ಅದ್ಯಾಕೋ ಶಿವರಾಜ್ ಕುಮಾರ್ ಅಭಿನಯದ ಕವಚ ಚಿತ್ರದ ಬಿಡುಗಡೆಗೆ ಪದೇ ಪದೆ ವಿಘ್ನಗಳೇ ಎದುರಾಗುತ್ತಿವೆ. ಕಳೆದ ವರ್ಷದ ಕಡೇಯ ಹೊತ್ತಿಗೆಲ್ಲ ಕವಚ ಬಿಡುಗಡೆಯಾಗಬೇಕಿತ್ತು. ಆದರದು ಮುಂದಕ್ಕೆ ಹೋಗಿ, ಜನವರಿಯಲ್ಲಿ ಡೇಟು ಫಿಕ್ಸಾಗಿ ಅಲ್ಲಿಯೂ ಅಡ್ಡಗಾಲಾಗಿತ್ತು. ಆದರೀಗ ಬಿಡುಗಡೆಗೆ ಪಕ್ಕಾ ಡೇಟ್ರ ಫಿಕ್ಸಾಗಿದೆ.
ಈಗ ಹೊರ ಬಿದ್ದಿರೋ ಮಾಹಿತಿಯ ಪ್ರಕಾರ ಹೇಳೇದಾದರೆ ಫೆಬ್ರವರಿ ೨೮ರಂದು ರಾಜ್ಯಾಧ್ಯಂತ ಕವಚ ಬಿಡುಗಡೆಯಾಗಲಿದೆ. ಈ ಸಿನಿಮಾಕ್ಕಾಗಿ ಅಭಿಮಾನಿಗಳೆಲ್ಲ ಕಾದು ಕೂತಿದ್ದಾರೆ. ಆದರೆ ಅವರಿಗೆ ಪದೇ ಪದೆ ನಿರಾಸೆಯಾಗುತ್ತಿದೆ. ಈ ಬಗ್ಗೆ ಶಿವಣ್ಣನಿಗೂ ಬೇಸರವಿದೆ. ಈ ಬಾರಿ ಅಭಿಮಾನಿಗಳಿಗೆ ಯಾವ ಕಾರಣಕ್ಕೂ ನಿರಾಸೆ ಮಾಡಬಾರದೆಂಬ ಉದ್ದೇಶದಿಂದಲೇ ಬಿಡುಗಡೆಗೆ ಹೊಸಾ ಮುಹೂರ್ತ ನಿಗಧಿ ಮಾಡಲಾಗಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಸಿನಿಮಾ ಯಾನದಲ್ಲಿ ಮೈಲಿಗಲ್ಲಾಗಬಹುದಾದ ಸಾಧ್ಯತೆಗಳನ್ನೂ ಹೊಂದಿರೋ ಚಿತ್ರ ಕವಚ. ಈ ಸಿನಿಮಾ ಪ್ರತೀ ಪಲ್ಲಟಗಳೂ ಪ್ರೇಕ್ಷಕರನ್ನು ಸೆಳೆದುಕೊಂಡಿವೆ. ಅಭಿಮಾನದಾಚೆಗೆ ಎಲ್ಲರೂ ಈ ಚಿತ್ರವನ್ನು ನೋಡಲು ಕಾತರರಾಗಿದ್ದಾರೆ. ಕವಚ ಅದಕ್ಕೆ ತಕ್ಕುದಾದ ನಾನಾ ವಿಶೇಷತೆಗಳನ್ನೂ ಹೊಂದಿದೆ. ಕವಚ ಮಲೆಯಾಳಂನಲ್ಲಿ ಮೋಹನ್ ಲಾಲ್ ನಟಿಸಿದ್ದ ಸೂಪರ್ ಹಿಟ್ ಆಗಿದ್ದ ಒಪ್ಪಂನಿಂದ ಸ್ಫೂರ್ತಿ ಪಡೆದು ರಚಿಸಲ್ಪಟ್ಟಿರೋ ಕಥಾ ಹಂದರ ಹೊಂದಿರುವ ಚಿತ್ರ. ನಮ್ಮದೇ ನೆಲದ ಘಮಲು ಹೊತ್ತು ಸಿದ್ಧಗೊಂಡಿರೋ ಈ ಚಿತ್ರ ಈ ವಾರ ತೆರೆ ಕಾಣಲಿದೆ.
ಮನ ಮಿಡಿಯುವ ಕಥಾ ಹಂದರ ಹೊಂದಿರೋ ಕವಚದಲ್ಲಿ ಶಿವಣ್ಣ ಅಂಧನಾಗಿಯೂ ಮನೋಜ್ಞವಾಗಿ ನಟಿಸಿದ್ದಾರಂತೆ. ಈ ಮೂಲಕ ಕವಚ ಶಿವಣ್ಣ ಇಷ್ಟೂ ವರ್ಷಗಳ ಸಿನಿಮಾ ಯಾನದಲ್ಲಿ ಮಹತ್ವದ ಮೈಲಿಗಲ್ಲಾಗಿ ದಾಖಲಾಗುತ್ತದೆಂಬ ನಿರೀಕ್ಷೆಗಳೂ ಇವೆ. ಎಂ. ವಿ ಸತ್ಯನಾರಾಯಣ ಮತ್ತು ಎ.ಸಂಪತ್ ಜಂಟಿಯಾಗಿ ನಿರ್ಮಾಣ ಮಾಡಿರೋ ಕವಚವನ್ನು ಜಿವಿಆರ್ ವಾಸು ನಿರ್ದೇಶನ ಮಾಡಿದ್ದಾರೆ. ಇಶಾ ಕೊಪ್ಪೀಕರ್ ಶಿವಣ್ಣನಿಗೆ ಜೋಡಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಬೇಬಿ ಮೀನಾಕ್ಷಿ, ಕೃತಿಕಾ ಜಯರಾಮ್, ತಬಲಾ ನಾಣಿ, ರವಿ ಕಾಳೆ, ವಸಿಷ್ಠ ಸಿಂಹ ಮುಂತಾದವ ತಾರಾಗಣವೂ ಇದೆ. ಕ್ರೈಂ ಬೇಸಿನ ಈ ಕಥಾನಕ ಎಂಥವರನ್ನೂ ಕಾಡಬಲ್ಲಂಥಾ ಅಂಶಗಳನ್ನು ಅಡಕವಾಗಿಸಿಕೊಂಡಿದೆ, ಈಗಾಗಲೇ ಅರ್ಜುನ್ ಜನ್ಯಾ ಸಂಗೀತ ನೀಡಿರೋ ಹಾಡುಗಳೂ ಕೂಡಾ ಜನಮನ ಸೆಳೆದುಕೊಂಡಿವೆ.
No Comment! Be the first one.