ಸ್ಯಾಂಡಲ್ ವುಡ್ ಡಬ್ಬಿಂಗ್ ವಿರೋಧ ಮಾಡುತ್ತಿದ್ದ ಕಾಲ ಮರೆಯಾಗೋಯ್ತು. ನೆಂಟರಿಷ್ಟರಂತೆ ಪರಭಾಷಾ ಸಿನಿಮಾಗಳು ಕನ್ನಡದ ನೆಲಕ್ಕೆ ಕಾಲಿಟ್ಟು ಗೆದ್ದು, ಇನ್ನೂ ಕೆಲವು ಸಿನಿಮಾಗಳು ಹೇಳ ಹೆಸರಿಲ್ಲದೇ ಅಟ್ಟರ್ ಫ್ಲಾಪ್ ಆದ ಉದಾಹರಣೆಗಳಿಗೇನು ಬರವಿಲ್ಲ. ಆದರೆ ಬೇರೆ ಭಾಷೆಗೆ ಡಬ್ ಆದ ಬಹುತೇಕ ಕನ್ನಡ ಸಿನಿಮಾಗಳು ಗೆಲುವಿನ ನಗೆ ಬೀರಿದ ಸಾಕಷ್ಟು ಉದಾಹರಣೆಗಳಿವೆ. ಇನ್ನು ಇತ್ತೀಚಿಗೆ ರಿಲೀಸ್ ಆಗಿ ಭಾರತ ಚಿತ್ರರಂಗದ ಇತಿಹಾಸದಲ್ಲೇ ತಲ್ಲಣ ಸೃಷ್ಟಿಸಿದ ಕೆಜಿಎಫ್ ಚಿತ್ರ ಎಲ್ಲ ದಾಖಲೆಗಳನ್ನು ಸರಿಗಟ್ಟಿವೆ.
ಇಷ್ಟೆಲ್ಲಾ ವಿಚಾರ ಯಾಕಪ್ಪ ಅಂದ್ರೆ ಕಳೆದ ವರ್ಷ ಜೂನ್ ತಿಂಗಳಲ್ಲಿ ಕರ್ನಾಟಕದಲ್ಲಿ 150ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ, ಮುಖ್ಯ ಥಿಯೇಟರ್ ಗಳಲ್ಲಿ 25 ದಿನಗಳ ಕಾಲ ಹೌಸ್ ಪುಲ್ ಪ್ರದರ್ಶನ ಹಾಗೂ ಇನ್ನಿತರ ಚಿತ್ರಮಂದಿರಗಳಲ್ಲಿ 50ಕ್ಕೂ ಹೆಚ್ಚು ದಿನಗಳ ಪ್ರದರ್ಶನ ಕಂಡಿದ್ದ ಹಾರರ್ ಸಿನಿಮಾ ಕೆಲವು ದಿನಗಳ ನಂತರ ಪರಭಾಷೆಗಳಲ್ಲೂ ಕಮಾಲು ಮಾಡಲು ರೆಡಿಯಾಗುತ್ತಿದೆ.
ಹೌದು, ಶ್ರೀನಿ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿದ್ದ ಕೆಲವು ದಿನಗಳ ನಂತರ ಸಿನಿಮಾವು ಬಹುತೇಕ ಹೊಸ ಮುಖಗಳಿಂದಲೇ ನಿರ್ಮಾಣವಾಗಿದ್ದ ಥ್ರಿಲ್ಲರ್ ಮತ್ತು ಹಾರರ್ ಸಿನಿಮಾ. ಮೇಲಾಗಿ ಸಾಮಾಜಿಕ ಜಾಗೃತಿಯನ್ನು ಮೂಡಿಸುವಂತಹ ಕಳಕಳಿಯನ್ನು ಹೊಂದಿರುವಂತಹ ಸಿನಿಮಾ.
ಪ್ರವಾಸಿ ತಾಣಗಳಿಗೆ ಪ್ರವಾಸಕ್ಕೆ ಹೋದ ಕುಟುಂಬ, ಗಂಡ ಹೆಂಡತಿ, ಪ್ರೇಮಿಗಳು ಪಡೆದ ಹೊಟೇಲ್ ರೂಮ್ ನಲ್ಲಿ ಹಿಡನ್ ಕ್ಯಾಮೆರಾಗಳನ್ನು ಅಳವಡಿಸಿ ಮುಂದೆ ಸಂಬಂಧಪಟ್ಟವರನ್ನು ಬ್ಲ್ಯಾಕ್ ಮೇಲ್ ಮಾಡುವಂತಹ ಚಾಳಿ ಹೆಚ್ಚಾಗಿರುವ ಕುರಿತಾಗಿ; ಅಲ್ಲದೇ ಪ್ರಾಣಪಾಯದಲ್ಲಿರುವ ವ್ಯಕ್ತಿಯನ್ನು ಕಿಂಚಿತ್ತು ಮಾನವೀಯತೆ ಇಲ್ಲದೇ ಅವನನ್ನು-ಅವಳನ್ನು ಬದುಕಿಸುವ ದೊಡ್ಡ ಮನಸ್ಸು ಮಾಡದಿರುವ ಕುರಿತಾದ ಎಳೆಯನ್ನಿಟ್ಟುಕೊಂಡು ಕೆಲವು ದಿನಗಳ ನಂತರ ಸಿನಿಮಾವು ಮೂಡಿಬಂದಿತ್ತು. ಇನ್ನು ಸ್ನೇಹಿತರೊಬ್ಬರ ವಿವಾಹ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಚಂದ್ರಾಪುರಕ್ಕೆ ಐದು ಜನರ ತಂಡ ಹೊರಡುತ್ತದೆ. ದಾರಿ ಮಧ್ಯೆ ಆ ಐದು ಜನ ಸಾಫ್ಟ್ ವೇರ್ ಇಂಜಿನಿಯರ್ಸ್ ಗಳಿಗೆ ಎದುರಾಗುವ ಅನುಭವಗಳು, ಭಯಾನಕ ಸನ್ನಿವೇಶಗಳೇ ಚಿತ್ರದ ಹೂರಣವಾಗಿತ್ತು ಕೂಡ.
