ಬದುಕು ನಿರ್ದಯಿ ಅನ್ನಿಸೋದೇ ಇಂಥಾ ಸಂದರ್ಭಗಳಲ್ಲಿ. ಕನ್ನಡ ಚಿತ್ರರಂಗದಲ್ಲಿ ಸರಿ ಸುಮಾರು 55 ಸಿನಿಮಾಗಳಿಗೆ ನಿರ್ದೇಶಕರಾಗಿ ಕೆಲಸ ಮಾಡಿರುವವರು ಬಿ.ಆರ್. ಕೇಶವ. ಸಿನಿಮಾ ಮಾಡೋದು ತುಂಬಾ ಕಷ್ಟದ ಕೆಲಸ ಅಂತ ಅಂದುಕೊಳ್ಳುವ ಕಾಲದಲ್ಲಿ ತಿಂಗಳಿಗೊಂದು ಚಿತ್ರವನ್ನು ಸುತ್ತಿ ಬಿಸಾಕುತ್ತಿದ್ದವರು ಇದೇ ಕೇಶವ್.
ಆಗಿನ್ನೂ ಎಂಜಿನಿಯರಿಂಗ್ ಓದುತ್ತಿದ್ದಾಗಲೇ ಧಾರಾವಾಹಿಗಳ ನಿರ್ದೇಶನ ಶುರು ಮಾಡಿದ ಕೇಶವ್ ಅತೀ ಕಡಿಮೆ ವಯಸ್ಸಿಗೇ ಡೈರೆಕ್ಟರ್ ಕ್ಯಾಪ್ ತೊಟ್ಟವರು. ಈ ವರೆಗೆ ಇವರು ನಿರ್ದೇಶಿಸಿದ ಸಿನಿಮಾಗಳ ಸಂಖ್ಯೆ ಬರೋಬ್ಬರಿ 55. ಕೇಶವ್ ಸಿನಿಮಾ ಮಾಡೋ ಸ್ಪೀಡು ನೋಡಿ ‘ಈತ ಸಬ್ಸಿಡಿಗಾಗಿ ಸಿನಿಮಾ ಸುತ್ತುತ್ತಾರೆ’ ಅಂತೆಲ್ಲಾ ಸುದ್ದಿ ಹಬ್ಬುತ್ತಿದ್ದವು. ಆದರೆ ಐವತ್ತೈದು ಚಿತ್ರಗಳಲ್ಲಿ ಬರೀ ಐದು ಸಿನಿಮಾ ಮಾತ್ರ ಸಬ್ಸಿಡಿ ಪಡೆದಿವೆ ಅನ್ನೋದು ವಾಸ್ತವ. ಡೈರೆಕ್ಷನ್ ಜೊತೆಗೆ ಇಪ್ಪತ್ತೆರಡು ಚಿತ್ರಗಳ ನಿರ್ಮಾಣವನ್ನೂ ಮಾಡಿದರು. ಇವರು ತಯಾರು ಮಾಡಿದ ಸಿನಿಮಾಗಳು ಕಡಿಮೆ ಬಜೆಟ್ಟಿನವು ಅನ್ನೋದು ಬಿಟ್ಟರೆ ತೀರಾ ಕಳಪೆ ಅನ್ನಿಸಿಕೊಂಡಿಲ್ಲ. ಮೃಗ, ಸ್ವಚ್ಚ ಭಾರತ ಮುಂತಾದ ಸಿನಿಮಾಗಳು ಅದಕ್ಕೆ ಸಾಕ್ಷಿ.

ಕೇಶವ್ ವಿದ್ಯಾವಂತ. ಸಿನಿಮಾಗಾಗೇ ತಮ್ಮಿಡೀ ಬದುಕನ್ನು ಸವೆಸಿದ್ದಾರೆ. ಒಂದರ ನಂತರ ಒಂದು ಚಿತ್ರಗಳನ್ನು ರೂಪಿಸುತ್ತಿದ್ದ ಬಿ.ಆರ್. ಅದೆಷ್ಟು ಬ್ಯುಸಿ ಇದ್ದರೆಂದರೆ, ಇವರಿಗೆ ಮದುವೆಯಾಗಲೂ ಪುರುಸೊತ್ತು ಸಿಕ್ಕಿರಲಿಲ್ಲ!
ಬಿ.ಆರ್. ಕೇಶವ್ ತೆಗೆದ ಪಿಚ್ಚರುಗಳು ತೀರಾ ಸೂಪರ್ ಹಿಟ್ ಲೆವೆಲ್ಲಿಗೆ ಹೋಗದೇ ಇರಬಹುದು. ಆದರೆ ಇವರ ಒಂದಷ್ಟು ಸಿನಿಮಾಗಳು ಉತ್ತಮ ವ್ಯಾಪಾರ ಮಾಡಿವೆ. ಸಿನಿಮಾದಿಂದ ಒಳ್ಳೇ ಲಾಭವನ್ನೂ ಕಂಡಿದ್ದಾರೆ. ಬಂದ ಲಾಭವನ್ನೂ ಮತ್ತೆ ಇದೇ ಸಿನಿಮಾಗಳ ಮೇಲೆ ಇನ್ವೆಸ್ಟ್ ಮಾಡಿದ್ದಾರೆ. ಕಾರ್ಪೊರೇಟ್ ಸಂಸ್ಥೆಗಳು ಸಣ್ಣ ಸಿನಿಮಾಗಳನ್ನು ಪರ್ಚೇಸ್ ಮಾಡೋದಿಲ್ಲ ಎನ್ನುವ ಬೇಸರದಲ್ಲಿ ತಾವೇ ಒಂದು ಓಟಿಟಿ ಚಾನೆಲ್ ಹುಟ್ಟುಹಾಕಲು ಹೋಗಿ ಕೇಶವ್ ಅನುಭವಿಸಿರುವ ಲುಕ್ಸಾನು ಹದಿನಾಲ್ಕು ಲಕ್ಷ. ಈ ಕಾರಣದಿಂದ ಐವತ್ತೈದು ಸಿನಿಮಾಗಳನ್ನು ಮಾಡಿರುವ ನಿರ್ದೇಶಕನ ಜೇಬು ಪೂರ್ತಿ ಖಾಲಿ ಖಾಲಿ.

