ರಾಜ್ಯಾದ್ಯಂತ ಇನ್ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವ, ಹಲವಾರು ತಂಡಗಳಿಂದ ಇನ್ನೂ ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಇನ್ನು ಪ್ರದರ್ಶನ ಕಾಣುತ್ತಲೇ ಇರುವ ಹನುಮಂತ ಹಾಲಿಗೇರಿಯವರ “ಊರು ಸುಟ್ಟರೂ ಹನುಮಪ್ಪ ಹೊರಗ” ನಾಟಕ ಈಗ “ಜೈ ಕೇಸರಿನಂಧನ” ಸಿನೆಮಾವಾಗಿ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ದತೆ ನಡೆಸಲಾಗುತ್ತಿದೆ.
ಸಾಣೆಹಳ್ಳಿಯ ಶಿವಸಂಚಾರ, ಹೂವಿನ ಹಡಗಲಿಯ ರಂಗಭಾರತಿ, ಬೆಂಗಳೂರಿನ ವಿಕಸಂ ತಂಡಗಳಿಂದ ಪ್ರತಿದಿನವೂ ಒಂದಲ್ಲಾ ಒಂದು ಕಡೆ ಪ್ರದರ್ಶನ ಕಾಣುತ್ತಲೇ ಇರುವ ಈ ನಾಟಕವೂ ರಾಜ್ಯಾದ್ಯಂತ ಜನಮನ್ನಣೆ ಗಳಿಸಿದೆ. ಈ ಹಿಂದೆ ಧಾರವಾಡದ ಆಟಮಾಟ, ಚಿತ್ರದುರ್ಗದ ಜಮುರಾ ತಂಡಗಳಿಂದ ರಾಜ್ಯದ್ಯಂತ ನೂರಾರು ಪ್ರದರ್ಶನಗಳನ್ನು ಕಂಡಿತ್ತು.
ಯುವ ಬರಹಗಾರ ಹನುಮಂತ ಹಾಲಿಗೇರಿಯವರ ಕೆಂಗುಲಾಬಿ ಕಾದಂಬರಿಯನ್ನು ಆಧರಿಸಿ ಅದೇ ಹೆಸರಿನಲ್ಲಿ ಸಿನೆಮಾ ನಿರ್ದೇಶಿಸಿದ್ದ ಶ್ರೀಧರ ಜಾವೂರ ಅವರೇ ಈ ಸಿನೆಮಾವನ್ನು ಕೂಡ ನಿರ್ದೇಶನ ಮಾಡಿದ್ದಾರೆ. ಈ ವರ್ಷ ಕೆಂಗುಲಾಬಿ ಚಲನಚಿತ್ರಕ್ಕೆ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಕಥಾ ಪ್ರಶಸ್ತಿ ಸಿಕ್ಕಿದೆ.
ಹನುಮಪ್ಪಗಾಗಿ ಎರಡು ಗ್ರಾಮಗಳ ಜನರು ನಡೆಸುವ ಕಿತ್ತಾಟವೇ ಈ ಸಿನೆಮಾದ ಕಥಾವಸ್ತು. ಎರಡೂ ಗ್ರಾಮಗಳಿಗೆ ಸಂಬಂಧಿಸಿದ ಹನುಮಪ್ಪನನ್ನು ರಾತ್ರೋರಾತ್ರಿ ಒಂದೂರಿನವರು ಕದ್ದು ಒಯ್ಯುತ್ತಾರೆ. ಮರುದಿನ ಹನುಮಪ್ಪನನ್ನು ಇನ್ನೊಂದು ಊರಿನವರು ಹುಡುಕಿಕೊಂಡು ಬಂದಾಗ ಎರಡೂ ಊರುಗಳ ನಡುವೆ ದೊಡ್ಡ ಗಲಭೆಯೇ ಆಗುತ್ತದೆ. ಈ ನ್ಯಾಯ ಆ ಊರಿನ ಪುಡಾರಿ ರಾಜಕಾರಣಿಗಳಿಂದ ಪೊಲೀಸ್ ಠಾಣೆ ಮೆಟ್ಟಿಲೇರುತ್ತದೆ. ಪೊಲೀಸರು ಹನುಮಪ್ಪನನ್ನು ಕದ್ದ ಆರೋಪಿಗಳನ್ನು ಹುಡುಕಿಕೊಂಡ ಆರೋಪಿಗಳು ಸಿಗದಿದ್ದರಿಂದ ಹನುಮಪ್ಪನನ್ನು ಒಯ್ದು ಜೈಲಿನಲ್ಲಿಡುತ್ತಾರೆ. ಅಲ್ಲಿಂದಾಚೆ ಪೊಲೀಸ್ ಠಾಣೆಯೇ ದೇವಾಲಯವಾಗಿ ಪೋಲಿಸರೇ ಪುಜಾರಿಗಳಾಗು ಪ್ರಸಂಗ ಬಂದೊದಗುತ್ತದೆ. ಈ ಹನುಮಪ್ಪನಿಗಾಗಿ ಹತ್ತಾರು ವರ್ಷಗಳವರೆಗೆ ಹನುಮಪ್ಪನಿಗಾಗಿ ಕೋರ್ಟಿನಲ್ಲಿ ವಾದ ಮಾಡಿ ಹೈರಾಣಾಗುವ ಎರಡು ಊರುಗಳ ಜನರು ತಮ್ಮ ಮನೆಮಠವನ್ನೆಲ್ಲ ಕಳೆದುಕೊಂಡು ಬೀದಿಪಾಲಾಗುವ ಪರಿಸ್ಥಿತಿಯನ್ನು ತಂದುಕೊಳ್ಳುವುದನ್ನು ಸಿನೆಮಾ ವಿಡಂಬನಾತ್ಮಕವಾಗಿ ನಿರೂಪಿಸುತ್ತಾ ಹೋಗುತ್ತದೆ. ಪ್ರಸ್ತುತ ಸಮಾಜದಲ್ಲಿ ಧರ್ಮ-ಧರ್ಮಗಳ ನಡುವೆ ಕೋಮು ಗಲಬೆಗಳಿಗೆ ಬೆಂಕಿಕಡ್ಡಿ ಗೀರುತ್ತಿರುವರು ಈ ಸಿನೆಮಾ ನೋಡಿದ ಮೇಲೆ ಖಂಡಿತವಾಗಿಯೂ ಪರಿವರ್ತನೆಯಾಗುತ್ತಾರೆ. ಎಂದು ನಿರ್ದೇಶಕ ಶ್ರೀಧರ ಭರವಸೆ ವ್ಯಕ್ತಪಡಿಸುತ್ತಾರೆ.
