ಹ್ಯಾಟ್ರಿಕ್ ಹೀರೋ ಶಿವರಾಜ್ ಕಉಮಾರ್ ಅಭಿನಯದ ಕವಚ ಸಿನಿಮಾ ಈ ವಾರ ಬಿಡುಗಡೆಯಾಗಿದೆ. ಮಲಯಾಳಂನ ‘ಒಪ್ಪಂ’ ಸಿನಿಮಾದ ರಿಮೇಕ್ ಕನ್ನಡದ ‘ಕವಚ’. ಶಿವರಾಜ್ ಕುಮಾರ್ ಕಣ್ಣಿಲ್ಲದ ಅಂಧನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾರಣಕ್ಕೆ ಕವಚ ಸಾಕಷ್ಟು ಕುತೂಹಲ ಮೂಡಿಸಿತ್ತು.
ನ್ಯಾಯದ ವಿರುದ್ಧವಾದ ಒಂದು ತೀರ್ಪು, ಇದರಿಂದ ಎದುರಾಗುವ ಭೀಕರ ದುರಂತ. ಅನ್ಯಾಯಕ್ಕೊಳಗಾದ ವ್ಯಕ್ತಿ ಎಸಗುವ ಸೇಡಿನ ಸರಣಿ ಕೊಲೆಗಳು, ನ್ಯಾಯ ನೀಡಬೇಕಾದ ಸ್ಥಾನದಲ್ಲಿ ಕೂತು ತಪ್ಪು ತೀರ್ಪು ನೀಡಿದವನ ಪಾಪ ನಿವೇದನೆ… ಕಣ್ಣಿಲ್ಲದಿದ್ದರೂ ಮೈಯೆಲ್ಲಾ ಕಣ್ಣಾಗಿಸಿಕೊಂಡು ತನ್ನ ಸುತ್ತಲಿನವರನ್ನು ಕಾಯುವ, ಕರುಣಾಮಯಿಯಂತೆ ಪೊರೆಯುವ ನಾಯಕ ಜಯರಾಮ್ (ಶಿವರಾಜ್ಕುಮಾರ್), ಬಾಂಧವ್ಯಕ್ಕಿಂತಾ ಸ್ವಾರ್ಥ ಮುಖ್ಯ ಎಂದು ಹೊರಡುವ ಮನೆಮಂದಿ… ಹೀಗೆ ಫ್ಯಾಮಿಲಿ, ಸೆಂಟಿಮೆಂಟು, ಥ್ರಿಲ್ಲಿಂಗ್ ಎಲಿಮೆಂಟುಗಳನ್ನೆಲ್ಲಾ ಒಟ್ಟುಸೇರಿಸಿ ಮಾಡಿರುವ ಸಿನಿಮಾ ಕವಚ.
‘ಯಾರೊಂದಿಗೆ ನೀ ನಡೆಯಬೇಕು ಯಾರೊಂದಿಗೆ ನೀ ಬಾಳಬೇಕು ಎಂಬುದು ನಿನ್ನನ್ನು ಸೃಷ್ಟಿಸಿದ ಆ ದೇವರ ಶಾಸನ! ಪಾಲಿಗೆ ಬಂದ ಅನುಭಂದಗಳನ್ನು ನಂಬಿ ಆನಂದದಿಂದ ಬದುಕುವುದೇ ಜೀವನೇ… ಇದೇ ಸತ್ಯ’ ಅನ್ನೋದು ‘ಕವಚ’ದ ಅಂತಿಮ ತಿರುಳು!
