ಸಣ್ಣಪುಟ್ಟ ಕೆಲಸ ಮಾಡಿದರೂ ಮಹತ್ತರವಾದುದೇನನ್ನೋ ಕಡಿದು ಕಟ್ಟೆ ಹಾಕಿದಂತೆ ಪೋಸು ಕೊಡೋದರಲ್ಲಿ ಈ ಸಿನಿಮಾ ಮಂದಿ ನಿಸ್ಸೀಮರು. ಒಂದ್ಯಾವುದೋ ತಗಡು ಐಡಿಯಾ ಮಾಡಿ ಅದನ್ನೇ ಮಹಾನ್ ಸಾಧನೆ ಎಂಬಂತೆ ಮೆರೆದಾಡೋ ಜನರಿಗೇನೂ ಇಲ್ಲಿ ಕೊರತೆಯಿಲ್ಲ. ಕವಲುದಾರಿಯೆಂಬ ಸಿನಿಮಾ ನಿರ್ದೇಶಕರೂ ಕೂಡಾ ಇದೀಗ ಟಿಶ್ಯೂ ಪೇಪರ್ ಹಿಡಿದುಕೊಂಡು ಹೀನಾಮಾನ ಪೋಸು ಕೊಡಲಾರಂಭಿಸಿದ್ದಾರೆ. ಇಂಥಾ ಕಾಮಿಡಿ ಕಂಡು ಸಂತುಷ್ಟಗೊಂಡಿರೋ ಪ್ರೇಕ್ಷಕರು ಭರ್ಜರಿಯಾಗಿ ನಕ್ಕು ಹಗುರಾಗಿದ್ದಾರೆ.
ಬಿಡುಗಡೆಗೂ ಮುನ್ನವೇ ಇಂಥಾದ್ದೊಂದು ಪುಗಸಟ್ಟೆ ಕಾಮಿಡಿ ಶೋ ನಡೆಸಿ ಮನರಂಜನೆ ನೀಡಿದ ಕೀರ್ತಿ ಕವಲುದಾರಿ ಮಂದಿಗೂ, ಟಿಶ್ಯೂ ಪೇಪರಿಗೂ ಸಲ್ಲುತ್ತದೆ!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣ ಮಾಡಿರೋ ಚಿತ್ರ ಎಂಬ ಕಾರಣದಿಂದ ಕವಲುದಾರಿ ಒಂದಷ್ಟು ಪ್ರಚಾರ ಪಡೆದುಕೊಂಡಿದೆ. ಅನಂತ್ ನಾಗ್, ರಿಶಿ, ಸುಮನ್ ರಂಗನಾಥ್ ಮುಂತಾದವರ ತಾರಾಗಣವಿರೋ ಈ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶನ ಮಾಡಿದ್ದಾರೆ. ಸದ್ಯ ಒರೆಸಿ ಬಿಸಾಡೋ ಟಿಶ್ಯೂ ಪೇಪರ್ ಮೇಲೆ ಕವಲುದಾರಿಯ ಜಾಹೀರಾತು ಪ್ರಿಂಟ್ ಆಗಿರೋದರ ಹಿಂದಿರೋ ಮಾಸ್ಟರ್ ಮೈಂಡ್ ಕೂಡಾ ನಿರ್ದೇಶಕರದ್ದೇ!
ಈಗ ಹೇಳಿಕೇಳಿ ಪೋಸ್ಟರ್ಗಳನ್ನೂ ಹಾಕುವಂತಿಲ್ಲ. ಬ್ಯಾನರ್ಗಳನ್ನೂ ಕಟ್ಟುವಂತಿಲ್ಲ. ಹೀಗಿರೋವಾದ ಸಿನಿಮಾವನ್ನು ಜನಸಾಮಾನ್ಯರಿಗೆ ತಲುಪಿಸೋದು ಕೊಂಚ ಸವಾಲಾಗಿ ಮಾರ್ಪಟ್ಟಿದೆ. ಇಂಥಾ ಹೊತ್ತಲ್ಲಿ ಕವಲು ದಾರಿ ಚಿತ್ರದ ಬಿಡುಗಡೆ ದಿನಾಂಕ ಮುಂತಾದ ವಿವರಗಳಿರೋ ಟಿಶ್ಯೂ ಪೇಪರ್ ಈಗ ಸದ್ದು ಮಾಡುತ್ತಿದೆ. ಇದು ತಾನು ಜನರನ್ನು ತಲುಪಲು ಕಂಡು ಹಿಡಿದಿರೋ ಮಹಾನ್ ಕ್ರಿಯೇಟಿವ್ ಫಾರ್ಮುಲ ಎಂಬಂತೆ ನಿರ್ದೇಶಕರು ಪೋಸು ಕೊಡುತ್ತಿದ್ದಾರೆ. ಅಂದಹಾಗೆ ಈ ಸಿನಿಮಾದ ಪಬ್ಲಿಸಿಟಿಗಾಗಿ ಸಿಕ್ಕಾಪಟ್ಟೆ ಖರ್ಚು ಮಾಡಿ ಸಿನಿಮಾದ ಹೋರ್ಡಿಂಗುಗಳನ್ನು ಏರ್ಪೋರ್ಟ್ ಬಳಿ ಹಾಕಿದ್ದಾರಂತೆ. ಏರ್ಪೋರ್ಟ್ ಹತ್ತಿರ ಹೋರ್ಡಿಂಗುಗಳನ್ನು ಹಾಕಲು ಇಷ್ಟು ದುಡ್ಡು ಖರ್ಚು ಮಾಡೋಬದಲು ಬಸ್ ನಿಲ್ದಾಣದ ಬಳಿಯೋ, ಆಟೋ ಸ್ಟ್ಯಾಂಡ್ಗಳ ಹತ್ತಿರವೋ ಹಾಕಿದ್ದರೆ ಎಷ್ಟೋ ಸಹಕಾರಿಯಾಗುತ್ತಿತ್ತು.
