ಧನಂಜಯ್ ಅತ್ರೆ ನಿರ್ಮಾಣ ಮಾಡಿ ಮೊದಲ ಸಲ ನಾಯಕನಾಗಿ ನಟಿಸಿರೋ ಚಿತ್ರ ಕರ್ಷಣಂ. ಹೆಸರಲ್ಲಿಯೇ ಮಾಸ್ ಅಂಶಗಳನ್ನು ಧ್ವನಿಸೋ ಈ ಚಿತ್ರದ ಧ್ವನಿ ಸುರುಳಿಯನ್ನು ಧೀರ ರಾಕ್ಲೈನ್ ವೆಂಕಟೇಶ್ ಬಿಡುಗಡೆಗೊಳಿಸಿದ್ದಾರೆ. ಧನಂಜಯ್ ಅವರ ಇಷ್ಟೂ ವರ್ಷಗಳ ಬಣ್ಣದ ನಂಟಿನ ಹಾದಿಯಲ್ಲಿ ಅವರಿಗೆ ಸದಾ ಬೆಂಬಲಿಸುತ್ತಾ, ಮಾರ್ಗದರ್ಶನ ನೀಡುತ್ತಾ ಬಂದಿದ್ದ ರಾಕ್ಲೈನ್ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸೋ ಮೂಲಕ ಧನಂಜಯ್ ಅವರ ಸಾಹಸಕ್ಕೆ ಗೆಲುವಾಗಲೆಂದು ಹಾರೈಸಿದ್ದಾರೆ.
ಈ ಚಿತ್ರದ ಮೂಲಕವೇ ಗಾಯಕರಾಗಿ ಹೆಸರು ಮಾಡಿದ್ದ ಹೇಮಂತ್ ಸಂಗೀತ ನಿರ್ದೇಶಕರಾಗಿಯೂ ಭಡ್ತಿ ಹೊಂದಿದ್ದಾರೆ. ವಿಶೇಷವೆಂದರೆ, ಹೇಮಂತ್ ಎಂಬ ಪ್ರತಿಭೆ ಪ್ರೀತ್ಸೆ ಚಿತ್ರದ ಪ್ರೀತ್ಸೆ ಪ್ರೀತ್ಸೆ ಎಂಬ ಹಾಡಿನ ಮೂಲಕ ಖ್ಯಾತರಾಗುವಂತೆ ಮಾಡಿದ್ದೇ ರಾಕ್ ಲೈನ್ ವೆಂಕಟೇಶ್. ಹೇಮಂತ್ ಕಂಠ ಟ್ರ್ಯಾಕ್ನಲ್ಲಿಯೇ ಲೀನವಾಗೋದನ್ನು ತಪ್ಪಿಸಿ ಆ ಹಾಡು ಅವರ ಧ್ವನಿಯಲ್ಲಿಯೇ ಮೂಡಿ ಬರುವಂತೆ ಕಾಳಜಿ ವಹಿಸಿದ್ದವರೂ ಇದೇ ರಾಕ್ಲೈನ್. ಇದೀಗ ಹೇಮಂತ್ ಮೊದಲ ಸಲ ಸಂಗೀತ ನೀಡಿರುವ ಕರ್ಷಣಂ ಚಿತ್ರದ ಹಾಡೂ ಕೂಡಾ ಅವರಿಂದಲೇ ಬಿಡುಗಡೆಯಾಗಿದೆ!
