ನಾಲಕ್ಕು ಚಿತ್ರ ವಿಚಿತ್ರ ಕೊಲೆ ಮತ್ತು ಅದರ ಸುತ್ತಾ ಸುತ್ತುವ ಮೈ ನವಿರೇಳಿಸೋ ಕಥೆ… ಯಾವ ಗೊಂದಲಗಳಿಗೂ ಅವಕಾಶವಿಲ್ಲದ, ಯಾವ ಗೋಜಲುಗಳೂ ಕಾಡದಂತೆ ಸರಾಗವಾಗಿ ನೋಡಿಸಿಕೊಂಡು, ಕ್ಷಣ ಕ್ಷಣವೂ ನೋಡುಗರನ್ನು ಕುತೂಹಲದ ಮಡುವಿಗೆ ತಳ್ಳೋ ಚಿತ್ರ ಕರ್ಷಣಂ!
ಧನಂಜಯ ಅತ್ರೆ ನಿರ್ಮಾಪಕರಾಗಿ, ನಾಯಕನಾಗಿಯೂ ಅಭಿನಯಿಸಿರೋ ಕರ್ಷಣಂ ಹೆಸರಿನಂಥಾದ್ದೇ ಖದರ್ ಹೊಂದಿರೋ ಕಥೆ, ನಿರೂಪಣೆಯಿಂದಲೇ ನೋಡುಗರಿಗೆ ಹೊಸಾ ಅನುಭವ ನೀಡುವಲ್ಲಿ ಗೆದ್ದಿದೆ. ತಾವು ನಾಯಕನಾಗಿ ನಟಿಸಬೇಕು, ಚಿತ್ರವೊಂದನ್ನು ನಿರ್ಮಾಣ ಮಾಡಬೇಕೆಂದು ಧನಂಜಯ್ ಅತ್ರೆ ಶ್ರಮ ಪಟ್ಟಿದ್ದರಲ್ಲಾ? ಅಂಥಾದ್ದೇ ಶ್ರದ್ಧೆ ಇಡೀ ಚಿತ್ರದಲ್ಲಿಯೂ ಕಾಣ ಸಿಗುತ್ತದೆ. ಅವರ ನಟನೆಯಲ್ಲಿಯೂ ಅದರ ಛಾಯೆ ದಟ್ಟವಾಗಿದೆ.
ಧನಂಜಯ್ ಅತ್ರೆ ಶಂಕರ್ ನಾಗ್ ಅಭಿಮಾನಿ ಶಂಕರನಾಗಿ ನಟಿಸಿದ್ದಾರೆ. ಸ್ಲಂ ನಿವಾಸಿಯೂ ಆಗಿರೋ ಶಂಕರನ ಪರೋಪಕಾರದ ಬುದ್ಧಿಗೆ ನಾಯಕಿ ಮನಸೋತು ಲವ್ವಲ್ಲಿ ಬೀಳುತ್ತಾಳೆ. ಆಕೆ ವೃತ್ತಿಯಲ್ಲಿ ಪತ್ರಕರ್ತೆ. ಒಟ್ಟಾರೆ ಕಥೆ ಮಾಫಿಯಾ, ಭೂಗತ ಜಗತ್ತಿನೊಂದಿಗೆ ತೆರೆದುಕೊಳ್ಳುತ್ತಲೇ ಮೂರು ಹತ್ಯೆಗಳು ನಡೆಯುತ್ತವೆ. ಕಡೆಗೆ ಪ್ರೀತಿಸಿದ ಹುಡುಗಿಯೇ ಶಂಕರನತ್ತ ಬಂದೂಕಿನ ಗುರಿಯಿಡೋ ಮೂಲಕ ಇಡೀ ಚಿತ್ರ ಕುತೂಹಲದ ಉಚ್ಛ್ರಾಯ ಸ್ಥಿತಿ ತಲುಪಿಕೊಳ್ಳುತ್ತೆ. ಅದಾಗಲೇ ಆಗಿದ್ದ ಮೂರೂ ಕೊಲೆಗಳೂ ಕೂಡಾ ಆತ್ಮೀಯರ ಕಡೆಯಿಂದಲೇ ನಡೆದಿರುತ್ತೆ. ಅದಕ್ಕೆ ಕಾರಣವೇನು? ನಾಯಕಿಯೇ ಯಾಕೆ ನಾಯಕನನ್ನು ಕೊಲ್ಲಲು ಮುಂದಾಗ್ತಾಳೆ ಎಂಬೆಲ್ಲ ಪ್ರಶ್ನೆಗಳಿಗೂ ಕರ್ಷಣಂ ಸಾವಕಾಶದಿಂದಲೇ ರೋಚಕ ಉತ್ತರ ನೀಡುತ್ತೆ.
ಹಿರಿಯ ನಟ ಶ್ರೀನಿವಾಸ ಮೂರ್ತಿ ಕೂಡಾ ಎಂದಿನಂತೆಯೇ ಚೆಂದಗೆ ನಟಿಸಿದ್ದಾರೆ. ನಾಯಕಿ ಅನುಷಾ ಕೂಡಾ ಗಮನ ಸೆಳೆಯುತ್ತಾರೆ. ಧನಂಜಯ್ ಅತ್ರೆ ಅವರಂತೂ ಈ ಪಾತ್ರವನ್ನು ನುಂಗಿಕೊಂಡಂತೆ ನಟಿಸಿದ್ದಾರೆ. ಫೈಟು, ಡಾನ್ಸುಗಳಲ್ಲಿ ಹೊಸಾ ಪ್ರಾಕಾರವೊಂದನ್ನು ಪರಿಚಯಿಸಿದ್ದಾರೆ. ವಿಸ್ತಾರವಾದ ಮುಖದ ತುಂಬಾ ಭಾವ ತುಂಬಿಕೊಂಡು ನಟಿಸೋ ಅವರು ಪವರ್ಫುಲ್ ಪಾತ್ರಗಳಿಗೂ ಜೀವ ತುಂಬಬಲ್ಲ ನಾಯಕ ನಟನಾಗಿ ನೆಲೆ ನಿಲ್ಲುವ ಸೂಚನೆಯನ್ನೂ ನೀಡಿದ್ದಾರೆ. ಅಚ್ಚುಕಟ್ಟಾದ ಕಥೆಯನ್ನು ನಿರ್ದೇಶಕ ಶರವಣ ಅಷ್ಟೇ ಚೆಂದಗೆ ತೆರೆ ಮೇಲೆ ಕಟ್ಟಿಕೊಟ್ಟಿದ್ದಾರೆ. ಹಾಸ್ಯ ನಟ ವಿಜಯ್ ಚೆಂಡೂರ್ ನಗಿಸುವುದು ಮಾತ್ರವಲ್ಲದೆ ಕಾಡುವಂತಿದೆ.
#