ಇನ್ನೇನು ಬಿಡುಗಡೆಗೆ ಸಂಪೂರ್ಣ ತಯಾರಿ ಮುಗಿಸಿಕೊಂಡು ನಿಂತಿರೋ ಚಿತ್ರ ಕರ್ಷಣಂ. ಪ್ರತೀ ಚಿತ್ರದ ಹಿಂದೆಯೂ ಒಂದೊಂದು ಸಾಹಸಗಾಥೆಯಿರುತ್ತೆ. ಏನೇ ಬಂದರೂ ಗುರಿ ಮುಟ್ಟುವ ಛಲದ ಕಹಾನಿಯೂ ಇರುತ್ತೆ. ಅಷ್ಟಿಲ್ಲದೇ ಹೋದರೆ ಒಂದು ಚಿತ್ರ ನಿರ್ಮಾಣವಾಗೋದಿಲ್ಲ. ನಿರ್ಮಾಣವಾದರೂ ಪ್ರೇಕ್ಷಕರನ್ನು ತಟ್ಟೋದಿಲ್ಲ. ಕರ್ಷಣಂ ಚಿತ್ರವನ್ನು ಸ್ವತಃ ನಿರ್ಮಾಣ ಮಾಡಿ ನಾಯಕನಾಗಿಯೂ ನಟಿಸಿರೋ ಧನಂಜಯ್ ಅತ್ರೆ ಅವರದ್ದೂ ಕೂಡಾ ಪಕ್ಕಾ ಛಲದ ಹಾದಿ!
ಈವತ್ತಿಗೆ ಕಿರುತೆರೆಯ ಖ್ಯಾತ ನಿರ್ದೇಶಕ ಶರವಣ ನಿರ್ದೇಶಿಸಿರುವ ಕರ್ಷಣಂ ಚಿತ್ರ ಟ್ರೈಲರ್, ಹಾಡು ಮುಂತಾದವುಗಳ ಮೂಲಕ ಜನ ಮನ ಸೆಳೆದುಕೊಂಡಿದೆ. ಪ್ರೇಕ್ಷಕರು ಈ ಚಿತ್ರದ ಬಗ್ಗೆ ಬಹಳಷ್ಟು ಭರವಸೆಯನ್ನೂ ಹೊಂದಿದ್ದಾರೆ. ಆದರೆ ಈ ಚಿತ್ರವೀಗ ಬಿಡುಗಡೆಯ ಹೊಸ್ತಿಲಲ್ಲಿರೋದರ ಹಿಂದೆ ದಶಕಗಳಷ್ಟು ಸುದೀರ್ಘ ಕಾಲದ ತಪಸ್ಸಿನಂಥಾ ಕನಸಿನ ಪಾಲಿದೆ. ಈ ಹಾದಿಯ ತುಂಬಾ ಧನಂಜಯ್ ಅತ್ರೆಯವರ ಶ್ರಮದ ಗುರುತುಗಳೂ ಇವೆ.
ಕೊಡಗಿನ ಭಾಗಮಂಡಲ ಮೂಲದವರಾದ ಧನಂಜಯ್ ಅತ್ರೆ ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿಯೇ. ದಯಾನಂದಸಾಗರ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನೀರಿಂಗ್ ಪದವಿ ಪಡೆದುಕೊಂಡಿದ್ದ ಅವರ ಪಾಲಿಗೆ ಬಣ್ಣದ ಕನಸು ಅರಳಿಕೊಂಡಿದ್ದು ರ್ಯಾಂಪ್ ಮೇಲೆ. ಯಾಕೆಂದರೆ ಧನಂಜಯ್ ಕಾಲೇಜು ದಿನಗಳಲ್ಲಿಯೇ ಮಾಡೆಲಿಂಗ್ನತ್ತ ಆಸಕ್ತಿ ಹೊಂದಿದ್ದರು. ಆ ಕಾಲದಲ್ಲಿಯೇ ಇಂಥಾ ಕನಸು ಹೊಂದಿದ್ದ ಧನಂಜಯ್ ಅವರನ್ನು ಕಾಲೇಜು ವ್ಯಾಸಂಗ ಮುಗಿದಾದ ನಂತರವೂ ಕೈ ಹಿಡಿದದ್ದು ಮಾಡೆಲಿಂಗ್ ಕ್ಷೇತ್ರವೇ. ಅಲ್ಲಿಯೂ ಕೂಡಾ ಗಮನಾರ್ಹ ಅವಕಾಶಗಳನ್ನವರು ತಮ್ಮದಾಗಿಸಿಕೊಂಡಿದ್ದರು. ಕಿಂಗ್ಫಿಷರ್ ಡರ್ಬಿ ಮತ್ತು ರೇಮಂಡ್ ಸ್ಟಿಲ್ ಮಾಡೆಲಿಂಗಿನಲ್ಲಿಯೂ ಅವರು ಮಿಂಚಿದ್ದರು.
