ರಿಷಬ್ ಶೆಟ್ಟಿ ಅವರ ಕನಸಿನ ಪ್ರಾಜೆಕ್ಟು ಕಥಾ ಸಂಗಮ. ಏಳು ಜನ ನಿರ್ದೇಶಕರು, ಏಳು ಕತೆಗಳನ್ನು ಸೇರಿಸಿ ರೂಪಿಸಿರುವ ಸಿನಿಮಾ ಇದು. ಈಗಾಗಲೇ ಈ ಚಿತ್ರ ಪ್ರೇಕ್ಷಕ ವಲಯದಲ್ಲಿ ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಈ ಹೊತ್ತಿನಲ್ಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ಕಥಾ ಸಂಗಮದ ಹಾಡುಗಳನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ.
ಸಂಸ ಬಯಲು ರಂಗಮಂದಿರದಲ್ಲಿ ನೆರವೇರುತ್ತಿರುವ ಈ ಸಮಾರಂಭದಲ್ಲಿ ಸಂಗೀತ ಕಟ್ಟಿ, ವಾಸು ದೀಕ್ಷಿತ್, ಡಾಸ್ ಮೋಡ್, ರಾಜ್ ಬಿ ಶೆಟ್ಟಿ ಮತ್ತು ಅದಿತಿ ಸಾಗರ್ ಅವರ ಸಂಗೀತ ಕಾರ್ಯಕ್ರಮ ಕೂಡಾ ನೆರವೇರುತ್ತಿದೆ. ಪ್ರದೀಪ್ ಬಿ.ವಿ. ಮತ್ತು ಸಂಗಡಿಗರಿಂದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸಿನಿಮಾಗಳ ಆಯ್ದ ಗೀತೆಗಳ ಗಾಯನವೂ ಇದೆ. ಕಥಾ ಸಂಗಮದ ದೃಶ್ಯ ಗೀತೆ ಮತ್ತು ದೃಶ್ಯಗಳ ತುಣುಕುಗಳನ್ನೂ ಇಲ್ಲಿ ಪ್ರದರ್ಶಿಸಲಿದ್ದಾರೆ. ಸಾಮಾನ್ಯಕ್ಕೆ ಸಿನಿಮಾ ಕಾರ್ಯಕ್ರಮಗಳೆಂದರೆ ಸೀಮಿತ ಮಂದಿಗಷ್ಟೇ ಎಂಟ್ರಿ ಇರುತ್ತದೆ. ಆದರಿದು ಸಾರ್ವಜನಿಕರೂ ಖುಷಿಯಿಂದ ಪಾಲ್ಗೊಳ್ಳಬಹುದಾದ ಕಾರ್ಯಕ್ರಮವಾಗಿದೆ.
ರಿಷಬ್ ತಂಡದ ಯಾವುದೇ ಸಿನಿಮಾಗಳಲ್ಲಿ ಹಾಡುಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಕಥಾ ಸಂಗಮದ ಹಾಡುಗಳ ಕುರಿತಾಗಿಯೂ ಜನರಲ್ಲಿ ಸಾಕಷ್ಟು ಕುತೂಹಲಗಳಿವೆ. ಆ ಹಾಡುಗಳು ಹೇಗಿವೆ ಅನ್ನೋದು ಇವತ್ತೇ ಗೊತ್ತಾಗಲಿದೆ!
Comments