ನಿರ್ದೇಶಕ ಹೇಮಂತ್ ರಾವ್ ಆರಂಭಿಕವಾಗಿ, ಪ್ರಯೋಗಾತ್ಮಕವಾಗಿ ಕೈ, ಬಾಯಿ ಒರೆಸೋ ಟಿಶ್ಯೂ ಪೇಪರಿನ ಮೇಲೆ ಕವಲುದಾರಿ ಜಾಹೀರಾತಿನ ಪ್ರಯೋಗ ಮಾಡಿದ್ದಾರೆ. ಇದಕ್ಕೆ ಸಿಕ್ಕಿರುವ ಭರಪೂರ ಮೆಚ್ಚುಗೆ ಕಂಡು ಉತ್ತೇಜಿತರಾಗಿರೋ ಹೇಮಂತ್ ಮುಂದಿನ ದಿನಗಳಲ್ಲಿ ಟಿಶ್ಯೂ ಪೇಪರ್ ಬಳಕೆಯಾಗೋ ಇನ್ನೂ ಒಂದಷ್ಟು ವಿಭಾಗಗಳ ಬಗ್ಗೆ ರಿಸರ್ಚ್ ನಡೆಸಿ ಅವುಗಳ ಮೇಲೆಯೂ ತಮ್ಮ ಕ್ರಿಯೇಟಿವಿಟಿಯ ಚಿತ್ತಾರ ಮೂಡಿಸಲು ಮನಸು ಮಾಡಿದರೆ ಚಿತ್ರರಂಗವನ್ನು ಬಾಧಿಸುತ್ತಿರುವ ಪ್ರಚಾರದ ಸಮಸ್ಯೆಯನ್ನು ತೊಲಗಿಸಿದಂತಾಗುತ್ತೆ.
ಈಗ ಕವಲುದಾರಿ ಚಿತ್ರದ ಜಾಹೀರಾತು ಆರಂಭಿಕವಾಗಿ ಹೊಟೇಲುಗಳಲ್ಲಿಡೋ ಟಿಶ್ಯೂಗಳ ಮೇಲೆ ರಾರಾಜಿಸುತ್ತಿವೆ. ಸಾಮಾನ್ಯವಾಗಿ ಜನ ಊಟವೆಲ್ಲ ಮುಗಿದ ನಂತರವಷ್ಟೇ ಅದರತ್ತ ಗಮನ ಹರಿಸುತ್ತಾರೆ. ಫಾಯಿಖಾನೆಯಲ್ಲಿ ಇಡಲಾಗುವ ಟಿಶ್ಯೂ ರೋಲ್ಗಳ ಮೇಲೆಯೂ ಇಂಥಾ ಜಾಹೀರಾತು ಬರುವಂತಾದರೆ ಇನ್ನೂ ಪರಿಣಾಮಕಾರಿಯಾಗಿರುತ್ತೆ. ಯಾಕೆಂದರೆ, ಉದರಬಾಧೆ ಕೆಳಗಿಳಿಯೋವಷ್ಟರಲ್ಲಿ ಟಿಶ್ಯೂ ಪೇಪರಿನಲ್ಲಿರೋ ಜಾಹೀರಾತು ಒಳಗಿಳಿಯುತ್ತದೆ. ಬಹುಶಃ ಮುಂದಿನ ದಿನಗಳಲ್ಲಿ ಕವಲುದಾರಿಯ ನಿರ್ದೇಶಕರು ಇದರತ್ತಲೂ ಗಮನ ಹರಿಸಬಹುದೇನೋ. ಚಿತ್ರರಂಗದ ಬೆಳವಣಿಗೆಯ ದೃಷ್ಟಿಯಿಂದ ಆ ಕೆಲಸ ಆದಷ್ಟು ಬೇಗನೆ ಆಗಲೆಂದು ಹಾರೈಸೋಣ…
No Comment! Be the first one.