ಹೀಗಿರುವಾಗಲೇ ನಟನಾಗಬೇಕೆಂಬ ಕನಸಿನ ಬೆಂಬಿದ್ದು ಅದನ್ನು ಸಾಕಾರಗೊಳಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಧನಂಜಯ್ಗೆ ೨೦೦೭ರಲ್ಲಿ ಉಪೇಂದ್ರ ಅಭಿನಯದ ಬುದ್ಧಿವಂತ ಚಿತ್ರದಲ್ಲೊಂದು ಪುಟ್ಟ ಪಾತ್ರ ಸಿಕ್ಕಿತ್ತು. ಅದು ಅವರ ಮೊದಲ ಚಿತ್ರ. ಆ ಬಳಿಕ ಬೊಂಬಾಟ್, ದೇವ್ರು, ಯೋಧ, ವೀರಪ್ಪನ್ ಅಟ್ಟಹಾಸ ಮುಂತಾದ ಚಿತ್ರಗಳಲ್ಲಿಯೂ ಧನಂಜಯ್ ಅಭಿನಯಿಸಿದ್ದರು. ಅಂದಹಾಗೆ ಮಾಡೆಲಿಂಗ್ ಕ್ಷೇತ್ರದಲ್ಲಿದ್ದ ಇವರೊಳಗಿನ ನಟನಾಗೋ ಕನಸಿಗೆ ನೀರೆರೆದು ಪೋಶಿಸಿದ್ದವರು ಖ್ಯಾತ ನಿರ್ಮಾಪಕ ರಾಕ್ಲೈನ್ ವೆಂಕಟೇಶ್. ಈ ಭೇಟಿ ಸಂಭವಿಸಿದ್ದೇ ಒಂದು ಅನಿರೀಕ್ಷಿತ ಸಂದರ್ಭದಲ್ಲಿ. ರಾಕ್ಲೈನ್ ಧನಂಜಯ್ ಅವರ ಉತ್ಸಾಹ ಕಂಡು ನಟನಾಗೋ ಕನಸಿಗೆ ಮತ್ತಷ್ಟು ಶಕ್ತಿ ತುಂಬಿದ್ದರು. ಅದರ ಫಲವಾಗಿಯೇ ಬುದ್ಧಿವಂತ ಚಿತ್ರದ ಮೂಲಕ ಅವರ ಸಿನಿಯಾನ ಆರಂಭವಾಗಿತ್ತು. ಇದಾದ ನಂತರ ಧನಂಜಯ್ ಹೊರಳಿಕೊಂಡಿದ್ದದ್ದು ಸೀರಿಯಲ್ಲಿನತ್ತ. ಮುಂಜಾವು ಎಂಬ ಸೀರಿಯಲ್ಲಿನಲ್ಲಿ ವಿಲನ್ ರೋಲ್ನಲ್ಲಿ ಕಾಣಿಸಿಕೊಂಡಿದ್ದ ಅವರಿಗೆ ಕಿರುತೆರೆಯಲ್ಲಿ ದೊಡ್ಡ ಹೆಸರು ತಂದುಕೊಟ್ಟಿದ್ದು ಈ ಟಿವಿಯಲ್ಲಿ ಪ್ರಸಾರವಾದ ಚಿತ್ರಲೇಖಾ ಧಾರಾವಾಹಿ. ಇದರಲ್ಲಿ ನಾಯಕನ್ದ್ದು ಧನಂಜಯ್ ಮುನ್ನೂರು ಎಪಿಸೋಡುಗಳಲ್ಲಿ ನಟಿಸಿದ್ದರು.