ಶಶಿ ಧಾನಿ, ಪ್ರವೀಣ ಪತ್ರಿ, ಶಿವರಾಜ್ ಪಾಟೀಲ್ ಹೂವಿನ ಹಡಗಲಿ, ನಾರಾಯಣಸಾ ಬಾಂಢಗೆ ಮತ್ತು ಲಕ್ಷ್ಮಣ ಸಿಂಗ್ರಿ ಸೇರಿಕೊಂಡು ಥಿಂಕ್ ಪೊಸಿಟಿವ ಸ್ಟುಡಿಯೋ ಹೆಸರಿನಲ್ಲಿ ಈ ಸಿನೆಮಾ ನಿರ್ಮಿಸಿದ್ದು, ಸಿನೆಮಾದ ಎಲ್ಲ ಕೆಲಸಗಳು ಮುಗಿದಿವೆ. ಸಾಹಿತ್ಯಾಧಾರಿತ ಕೃತಿಗಳನ್ನು ಸಣ್ಣ ಬಜೆಟ್ಟಿನಲ್ಲಿ ಕಲಾತ್ಮಕ ಸಿನೆಮಾ ಮಾಡಲಾಗುತ್ತಿದೆ ಎಂಬ ಆರೋಪ ಎಲ್ಲೆಡೆಯೂ ಕೇಳಿ ಬರುತ್ತಿದೆ. ಆದರೆ, ಥಿಂಕ್ ಪೊಜಿಟಿವ್” ಗೆಳೆಯರು ಯಾವುದಕ್ಕೆ ಕೊರತೆಯಾಗದಂತೆ ಕೇಳಿದ್ದಕ್ಕೆಲ್ಲ ತಥಾಸ್ಥು ಎಂದಿದ್ದರಿಂದ ಸಿನೆಮಾ ಅದ್ಧೂರಿಯಾಗಿಯೇ ಮೂಡಿ ಬಂದಿದೆ, ಆರ್ಟ್ ಮತ್ತು ಕಮರ್ಶಿಯಲ್ ಅಂಶಗಳನ್ನು ಹದವಾಗಿ ಬೆರೆಸಿ ಉತ್ತರ ಕರ್ನಾಟಕದ ಒಂದು ಒಳ್ಳೆಯ ಚರ್ಚೆಯಾಗಬಹುದಾದ ಜವಾರಿ ಸಿನೆಮಾವಾಗಿ ರೂಪಿಸಲು ಶಕ್ತಿಮೀರಿ ಪ್ರಯತ್ನಿಸಿದ್ದೇವೆ ಎಂದು ಶ್ರೀಧರ ಖುಷಿಯಿಂದ ಹೇಳಿಕೊಂಡರು.
ಹಿರಿಯ ಕಲಾವಿದರಾದ ಗುರುರಾಜ ಹೊಸಕೊಟೆ, ರಾಜು ತಾಳಿಕೊಟೆಯವರನ್ನು ಹೊರತುಪಡಿಸಿದರೆ ಉಳಿದವರೆಲ್ಲ ಹೊಸಬರೇ. ಉತ್ತರ ಕರ್ನಾಟಕದ ಪ್ರತಿಭೆಗಳಾದ ಶಶಿ ದಾನಿ, ಕಲ್ಲೇಶವರ್ಧನ, ಪ್ರವೀಣ ಪತ್ರಿ, ಅನಿಲ್ ಜಾವೂರ, ರಾಜು ತಾಳಿಕೋಟಿಯವರ ಮಗ ಭರತ ತಾಳಿಕೋಟೆ, ನಾಯಕರಾಗಿ ನಟಿಸಿದ್ದು, ಅಮೃತ ಆರ್ ಗಡ್ಡದವರ, ಅಶ್ವಿಣಿ, ಅಮೃತ ಕಾಳೆ ಮತ್ತು ಅಂಜಶ್ರಿಯವರು ನಾಯಕಿಯರಾಗಿ ನಟಿಸಿದ್ದಾರೆ.
ಚಿತ್ರಕಥೆ, ಸಂಬಾಷಣೆ, ನಿರ್ದೆಶನದ ಜವಾಬ್ಧಾರಿಯನ್ನು ಶ್ರೀಧರ ಜಾವೂರ ಹೊತ್ತಿದ್ದು, ನಾಗೇಶ ವಿ ಆಚಾರ್ಯರ ಛಾಯಾಗ್ರಹಣ, ರಾಜಕಿಶೋರ್ ರಾವ್ ಸಂಗೀತ, ಈ ಎಸ್ ಈಶ್ವರ ಸಂಕಲನ, ವಿ ನಾಗೇಶ ನೃತ್ಯ ಸಂಯೋಜನೆ ಮತ್ತು ತ್ರಿಲ್ಲರ್ ಮಂಜು ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ.
#
No Comment! Be the first one.