ಬಿ.ಆರ್.ಕೆ. ಸಿನಿಮಾ ಕೃಷಿಯ ಜೊತೆಗೆ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ದೇಶಕರ ಸಂಘ ಮುಂತಾದ ಕಡೆಯೂ ಓಡಾಡಿಕೊಂಡು ಸಂಘಟನೆಗಳನ್ನು ಕಟ್ಟುವಲ್ಲಿ ಶ್ರಮಿಸಿದ್ದಾರೆ. ಸದ್ಯ ಕೇಶವ್ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಕಳೆದ ಆರು ತಿಂಗಳ ಹಿಂದೆ ದಿಢೀರಂತಾ ಕಾಲು ನೋವು ಕಾಣಿಸಿಕೊಂಡಿತ್ತು. ಪರೀಕ್ಷಿಸುವ ಹೊತ್ತಿಗೆ ಶುಗರ್ ಎಚ್ಚಾಗಿ ಅವರ ಕಾಲನ್ನು ಒಳಗೊಳಗೆ ತಿಂದು ಹಾಕಿತ್ತು. ಎಡಗಾಲನ್ನು ತೆಗೆಸದೇ ಬೇರೆ ದಾರಿಯೇ ಇರಲಿಲ್ಲ. ಒಂದು ಕಾಲು ಕಳೆದುಕೊಂಡು ಸುಧಾರಿಸುವ ಹೊತ್ತಿಗೇ ಮತ್ತೊಂದು ಕಾಲೂ ಈಗ ಇನ್ಫೆಕ್ಷನ್ಗೆ ಒಳಗಾಗಿದೆ.

ಕಾಲು ಕಳೆದುಕೊಂಡ ಬಾಧೆ, ಜೀವ ಹಿಂಡುವ ನೋವಿನ ಜೊತೆಗೆ ಆರ್ಥಿಕ ಸಂಕಷ್ಟವೂ ವಕ್ಕರಿಸಿಕೊಂಡರೆ ಬದುಕು ನರಕ ಅನ್ನಿಸಿಬಿಡುತ್ತೆ. ಈಗ ಬಿ.ಆರ್. ಕೇಶವ್ ಎನ್ನುವ ಸಾಧಕನ ಬದುಕೂ ಹೀಗೇ ಆಗಿದೆ. ದಿನ ಬೆಳಗಾದರೆ ಆಸ್ಪತ್ರೆ ಖರ್ಚು, ಔಷಧಗಳ ವೆಚ್ಚ ಅಂತಾ ವಿಪರೀತ ದುಡ್ಡಿನ ಅವಶ್ಯಕತೆ ಎದುರಾಗಿದೆ. ಜೊತೆಗಿದ್ದ ಕೆಲವು ಸ್ನೇಹಿತರೆಲ್ಲಾ ಕೈಲಾದ ಸಹಾಯ ಮಾಡಿದ್ದಾರೆ. ನಿರ್ಮಾಪಕ ಯುಎಸ್ ನಾಗೇಶ್ ಕುಮಾರ್ ಸಹೋದರನಂತೆ ಬೆನ್ನಿಗೆ ನಿಂತು ಸಹಕರಿಸಿದ್ದಾರೆ. ಉಳಿದವರು ಕೈಚೆಲ್ಲಿ ಸುಮ್ಮನಾಗಿದ್ದಾರೆ. ನಿರ್ಮಾಪಕರ ಸಂಘ, ವಾಣಿಜ್ಯ ಮಂಡಳಿ ಕೊಟ್ಟ ಸಣ್ಣ ಮಟ್ಟದ ಅಮೌಂಟು ಔಷಧಿಯ ಖರ್ಚಿಗೂ ಸಾಕಾಗಿಲ್ಲ. ಈ ಹೊತ್ತಿನಲ್ಲಿ ಕೇಶವ್ ಅವರಿಗೆ ಯಾರಾದರೂ ನೆರವಾದರೆ ನಿಜಕ್ಕೂ ಅವರಿಗೆ ಪುಣ್ಯ ಪ್ರಾಪ್ತಿಯಾಗಬಹುದು.
phone pay number 9880765580
No Comment! Be the first one.