ಈ ಧಾರಾವಾಹಿ ಮುಗಿಯುತ್ತಲೇ ಸುದೀರ್ಘವಾದೊಂದು ವಿರಾಮ ತೆಗೆದುಕೊಂಡಿದ್ದ ಧನಂಜಯ್ ಆ ಅವಧಿಯ ತುಂಬಾ ಭ್ಯುಸಿನೆಸ್ನತ್ತ ಗಮನ ಹರಿಸಿದ್ದರು. ಅದನ್ನು ಶ್ರಮ ವಹಿಸಿ ಕಟ್ಟಿ ನಿಲ್ಲಿಸುತ್ತಲೇ ಒಂದು ಚಿತ್ರ ನಿರ್ಮಾಣ ಮಾಡಿ ನಾಯಕನಾಗೋ ಕನಸಿನೊಂದಿಗೆ ಕೆಲಸ ಆರಂಭಿಸಿದ್ದ ಧನಂಜಯ್ ಅವರಿಗೆ ಸಾಥ್ ನೀಡಿದ್ದು ಅವರ ಮಡದಿ ಗೌರಿ ಅತ್ರೆ. ಅವರೇ ಈ ಚಿತ್ರಕ್ಕೆ ಕಥೆ ರೆಡಿ ಮಾಡಿದ್ದರು. ಇಬ್ಬರೂ ಸೇರಿಕೊಂಡು ವರ್ಷಗಟ್ಟಲೆ ಕಥೆಗೊಂದು ಅಂತಿಮ ರೂಪ ಕೊಟ್ಟು ಅದಕ್ಕೆ ಕರ್ಷಣಂ ಅಂತ ಹೆಸರಿಟ್ಟ ಬಳಿಕ ಎದುರಾದದ್ದು ನಿರ್ದೇಶಕರ್ಯಾರೆಂಬ ಪ್ರಶ್ನೆ. ಆಗ ಪರಿಚಯವಾದ ಶರವಣ ಧನಂಜಯ್ ಅವರ ಕನಸಿನಂತೆಯೇ ಈ ಚಿತ್ರವನ್ನು ರೂಪಿಸಿದ್ದಾರೆ.
ಇನ್ನುಳಿದಂತೆ ಫಿಟ್ನೆಸ್ ಅನ್ನು ಬದುಕಿನ ಭಾಗವಾಗಿಸಿಕೊಂಡಿರೋ ಧನಂಜಯ್ ಅದಕ್ಕಾಗಿಯೇ ದಿನದ ಒಂದಷ್ಟು ಸಮಯವನ್ನು ಮೀಸಲಿಡುತ್ತಾ ಬಂದಿದ್ದಾರೆ. ಇದೀಗ ಕಟೆದಿಟ್ಟಂಥಾ ದೇಹವನ್ನು ರೂಪಿಸಿಕೊಂಡಿರೋದರ ಹಿಂದೆ ಸರಿಸುಮಾರು ಹದಿನೆಂಟು ವರ್ಷಗಳ ನಿರಂತರವಾದ ಪರಿಶ್ರಮವಿದೆಯಂತೆ. ಈ ಫಿಟ್ನೆಸ್ ಧಯ ಕರ್ಷಣಂ ಚಿತ್ರದಲ್ಲಿನ ಪಾತ್ರ ಪೋಷಣೆ ಮಾಡಲೂ ಸಹಕಾರಿಯಾಗಿದೆ. ಈ ಚಿತ್ರದಲ್ಲಿ ಸ್ಲಂ ಹುಡುಗನಾಗಿರೋ ನಾಯಕನ ಪಾತ್ರವನ್ನು ಸಂಭಾಳಿಸುವಲ್ಲಿ ಇರ್ಷ್ಟಗಳ ಕಾಲ ಪರಿಪಾಲಿಸಿಕೊಂಡು ಬಂದಿದ್ದ ಫಿಟ್ನೆಸ್ ಕೂಡಾ ಸಹಕಾರಿಯಾಗಿದೆಯಂತೆ.
ಇಷ್ಟೊಂದು ಸುದೀರ್ಘ ಶ್ರಮದ ಫಲವಾಗಿ ಮೂಡಿ ಬಂದಿರೋ ಕರ್ಷಣಂ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ. ಈ ಮೂಲಕ ನಾಯಕನಾಗಿ ನೆಲೆ ನಿಲ್ಲುವ ಕನಸು ಧನಂಜಯ್ ಅವರದ್ದು.
#
No Comment! Be the first one.