ಪ್ರೀತಿಯ ನಡುವೆ ಜಾತಿ ಎನ್ನುವ ಪೀಡೆ ಯಾವತ್ತೂ ನುಸುಳಬಾರದು. ಅದು ಎಲ್ಲರ ಬದುಕನ್ನೂ ಬರ್ಬಾದು ಮಾಡುತ್ತದೆ. ಈ ದೇಶದಲ್ಲಿ ಕಾನೂನಿದೆ, ಪೊಲೀಸು ವ್ಯವಸ್ಥೆ ಇದೆ ಅನ್ನೋದನ್ನೆಲ್ಲಾ ಮರೆತು ಮೇಲ್ವರ್ಗದ ಅಮಲಿನಲ್ಲಿರುವವರು ತೀರಾ ಜೀವ ವಿರೋಧಿ ಕೃತ್ಯಗಳನ್ನು ಎಸಗಿಬಿಡುತ್ತಾರೆ. ಜಾತಿಯೆನ್ನುವ ದೊಡ್ಡಸ್ಥಿಕೆ ಮಾಡಬಾರದ್ದನ್ನೆಲ್ಲಾ ಮಾಡಿಬಿಡುತ್ತದೆ.
ʻಕರ್ಕಿʼ ಚಿತ್ರದ ಕಥಾವಸ್ತು ಕೂಡಾ ಇಂಥದ್ದೇ. ತಳ ಸಮುದಾಯದ ಹುಡುಗನೊಬ್ಬ ಕಾನೂನು ಪದವೀಧರನಾಗಬೇಕು ಅಂತಾ ಕನಸು ಕಂಡ ಹುಡುಗನೊಬ್ಬ ತನ್ನ ಪ್ರೀತಿಯ ಕಾರಣಕ್ಕೆ ಎಲ್ಲವನ್ನೂ ಕಳೆದುಕೊಳ್ಳುತ್ತಾ ಸಾಗಬೇಕಾಗುತ್ತದೆ. ಈತನ ಮುಂದೆ ದ್ವಂದ್ವಗಳು, ಸವಾಲುಗಳು ಎದುರಾಗುತ್ತವೆ. ಪೈಶಾಚಿಕ ಮನಸ್ಥಿತಿಯ ಜನರಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು ಅಂದರೆ, ಯಾರ ಕಣ್ಣಿಗೂ ಕಾಣದಂತೆ ಕಣ್ಮರೆಯಾಗಬೇಕು ಅಥವಾ ತಾನೇ ಜೀವ ಕಳೆದುಕೊಳ್ಳಬೇಕು. ಇವೆರಡೂ ಸಾಧ್ಯವಿಲ್ಲವೆಂದಾದಲ್ಲಿ ಎದುರಾಳಿಗಳ ಜೀವ ತೆಗೆಯಬೇಕು… ಈ ಮೂರರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಅನ್ನೋದು ಪ್ರಶ್ನೆಯಾಗಿ ಕಾಡುವ ವಿಚಾರ.
ಇದು ತಮಿಳಿನ ಪೇರರಿಯುಮ್ ಪೆರುಮಾಳ್ ಚಿತ್ರದ ಕನ್ನಡೀಕೃತ ಕಲಾಕೃತಿ. ಜಾತಿ ವೈಷಮ್ಯ ಮತ್ತು ಚೆಂದನೆಯ ಪ್ರೀತಿಯ ಕುರಿತಾದ ಕಥಾವಸ್ತು ಇಲ್ಲಿದೆ. ತಮ್ಮ ಮನೆ ಮಗಳು ಕೆಳವರ್ಗದ ಹುಡುಗನ ಜೊತೆ ಸಲುಗೆಯಿಂದಿದ್ದಾಳೆ ಎನ್ನುವ ಒಂದೇ ಕಾರಣಕ್ಕೆ ಹುಡುಗಿಯ ಮನೆಯವರು ಮಾಡಬಾರದ್ದನ್ನೆಲ್ಲಾ ಮಾಡಿಬಿಡುತ್ತಾರೆ. ಈ ಚಿತ್ರದಲ್ಲಿ ನಾಯಿಯೂ ಒಂದು ಪಾತ್ರವಾಗಿದ್ದು. ಅದು ರೂಪಕದಂತೆ ಮೂಡಿಬಂದಿದೆ.
ಜೆ.ಕೆ. ಹೊಸ ಪರಿಚಯವಾದರೂ ಅನುಭವಿಯಂತೆ ಅಭಿನಯಿಸಿದ್ದಾರೆ. ಪವಿತ್ರನ್ ನಿರ್ದೇಶನದಲ್ಲಿ ಮೂಡಿಬಂದಿರುವ ದೃಶ್ಯಗಳು ನೋಡುಗರ ಮನಸ್ಸಿನಲ್ಲಿ ಆರ್ದ್ರ ಭಾವ ಮೂಡಿಸುತ್ತವೆ. ರಿಷಿಕೇಶ್ ಛಾಯಾಗ್ರಹಣ ಒಂದು ಊರಿನ ಚಿತ್ರಣವನ್ನು ಕಣ್ಮುಂದೆ ತರಿಸುತ್ತದೆ. ಶ್ರೀ ಕ್ರೇಜಿಮೈಂಡ್ ಅವರ ಸಂಕಲನ ಶಾರ್ಪಾಗಿದೆ. ರಾಜನ್ ನೀಡಿರುವ ಎಫೆಕ್ಟುಗಳು ಮತ್ತು ಅರ್ಜುನ್ ಜನ್ಯಾ ಸಂಗೀತ ಸಿನಿಮಾದ ಶಕ್ತಿ.
ಮರ್ಯಾದಾ ಹತ್ಯೆಗಳು ಈ ಕಾಲದಲ್ಲೂ ಘಟಿಸುತ್ತಿವೆ. ಪ್ರೀತಿಯನ್ನು ಕೊಲ್ಲುವ ಕೊಲೆಗಾರರು ಇವತ್ತಿಗೂ ಈ ನಾಡಿನಲ್ಲಿ ಜೀವಂತವಾಗಿದ್ದಾರೆ ಅನ್ನೋದನ್ನು ಊಸಹಿಸಿಕೊಳ್ಳೋದೂ ಕಷ್ಟ. ಬಹುಶಃ ಕರ್ಕಿ ಚಿತ್ರವನ್ನು ನೋಡಿದರೆ ಯಾರಿಗೂ ಗೊತ್ತಾಗದಂತೆ ನಡೆಯುತ್ತಿರುವ ಈ ಹಿಂಸಾ ಕೃತ್ಯಗಳು ಕಣ್ಮುಂದೆಯೇ ನಡೆಯುತ್ತಿರುವಂತೆ ಕಾಣುತ್ತದೆ. ಆ ಮೂಲಕ ಮನಸ್ಸನ್ನು ವ್ಯಾಕುಲಕ್ಕೀಡುಮಾಡುತ್ತದೆ. ಮನರಂಜನೆಯ ಹೊರತಾಗಿ ಕಾಡುವ ಕಥೆಯ ಸಿನಿಮಾವನ್ನು ನೋಡಬೇಕಾದರೆ ಒಮ್ಮೆ ಕರ್ಕಿಯನ್ನು ನೋಡಿಬನ್ನಿ…!
No Comment! Be the first one.