ಹಿಂದೆ ಕನ್ನಡ ಸಿನಿಮಾಗಳು ಕರ್ನಾಟಕಕ್ಕೆ ಹಾಗೇ ಅಕ್ಕ ಪಕ್ಕದ ರಾಜ್ಯಗಳನ್ನು ಹೊರತು ಪಡಿಸಿ ಮತ್ತೆಲ್ಲೂ ಬಿಡುಗಡೆಯ ಸಿಹಿ ಅನುಭವಿಸುತ್ತಿದ್ದ ಉದಾಹರಣೆಗಳೇ ಇರಲಿಲ್ಲ. ಆದರೆ ಈಗ ಹಾಗೇನು.. ಇಲ್ಲ. ಸ್ಯಾಂಡಲ್ ವುಡ್ ನ ಕನ್ನಡ ಸಿನಿಮಾಗಳು ಕರ್ನಾಟಕದಲ್ಲದೇ ಹೊರ ರಾಜ್ಯಗಳಲ್ಲಿ, ವಿದೇಶಗಳಲ್ಲಿಯೂ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಬಾಲಿವುಡ್ ನ ಸಿನಿಮಾಗಳಿಗೂ ಠಕ್ಕರ್ ಕೊಟ್ಟು ಮಕಾಡೆ ಮಲಗಿಸುವ ಮಟ್ಟಿಗೆ ಕನ್ನಡ ಚಿತ್ರಗಳು ಬೆಳೆದಿವೆ. ಬೆಳೆಯುತ್ತಿವೆ. ಕನ್ನಡದ ಕಂಪನ್ನು ಮತ್ತಷ್ಟು ಹೆಚ್ಚಿಸಿದ ಕೆಜಿಎಫ್ ಸಿನಿಮಾ ನೆನಪಿಗೆ ಬಾರದೇ ಉಳಿಯದು.
ಅಂದಹಾಗೆ ಇದೀಗ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಕವಚ ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಶಿವಣ್ಣ ಅಂದವಾಗಿ ಅಂಧನ ಪಾತ್ರದಲ್ಲಿ ನಟಿಸಿದ್ದಾರೆ. ಈ ನಡುವೆ ವಿದೇಶದಲ್ಲೂ ಕವಚ ತನ್ನ ದರ್ಬಾರ್ ತೋರಿಸೋಕೆ ತುದಿಗಾಲಿನಲ್ಲಿದ್ದು, ನಾಳೆಯಿಂದ ಅಮೆರಿಕಾದ ಸುಮಾರು 23ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಚಿತ್ರ ತೆರೆ ಕಾಣಲಿದೆ. ಜೊತೆಗೆ ಇದೇ ತಿಂಗಳ 28ರಿಂದ ಕೆನಡಾದಲ್ಲೂ ಕವಚ ತನ್ನ ಕಾರುಬಾರು ಶುರುಮಾಡಲಿದೆ.
ಜಿವಿಆರ್ ವಾಸು ನಿರ್ದೇಶನದಲ್ಲಿ ಮೂಡಿಬಂದಿರೋ ಕವಚ ಸಿನಿಮಾ ಮಲಯಾಳಂನ ಒಪ್ಪಂ ಚಿತ್ರದ ರಿಮೇಕ್. ಇದೊಂದು ಅಪ್ಪ ಮಗಳ ಬಾಂಧವ್ಯದ ಎಳೆಯನ್ನು ಹೊಂದಿರೋ ಸಿನಿಮಾವಾಗಿದೆ. ಇನ್ನು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ವಸಿಷ್ಠ ಸಿಂಹ, ಇಶಾ ಕೊಪ್ಪಿಕರ್ ಸೇರಿದಂತೆ ಬಹುತೇಕರು ಬಣ್ಣ ಹಚ್ಚಿದ್ದಾರೆ. ಈಗಾಗಲೇ ಮೇಕಿಂಗ್ ಹಾಗೂ ಹಾಡುಗಳಿಂದಲೇ ಜನಮೆಚ್ಚುಗೆ ಪಡೆದಿರೋ ಸಿನಿಮಾ ಮುಂದಿನ ದಿನಗಳಲ್ಲಿ ವಿದೇಶದಲ್ಲೂ ಧೂಳೆಬ್ಬಿಸುವ ನಿರೀಕ್ಷೆ ಇದೆ.
No Comment! Be the first one.