ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹವಾ ಹೊಂದಿರುವ ಕನ್ನಡ ಸ್ಟಾರ್ಗಳಲ್ಲಿ ಪುನೀತ್ ರಾಜ್ಕುಮಾರ್ ಕೂಡಾ ಮುಂಚೂಣಿಯಲ್ಲಿದ್ದಾರೆ. ಅವರ ಫೇಸ್ಬುಕ್ ಅಕೌಂಟ್, ಫ್ಯಾನ್ ಪೇಜುಗಳ ಕ್ರೇಜ಼ು ಸಹ ಜೋರಾಗಿದೆ. ಆದರೆ ಅದೇಕೋ ಪುನೀತ್ ಟ್ವಿಟರ್ ಖಾತೆಯನ್ನು ಮಾತ್ರ ತೆರೆದಿರಲಿಲ್ಲ. ಇದೀಗ ಅದಕ್ಕೂ ಕಾಲ ಕೂಡಿ ಬಂದಿದೆ!
ಅಭಿಮಾನಿಗಳ ಅಭಿಲಾಶೆಯಂತೆ ಪುನೀತ್ ರಾಜ್ಕುಮಾರ್ ಅವರು ಟ್ವಿಟರ್ ಖಾತೆ ಆರಂಭಿಸಿದ್ದಾರೆ. ಅದಾಗಲೇ ಗಣನೀಯ ಸಂಖ್ಯೆಯಲ್ಲಿ ಅವರಿಗೆ ಫಾಲೋವರ್ಸ್ ಕೂಡಾ ಜಮೆಯಾಗಿದ್ದಾರೆ. ಪುನೀತ್ ಟ್ವಿಟರ್ಗೆ ಅಡಿಯಿರಿಸುತ್ತಲೇ ಅವರು ಯಾರನ್ನು ಫಾಲೋ ಮಾಡುತ್ತಾರೆ, ಅವರೇನು ಟ್ವೀಟ್ ಮಾಡುತ್ತಾರೆಂಬ ಬಗ್ಗೆ ಅಭಿಮಾನಿಗಳೆಲ್ಲ ಕುತೂಹಲಗೊಂಡಿದ್ದರು. ಆದರೆ ಖಾತೆ ತೆರೆದು ತಿಂಗಳಾಗುತ್ತಾ ಬಂದಿದ್ದರೂ ಒಂದೇ ಒಂದು ಟ್ವೀಟ್ ಕೂಡಾ ಜಮೆಯಾಗಿರಲಿಲ್ಲ. ಈಗ ಪವರ್ ಸ್ಟಾರ್ ಕಡೆಯಿಂದ ಮೊದಲ ಟ್ವೀಟ್ ಅನಾವರಣಗೊಂಡಿದೆ!
ಪುನೀತ್ ಮೊದಲ ಟ್ವೀಟ್ ಆಗಿ ಕವಲುದಾರಿ ಚಿತ್ರದ ಟೀಸರ್ ಅನ್ನು ಹಾಕಿಕೊಂಡಿದ್ದಾರೆ. ಅದಕ್ಕೆ ವ್ಯಾಪಕ ಪ್ರತಿಕ್ರಿಯೆಗಳೂ ಬಂದಿವೆ. ರಿಷಿ ಅಭಿನಯದ ಕವಲುದಾರಿ ಚಿತ್ರ ಪುನೀತ್ ಅವರ ಪಿಆರ್ಕೆ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿರೋ ಮೊದಲ ಚಿತ್ರ. ಆದ್ದರಿಂದ ಈ ಚಿತ್ರದ ಬಗ್ಗೆ ಗಂಭೀರವಾಗಿ ಗಮನ ಹರಿಸಿರುವ ಪುನೀತ್ ತಮ್ಮ ಟ್ವಿಟರ್ ಖಾತೆಯನ್ನೂ ಕೂಡಾ ಅಭಿಮಾನಿಗಳಿಗೆ ಅದರ ಅಪ್ಡೇಟ್ಸ್ ಕೊಡುವುದಕ್ಕಾಗಿಯೇ ಬಳಸಿಕೊಂಡಿದ್ದಾರೆ.
ಈಗಾಗಲೇ ಪುನೀತ್ ಅವರ ಪಿಆರ್ಕೆ ಆಡಿಯೋ ಕಂಪೆನಿ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಈ ಸಂಸ್ಥೆಯಿಂದ ಬಿಡುಗಡೆಯಾದ ಹಾಡುಗಳು ಹಿಟ್ ಆಗುತ್ತವೆ ಎಂಬ ನಂಬಿಕೆಯೂ ಬೆಳೆದುಕೊಂಡಿದೆ. ಪುನೀತ್ ಅವರ ಟ್ವಿಟರ್ ಅಕೌಂಟ್ ಕೂಡಾ ತಮ್ಮ ಬ್ಯಾನರಿನಡಿಯಲ್ಲಿ ಮೂಡಿ ಬರುವ ಚಿತ್ರಗಳ ಬಗ್ಗೆ ಮಾಹಿತಿ ನೀಡಲು ಬಳಸಿಕೊಳ್ಳು ಮನಸು ಮಾಡಿದಂತಿದೆ.
#