ಶಿವರಾಜ್ ಕುಮಾರ್ ಅಂದರೇನೇ ಮಾಸ್ ಹೀರೋ ಅನ್ನೋ ಇಮೇಜು ಕನ್ನಡಿಗರ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿದೆ. ಹೀಗಿರುವಾಗ ಕಣ್ಣಿಲ್ಲದ ಅಂಧನಾಗಿ ಇಡೀ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಿದೆಲ್ಲಾ? ಅದು ಶಿವರಾಜ್ ಕುಮಾರ್ ರಂಥಾ ಸ್ಟಾರ್ ನಟನ ಪಾಲಿಗೆ ನಿಜಕ್ಕೂ ಸವಾಲಿನ ಕೆಲಸ. ಆದರೆ ತಮ್ಮೆಲ್ಲಾ ಇಮೇಜುಗಳನ್ನು ಪಕ್ಕಕ್ಕಿಟ್ಟು ಶಿವಣ್ಣ ಇಲ್ಲಿ ಅಮೋಘವಾಗಿ ನಟಿಸಿದ್ದಾರೆ. ಹಾಗೆಂದು ಇಲ್ಲಿ ಕಮರ್ಷಿಯಲ್ ಅಂಶಗಳಿಲ್ಲ ಅಂದುಕೊಳ್ಳಬೇಕಿಲ್ಲ ಶಿವಣ್ಣನ ಅಭಿಮಾನಿಗಳು ಇಷ್ಟ ಪಡುವ ಮಾಸ್ ಡೈಲಾಗುಗಳು, ಮೈ ಜುಮ್ಮೆನ್ನಿಸುವ ಹೊಡೆದಾಟದ ದೃಶ್ಯಗಳೂ ಇವೆ.
ಜಿ.ವಿ.ಆರ್. ವಾಸು ನಿರ್ದೇಶನದ ಈ ಸಿನಿಮಾ ಕ್ಷಣಕ್ಷಣಕ್ಕೂ ರೋಚಕ ತಿರುವುಗಳಿಂದ, ನೋಡುಗರ ಎದೆಯಲ್ಲಿ ಭಯ ಹುಟ್ಟಿಸುತ್ತಾ ಸಾಗುತ್ತದೆ. ಸಿನಿಮಾದ ಆರಂಭದಿಂದ ಕೊನೆಯು ತನಕ ಅಲ್ಲಲ್ಲಿ ಕೊಲೆ ರಕ್ತಪಾತಗಳು ಹೆಚ್ಚಿರುವುದು ಸ್ವಲ್ಪ ಹಿಂಸೆ ಅನಿಸುತ್ತದೆ. ಕನ್ನಡದ ಮಟ್ಟಿಗೆ ಈ ಮಟ್ಟಿಗಿನ ಕ್ರೌರ್ಯ ಪ್ರದರ್ಶನ ಬೇಕಿತ್ತಾ ಅನ್ನೋ ಪ್ರಶ್ನೆ ನಡುನಡುವೆ ಹುಟ್ಟಿಕೊಳ್ಳುತ್ತದೆ. ಆದರೆ ಸಿನಿಮಾದ ಕ್ಲೈಮ್ಯಾಕ್ಸ್ ನೋಡಿದಮೇಲೆ ಎಲ್ಲ ದೃಶ್ಯಗಳೂ ಪೂರಕವಾಗಿಯೇ ಇದೆ ಅನ್ನೋ ಅಭಿಪ್ರಾಯ ಕೂಡಾ ಮೂಡುತ್ತದೆ.
ಶಿವರಾಜ್ ಕುಮಾರ್, ವಸಿಷ್ಟ ಸಿಂಹ, ಬೇಬಿ ಮೀನಾಕ್ಷಿ, ಕೃತಿಕ ಜಯರಾಂ, ತಬಲಾ ನಾಣಿ ಪಾತ್ರಗಳು ಗಮನ ಸೆಳೆದರೆ ಇಷಾ ಕೊಪ್ಪೀಕರ್ ರೋಲು ಇಷ್ಟೇನಾ ಅನ್ನಿಸುತ್ತದೆ. ರಾಹುಲ್ ಶ್ರೀವಾತ್ಸವ್ ಛಾಯಾಗ್ರಹಣ ಕಥೆಗೆ ಪೂರಕವಾಗಿದೆ.
ಒಟ್ಟಾರೆ ಇದು ಶಿವಣ್ಣ ಅಭಿಮಾನಿಗಳು ಮಾತ್ರವಲ್ಲ ಫ್ಯಾಮಿಲಿ ಪ್ರೇಕ್ಷಕರನ್ನೂ ಸೆಳೆಯುವಂತಾ ಸಿನಿಮಾ ಆಗಿದೆ.