ಈ ಹಿಂದೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾವನ್ನು ನಿರ್ದೇಶಿಸಿದ್ದ ಹೇಮಂತ್ ರಾವ್ ನಿರ್ದೇಶನದ ಎರಡನೇ ಸಿನಿಮಾ, ಪಿ.ಆರ್.ಕೆ. ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ಪುನೀತ್ ರಾಜ್ ಕುಮಾರ್ ನಿರ್ಮಿಸಿರುವ ಚಿತ್ರ ಅನ್ನೋ ಕಾರಣಕ್ಕೆ ತೀರಾ ಕುತೂಹಲ ಸೃಷ್ಟಿಸಿದ್ದ ಸಿನಿಮಾ ಕವಲು ದಾರಿ.

ಸರಿಸುಮಾರು ನಲವತ್ತು ವರ್ಷಗಳ ಹಿಂದೆ ನಡೆದ ತ್ರಿವಳಿ ಕೊಲೆಯ ನಿಗೂಢದ ಸುತ್ತಾ ತೆರೆದುಕೊಳ್ಳುವ ಸಿನಿಮಾ ಕವಲು ದಾರಿ. ಈಗಾಗಲೇ ಆಪರೇಷನ್ ಅಲಮೇಲಮ್ಮ ಸಿನಿಮಾದ ಮೂಲಕ ಭರವಸೆ ಮೂಡಿಸಿರೋ ರಿಷಿ ಈ ಸಿನಿಮಾದ ನಾಯಕ. ಪುರಾತತ್ವ ಇಲಾಖೆಯ ಅಧಿಕಾರಿ ಆತನ ಪತ್ನಿ ಮತ್ತು ಮಗಳು ನಿಗೂಢವಾಗಿ ಪ್ರಾಣ ಬಿಟ್ಟಿರುತ್ತಾರೆ. ಆ ಪ್ರಕರಣ ತನಿಖಾಧಿಕಾರಿ ಅನಂತ್ ನಾಗ್ ಕೂಡಾ ಪತ್ನಿ ಮತ್ತು ಮಗಳನ್ನು ಕಳೆದುಕೊಂಡಿರುತ್ತಾರೆ. ತನ್ನವರನ್ನು ಕಳೆದುಕೊಂಡ ಮೇಲೆ ಸಂಪೂರ್ಣವಾಗಿ ಬಾಟಲಿಯೊಳಗೆ ಕಳೆದು ಹೋಗಿರುತ್ತಾರೆ.

ಫ್ಲೈ ಓವರ್ ಕಾಮಗಾರಿಯ ಸಮಯದಲ್ಲಿ ಮೂರು ಜನರ ಸಾವನ್ನು ಸಾಕ್ಷೀಕರಿಸುವ ಅಸ್ಥಿಪಂಜರದ ಪಳೆಯುಳಿಕೆ ಸಿಗುತ್ತದೆ. ಸಂಚಾರಿ ಪೊಲೀಸ್ ಆಗಿದ್ದರೂ ಈ ಕ್ರೈಂ ಪ್ರಕರಣವನ್ನು ಬೇಧಿಸಬೇಕು ಅನ್ನೋ ಮುತುವರ್ಜಿ ನಾಯಕನದ್ದು. ಹಾಗೆ ಶುರುವಾಗೋ ತನಿಖೆಯಲ್ಲಿ ಎದುರಾಗುವ ಗೊಂದಲ, ಗೋಜಲುಗಳ ಹಾದಿಯೇ ಕವಲು ದಾರಿ!

ಇದರ ಜೊತೆಗೆ ‘ಹೆಡ್ ಲೈನಿನಲ್ಲೇ ಮಿಸ್ಟೇಕು ಬರೆಯೋ ರಬ್ಬಿಷ್ ನ್ಯೂಸ್ ಪೇಪರಿನ’ ಸಂಪಾದನೆಯಿಲ್ಲದ ಸಂಪಾದಕ, ಎವರ್ ಗ್ರೀನ್ ನಟಿ, ಆಕೆಯ ಕೊಲೆ, ಕಾರು ಚಾಲಕನಾಗಿದ್ದವನು ಮಾಡಬಾರದ್ದನ್ನೆಲ್ಲಾ ಮಾಡಿ ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗಿಬಿಡುವ ದುರಂತ… ಹೀಗೆ ಬಗೆ ಬಗೆಯ ಎಲಿಮೆಂಟುಗಳನ್ನೆಲ್ಲಾ ಜೋಡಿಸಿ ಸಿನಿಮಾ ಮಾಡಿದ್ದಾರೆ.

