ಮಹಾರಾಷ್ಟ್ರ ಏಕೀಕರಣ ಸಮಿತಿ ಅಧ್ಯಕ್ಷ ದೀಪಕ್ ದಳವಿಗೆ ಕನ್ನಡಪರ ಹೋರಾಟಗಾರರು ಕಪ್ಪು ಮಸಿ ಬಳಿದಿದ್ದರು. ಇದಕ್ಕೆ ಪ್ರತಿಯಾಗಿ ಶಿವಸೇನೆ ಕಾರ್ಯಕರ್ತರು ಕನ್ನಡದ ಬಾವುಟಕ್ಕೇ ಬೆಂಕಿ ಇಡುವ ಮೂಲಕ ತಮ್ಮ ಹೀನ ಮನಸ್ಥಿತಿಯನ್ನು ತೋರಿದ್ದಾರೆ.
ಎಂ.ಇ.ಎಸ್. ಮತ್ತು ಶಿವಸೇನೆ ವಿರುದ್ದ ಜಗತ್ತಿನಾದ್ಯಂತ ಕನ್ನಡಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಕನ್ನಡ ಚಿತ್ರರಂಗದ ಹಿರಿಯ ನಟರು ಕೂಡಾ ಧ್ವಜಕ್ಕೆ ಬೆಂಕಿ ಇಟ್ಟಿರುವ ವಿಚಾರವನ್ನು ಖಂಡಿಸುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಅಂತೂ ಕಿಡಿಗೇಡಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ಶಿಕ್ಷೆಯಾಗಲೇಬೇಕು. ನಿಜವಾಗಿ ಕನ್ನಡ ಪರ ಹೋರಾಟ ಮಾಡುವವರನ್ನು ಬಿಡುಗಡೆಗೊಳಿಸಿ. ಕನ್ನಡ ತಾಯಿ, ತಾಯ್ನಾಡಿನ ವಿಷಯಕ್ಕೆ ಈ ರೀತಿ ಅಪಮಾನ ಮಾಡಿರುವವರಿಗೆ ತಕ್ಕ ಪಾಠ ಕಲಿಸಲೇಬೇಕು… ದಯಮಾಡಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸಿ.ಎಂ. ಬಸವರಾಜ ಬೊಮ್ಮಾಯಿಯವರಿಗೆ ಟ್ವೀಟ್ ಮಾಡಿದ್ದಾರೆ.
ಡಾ. ಶಿವರಾಜ್ ಕುಮಾರ್ ಸಹಾ ʻʻನಮ್ಮ ನಾಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಲಿ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ. ಜೈ ಕನ್ನಡ. ಜೈ ಕರ್ನಾಟಕʼʼ ಎಂದು ಸಿ ಎಂಗೆ ಟ್ವೀಟ್ ಮಾಡಿದ್ದಾರೆ. ಇನ್ನು ಜಗ್ಗೇಶ್ ಕೂಡಾ ಎಂದಿನ ತಮ್ಮ ಶೈಲಿಯಲ್ಲಿ ಪುಂಡರ ವಿರುದ್ದ ಕಿಡಿ ಕಾರಿದ್ದಾರೆ.
ಕನ್ನಡ ಸಿನಿಮಾರಂಗದ ದೈತ್ಯ ಶಕ್ತಿಯೇ ಆಗಿರುವ ದರ್ಶನ್, ಶಿವಣ್ಣನಂಥ ನಟರು ಖುದ್ದು ಹೀಗೆ ಪ್ರತಿಕ್ರಿಯಿಸಿರುವುದು ಹೋರಾಟದ ಕಾವನ್ನು ಮತ್ತಷ್ಟು ಹೆಚ್ಚಿಸೋದು ನಿಜ….
Comments