ಚಿತ್ರತಂಡ ಖುಷಿಯಾಗಿದೆ. ಇದೀಗ ಸಂಕ್ರಾಂತಿ ಹಬ್ಬದ ವಿಶೇಷವಾಗಿ ಚಿತ್ರದ ಟೀಸರ್ ಹರಿಬಿಡಲಿದೆ ‘ಕರಿಯಪ್ಪ’ ಚಿತ್ರತಂಡ.
ಚಿತ್ರದ ಪ್ರಮುಖ ಪಾತ್ರಧಾರಿಗಳಾದ ಚಂದನ್ ಆಚಾರ್, ಸಂಜನಾ ಆನಂದ್, ತಬಲನಾಣಿ ಹಾಗೂ ಅಪೂರ್ವ ಮುಂತಾದವರನ್ನು ಬಳಸಿಕೊಂಡು ೨ಡಿ ಮತ್ತು ೩ಡಿಯಲ್ಲಿ ಟೀಸರ್ ಸಿದ್ಧಪಡಿಸಲಾಗಿದೆ. ಚಿತ್ರದಲ್ಲಿ ಬರುವ ಸನ್ನಿವೇಶಗಳು ಹಾಗೂ ಕೆಲವೊಂದನ್ನು ಟೀಸರ್ಗಾಗಿಯೇ ಸಿದ್ಧಪಡಿಸಿರುವುದಾಗಿ ಹೇಳಿಕೊಳ್ಳುತ್ತಾರೆ ನಿರ್ಮಾಪಕ ಡಾ.ಮಂಜುನಾಥ್ ಡಿ.ಎಸ್. ‘ಚಿತ್ರದಲ್ಲಿ ಸಾಕಷ್ಟು ಹಾಸ್ಯ ಸನ್ನಿವೇಶಗಳಿವೆ. ಅವುಗಳಲ್ಲಿ ಕೆಲವೊಂದನ್ನು ಆಯ್ಕೆ ಮಾಡಿಕೊಂಡು ೩೦, ೪೦ ಹಾಗೂ ೫೦ ಸೆಕೆಂಡ್ಗಳ ಸಣ್ಣ ಟೀಸರ್ ರೆಡಿ ಮಾಡಿಕೊಳ್ಳಲಾಗಿದೆ. ಚಿತ್ರದ ಪಾತ್ರಧಾರಿಗಳನ್ನು ಪರಿಚಯಿಸುವುದರ ಜೊತೆಗೆ ಕಥೆಯ ಎಳೆ, ಕರಿಯಪ್ಪನ ಕೆಮಿಸ್ಟ್ರಿ ಯಾವ ರೀತಿ ಇರಲಿದೆ ಎಂಬ ಝಲಕ್ ಈ ಮೂಲಕ ತಿಳಸಲು ಮುಂದಾಗಿದ್ದೇವೆ. ಇದೊಂಥರ ಕನ್ನಡದ ಮಟ್ಟಿಗೆ ಹೊಸ ಪ್ರಯೋಗ ಎನ್ನಬಹುದು’ ಎಂಬುದು ನಿರ್ಮಾಪಕರ ಅನಿಸಿಕೆ.
ಆನಂದ್ ಆಡಿಯೋ ಸಂಸ್ಥೆ ಮೂಲಕ ಹಾಡುಗಳು ಬಿಡುಗಡೆಯಾಗಿದೆ. ಯುವ ನಿರ್ದೇಶಕ ಕುಮಾರ್ ನಿರ್ದೇಶನವಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ‘ಕಿರಿಕ್ ಪಾರ್ಟಿ’ ಚಂದನ್ ಆಚಾರ್, ಯುವ ನಾಯಕಿ ಸಂಜನಾ ಆನಂದ್, ತಬಲ ನಾಣಿ, ಅಪೂರ್ವ, ಸುಚೇಂದ್ರ ಪ್ರಸಾದ್ ಹಾಗೂ ನಿರ್ಮಾಪಕರಾದ ಡಾ.ಮಂಜುನಾಥ್ ಡಿ.ಎಸ್, ಮೈಕೋ ನಾಗರಾಜ್, ರಾಕ್ಲೈನ್ ಸುಧಾಕರ್ ತಾರಾಬಳಗದಲ್ಲಿದ್ದಾರೆ.
ಸದ್ಯದಲ್ಲೇ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ. ಆರವ್ ರಿಶಿಕ್ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಸಜಯ್ ಕುಮಾರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಈ ಚಿತ್ರಕ್ಕೆ ಶಿವ ಸೀನಾ ಛಾಯಾಗ್ರಹಣ, ವೆಂಕಿ ಸಂಕಲನ ಮತ್ತು ಲಕ್ಷ್ಮಿತ್ ವಿನಯ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಬೆಂಗಳೂರು ಸುತ್ತಮುತ್ತ ೪೦ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
#
No Comment! Be the first one.