ಮೊದಲ ಸಿನಿಮಾದಲ್ಲಿ ನಿರ್ದೇಶನದ ಕಾರಣಕ್ಕೇ ಭರವಸೆ ಮೂಡಿಸಿದ್ದವರು ಹೇಮಂತ್ ರಾವ್. ಆದರೆ ಕವಲು ದಾರಿ ಅಲ್ಲಲ್ಲಿ ಅಡ್ಡದಾರಿ ಹಿಡಿಯಲು ನಿರ್ದೇಶಕರೇ ಕಾರಣ ಅನ್ನಿಸುತ್ತದೆ. ನೇರವಾಗಿ ಹೇಳಿ ಮುಗಿಸಬಹುದಾದ ವಿಷಯವನ್ನು ಅನಗತ್ಯ ಗೊಂದಲಗಳನ್ನು ಕ್ರಿಯೇಟ್ ಮಾಡಿ, ಅತಿಬುದ್ದಿವಂತಿಕೆ ಪ್ರದರ್ಶಿಸಲು ಹೋಗಿರುವುದು ಎಡವಟ್ಟಾದಂತೆ ಅನಿಸುತ್ತದೆ. ಅನಂತ್ ನಾಗ್ ಮತ್ತು ಅಚ್ಯುತ್ ಕುಮಾರ್ ಸಿನಿಮಾದಲ್ಲಿ ಪ್ರಧಾನ ಆಕರ್ಷಣೆ. ಈ ಇಬ್ಬರು ಶಕ್ತಿಶಾಲಿ ನಟರನ್ನೂ ಮೀರಿಸಿದ ನಟನೆ ಮಾಡಿರುವುದು ನಟ ಸಂಪತ್ ಕುಮಾರ್. ವಯಸ್ಸನ್ನು ಮೀರಿದ ಪಾತ್ರದಲ್ಲಿ ನಟಿಸುವುದು ಕೆಲವೇ ನಟರಿಂದ ಮಾತ್ರ ಸಾಧ್ಯ.

ಸಂಪತ್ ತಾನೆಂತಾ ನಟ ಅನ್ನೋದನ್ನು ಸಿಕ್ಕ ಅವಕಾಶಗಳಲ್ಲೆಲ್ಲಾ ಸಾಬೀತು ಮಾಡುತ್ತಲೇ ಬರುತ್ತಿದ್ದಾರೆ. ನವಾಜುದ್ದೀನ್ ಸಿದ್ದಿಕಿಯಂತಾ ತಾಕತ್ತಿರುವ ನಟ ಕನ್ನಡದಲ್ಲೂ ಇದ್ದಾರೆ ಅನ್ನೋದು ಸಂಪತ್‌ರನ್ನು ನೋಡಿದವರ ಅನಿಸಿಕೆ. ಹಿನ್ನೆಲೆ ಸಂಗೀತ ಹೊಸ ಫೀಲ್ ಕೊಡುತ್ತದೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಕಥೆಗೆ ಪೂರಕವಾಗಿದೆ. ಹಲವು ಕಡೆ ಸಂಭಾಷಣೆ ನೆಟ್ಟಗೆ ಕೇಳಿಸದೇ ಇರೋದು ಯಾರ ತಪ್ಪೋ ಗೊತ್ತಿಲ್ಲ.

ನಿರೂಪಣೆಯಲ್ಲಿ ಒಂದಿಷ್ಟು ಸ್ಪೀಡ್ ಇದ್ದಿದ್ದರೆ ಕಥೆಯಲ್ಲಿ ಕವಲಿದ್ದರೂ ದಾರಿ ಸುಗಮವಾಗಿರುತ್ತಿತ್ತು. ಏನೇ ಆಗಲಿ, ಉತ್ತಮ ನಟರ ಕಾರಣಕ್ಕಾದರೂ ಈ ಸಿನಿಮಾವನ್ನೊಮ್ಮೆ ನೋಡಬಹುದು.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಟಾಲಿವುಡ್ ಚಿತ್ರ ನಿರ್ದೇಶನ ಮಾಡಲಿದ್ದಾರಾ ಪ್ರಶಾಂತ್ ನೀಲ್?

Previous article

ಶಿವರಾಮೇಗೌಡರ ಬಾಯಿಗೆ ಬೀಗ ಹಾಕುವವರಾರು?

Next article

You may also like

Comments

Leave a reply

Your email address will not be published. Required fields are marked *