ಧ್ವನಿ ಸುರುಳಿ ಬಿಡುಗಡೆಯ ಮೂಲಕ ಒಂದು ಮಹತ್ವದ ಘಟ್ಟ ತಲುಪಿಕೊಂಡ ಖುಷಿಯಲ್ಲಿಯೇ ಧನಂಜಯ ಅತ್ರೆ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಾಕ್ ಲೈನ್ ವೆಂಕಟೇಶ್ ಮತ್ತು ತಮ್ಮ ನಡುವಿನ ಆತ್ಮೀಯತೆಯನ್ನು ಹೇಳುತ್ತಲೇ ಕರ್ಷಣಂ ಚಿತ್ರ ರೂಪುಗೊಂಡಿದ್ದರ ಹಿಂದಿನ ಹಲವಾರು ವರ್ಷಗಳ ಕಥೆಯನ್ನೂ ಬಿಚ್ಚಿಟ್ಟಿದ್ದಾರೆ. ಧನಂಜಯ್ ಚಿತ್ರಲೇಖ ಎಂಬ ಧಾರಾವಾಹಿಯ ಮುಖ್ಯ ಪಾತ್ರಗಳಲ್ಲಿ ಮುನ್ನೂರಕ್ಕೂ ಹೆಚ್ಚು ಕಂತುಗಳಲ್ಲಿ ನಟಿಸಿದ್ದವರು. ಆ ಮೂಲಕವೇ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದ ಅವರ ಕನಸಾಗಿದ್ದದ್ದು ಸಿನಿಮಾ!
ಹೇಗಾದರೂ ಸಿನಿಮಾ ಅವಕಾಶ ಗಿಟ್ಟಿಸಿಕೊಳ್ಳಬೇಕೆಂಬ ಉದ್ದೇಶದಿಂದ ಮೊದಲ ಸಲ ಅವರು ಅವಕಾಶ ಕೇಳಿದ್ದು ರಾಕ್ಲೈನ್ ವೆಂಕಟೇಶ್ ಅವರ ಮುಂದೆ. ಅದಕ್ಕೆ ಪ್ರೋತ್ಸಾಹಿಸಿದ್ದ ಅವರು ತಾವು ನಿರ್ಮಾಣ ಮಾಡಿದ್ದ ಒಂದಷ್ಟು ಚಿತ್ರಗಳಲ್ಲಿ ಅವಕಾಶ ಕಲ್ಪಿಸಿದ್ದರಂತೆ. ಆದರೆ ವರ್ಷಗಳ ನಂತರ ಚಿತ್ರವೊಂದನ್ನು ನಿರ್ಮಾಣ ಮಾಡೋದಾಗಿ ಧನಂಜಯ ಹೇಳಿದಾಗ ಒಂದಷ್ಟು ಸಲಹೆ, ಬುದ್ಧಿಮಾತುಗಳನ್ನೂ ಹೇಳಿದ್ದರಂತೆ. ಅದರನ್ವಯ ಎರಡು ವರ್ಷ ತನ್ನ ಬ್ಯುಸಿನೆಸ್ ತಳಪಾಯ ಗಟ್ಟಿಗೊಳಿಸಿಕೊಂಡ ಧನಂಜಯ್ ಎಲ್ಲ ಪ್ಲ್ಯಾನಿನೊಂದಿಗೆ ರಾಕ್ಲೈನ್ ಮುಂದೆ ನಿಂತಾಗ ಅದನ್ನೆಲ್ಲ ಪರಿಶೀಲಿಸಿದ ನಂತರವೇ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದರಂತೆ.
ಹಾಗೆ ವರ್ಷಾಂತರಗಳ ಕಾಲ ಕನಸು ಕಂಡು, ಕಷ್ಟಪಟ್ಟು ದುಡಿದ ಕಾಸು ಸುರಿದು ಮಾಡಿರೋ ಚಿತ್ರ ಕರ್ಷಣಂ. ಇದೀಗ ಈ ಶ್ರಮದ ಬೆವರೆಲ್ಲವೂ ಹಾಡಾಗಿದೆ. ಅಶ್ವಿನಿ ಸಂಸ್ಥೆಯ ಮೂಲಕ ಇದರ ಹಾಡುಗಳು ರೂಪುಗೊಂಡಿವೆ. ಹಾಡುಗಳೆಲ್ಲವೂ ಚೆನ್ನಾಗಿಯೂ ಇವೆ. ಇದುವರೆಗೂ ಪ್ರೇಕ್ಷಕರ ನಡುವೆ ಒಂದು ಬಿಸಿಯನ್ನು ಕಾಯ್ದಿಟ್ಟುಕೊಂಡೇ ಬಂದಿರುವ ಈ ಚಿತ್ರ ಹಾಡುಗಳ ಮೂಲಕ ಮತ್ತೆ ಸದ್ದೆಬ್ಬಿಸಿದೆ.
ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಶರವಣ ಮಾತನಾಡುತ್ತ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾನಕ ನಮ್ಮ ಗುರಿಯ ಸಾಧನೆಗೆ ಇನ್ನೊಬ್ಬರನ್ನು ತುಳಿದುಕೊಂಡು ಹೋಗಬಾರದು. ಅದರಿಂದ ನಾವು ಪಡೆದುಕೊಳ್ಳುವುದಕ್ಕಿಂತ ಅವರು ಕಳೆದುಕೊಳ್ಳುವುದೇ ಹೆಚ್ಚು. ಅದನ್ನೇ ಒಂದು ಥ್ರಿಲ್ಲರ್ ಕಥೆಯ ಮೂಲಕ ಹೇಳಿದ್ದೇವೆ ಎಂದು ಹೇಳಿದರು. ಸಂಗೀತ ನಿರ್ದೇಶಕ ಹೇಮಂತ್ ಮಾತನಾಡುತ್ತ ನಾನಿಲ್ಲಿ ನಿಂತಿದ್ದೇನೆ ಎಂದರೆ ಅದಕ್ಕೆ ರಾಕ್ಲೈನ್ ವೆಂಕಟೇಶ್ರವರೇ ಕಾರಣ. ‘ನನ್ನನ್ನು ಪ್ರೀತ್ಸೆ’ ಹಾಡಿನ ಮೂಲಕ ಜಗತ್ತಿಗೆ ತೋರಿಸಿ ಕೊಟ್ಟರು. ಈಗ ನನ್ನ ಸಂಗೀತದ ಹಾಡುಗಳನ್ನೂ ಕೂಡ ಅವರೇ ಬಿಡುಗಡೆ ಮಾಡುತ್ತಿದ್ದಾರೆ. ಅವರದು ಲಕ್ಕಿ ಹ್ಯಾಂಡ್ ಎಂದು ಹೇಳಿದರು. ಈ ಚಿತ್ರದ ನಾಯಕಿಯಾಗಿ ಅನುಷ್ಕಾರೈ ಅಭಿನಯಿಸಿದ್ದು ತನ್ನ ಪಾತ್ರದ ಬಗ್ಗೆ ಮಾತನಾಡಿದ ಅವರು ಮಹಾನುಭವರು ಹಾಗೂ ಪ್ರಾರ್ಥನಾ ಚಿತ್ರಗಳ ನಂತರ ಇದು ನನ್ನ ಮೂರನೇ ಚಿತ್ರ. ಒಬ್ಬ ಜರ್ನಲಿಸ್ಟ್ ಆಗಿ ನಾನೇ ಚಿತ್ರದಲ್ಲಿ ಅಭಿನಯಿಸಿದ್ದೇನೆ. ತುಂಬ ತೂಕ ಇರುವ ಪಾತ್ರ ಎಂದು ಹೇಳಿಕೊಂಡರು. ಈ ಚಿತ್ರದಲ್ಲಿ ೪ ಹಾಡುಗಳಿದ್ದು ನಾಗೇಂದ್ರ ಪ್ರಸಾದ್ ಹಾಗೂ ಮನು ಸಾಹಿತ್ಯ ರಚಿಸಿದ್ದಾರೆ. ಹೇಮಂತ್ ಅನುರಾಧಾ ಭಟ್, ಶಶಾಂಕ್ ಶೇಷಗಿರಿ ಹಾಡುಗಳಿಗೆ ದನಿಯಾಗಿದ್ದಾರೆ. ಮೋಹನ್ ಎಂ ಮುಗುಡೇಶ್ವರನ್ ಈ ಚಿತ್ರಕ್ಕೆ ಕ್ಯಾಮರಾ ವರ್ಕ್ ಮಾಡಿದ್ದಾರೆ.
#
No Comment! Be the first one.