ಈ ಸಿನಿಮಾ ಕನ್ನಡದಲ್ಲಿ ರಿಲೀಸ್ ಆದ ನಂತರ ಚಿತ್ರದ ಕುರಿತಾಗಿ ಸಕಾರಾತ್ಮಕ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದ ಹೀರೋಸ್ ಇಂಟರ್ ನ್ಯಾಷನಲ್ ಅವರು, ಈ ಸಿನಿಮಾದ ಡಿಜಿಟಲ್ ರೈಟ್ಸ್ ನ್ನು ಖರೀದಿಸಿದ್ದಾರೆ. ಅಲ್ಲದೇ ಹಿಂದಿ ಭಾಷೆಗೂ ಈ ಚಿತ್ರವನ್ನು ಡಬ್ ಮಾಡಲಾಗಿದೆ. ಏಕ್ ಔರ್ ಕಾಲ್ ಎಂಬ ಟೈಟಲ್ ನಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು ಬರೋಬ್ಬರು 400+ ಸ್ಕ್ರೀನ್ ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಇನ್ನು ತೆಲುಗು ಭಾಷೆಗೂ ಸಿನಿಮಾ ಡಬ್ ಆಗಿದ್ದು, ಕೆಲವು ದೃಶ್ಯಗಳನ್ನು ಮರು ಚಿತ್ರೀಕರಣವನ್ನು ಮಾಡಲಾಗಿದೆಯಂತೆ. ಇದು ಕಕ್ಷಾ ಆನ್ ಎನ್ ಎಚ್ 42 ಟೈಟಲ್ ನಲ್ಲಿ ಮುಂದಿನ ತಿಂಗಳು ರಿಲೀಸ್ ಆಗಲಿದೆ. ಅಲ್ಲದೇ ತಮಿಳು, ಮಲಯಾಳಂ ಭಾಷೆಗೂ ಡಬ್ಬಿಂಗ್ ಮಾತುಕತೆಯಲ್ಲಿದೆ.
ಚೊಚ್ಚಲ ಚಿತ್ರವೇ ಇಷ್ಟರಮಟ್ಟಿಗೆ ಯಶಸ್ಸು ಕಂಡಿರುವ ಕುರಿತು ಹರ್ಷ ವ್ಯಕ್ತಪಡಿಸಿರುವ ನಿರ್ದೇಶಕ ಶ್ರೀನಿ, ಸದ್ಯಕ್ಕೆ ಮುಂದಿನ ಪ್ರಾಜೆಕ್ಟ್ ಗಳ ಕಡೆಗೆ ಗಮನ ಹರಿಸಲಿದ್ದಾರೆ. ಹೇಳ ಹೆಸರಿಲ್ಲದೇ ಕಾಣದಂತೆ ಮರೆಯಾಗುವ ಸಿನಿಮಾಗಳ ಮಧ್ಯೆ ಕನ್ನಡ ಚಿತ್ರಗಳು ಸದೃಢವಾಗಿ ನೆಲೆಯೂರಿ ಬೇರೆ ಭಾಷೆಗಳಿಗೂ ತಮ್ಮ ಗಮಲನ್ನು ಹರಿಸುವಲ್ಲಿ ಕಾರ್ಯೋನ್ಮುಖವಾಗುತ್ತಿರುವುದು ಕನ್ನಡಿಗರು ಹೆಮ್ಮೆ ಪಡಬೇಕಾದ ಸಂಗತಿ. ಕೆಲವು ದಿನಗಳ ನಂತರ ಸಿನಿಮಾ ತಂಡಕ್ಕೆ, ನಿರ್ದೇಶಕರಿಗೆ ಸಿನಿಬಜ್ ಕಡೆಯಿಂದ ಶುಭ ಹಾರೈಕೆಗಳು.
– ಸಚಿನ್ ಕೃಷ್ಣ
No Comment! Be the first one.