ಸಿನಿಮಾಗಳ ವಿಚಾರದಲ್ಲಿ ಸದಾ ಹೊಗಳಿಸಿಕೊಳ್ಳುವ ತಮಿಳು ಚಿತ್ರರಂಗದ ನಸೀಬು ಈಗ ಕೆಟ್ಟು ಕೂತಿದೆ. ನೂರಾರು ಕೋಟಿ ವ್ಯಾಪಾರ ಕುದುರಿಸುವ ಅಲ್ಲಿನ ಸೂಪರ್‌ ಸ್ಟಾರ್‌ ಗಳು ಕಳಾಹೀನರಾಗಿದ್ದಾರೆ. ರಿಲೀಸಾದ ಸಿನಿಮಾಗಳೆಲ್ಲಾ ದಬಕ್ಕುದಬಕ್ಕನೆ ನೆಲಕ್ಕುರುಳುತ್ತಿವೆ.

ಸೂರ್ಯ ನಟನೆಯ ಎದುರುಕ್ಕು ತುನಿದವನ್‌ ಎನ್ನುವ ಸಿನಿಮಾ ಯಾವಾಗ ಬಂತು ಯಾವಾಗ ಹೋಯಿತು ಅನ್ನೋದು ಸ್ವತಃ ತಮಿಳು ಪ್ರೇಕ್ಷಕರಿಗೇ ಗೊತ್ತಾಗಿಲ್ಲ. ಅಷ್ಟರ ಮಟ್ಟಿಗೆ ಆ ಚಿತ್ರ ಸದ್ದು ಮಾಡಿದೆ!

ತಲಾ ಅಂತಲೇ ಕರೆಸಿಕೊಳ್ಳುವ ಅಜಿತ್‌ ನಟನೆಯ ಸಿನಿಮಾಗಳು ಬರುತ್ತವೆಂದರೆ ತಮಿಳುನಾಡು ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಸಂಚಲನವೇಳುತ್ತದೆ. ಆದರೆ ಈ ಸಲ ವಲಿಮೈ ಎನ್ನುವ ಸಿನಿಮಾ ನೋಡಿ ಪ್ರೇಕ್ಷಕರು ದಿಗ್ಭ್ರಾಂತರಾಗಿದ್ದಾರೆ.  ಇದುವರೆಗೂ ಅಜಿತ್ ನಟಿಸಿದ ಯಾವ ಸಿನಿಮಾ ಕೂಡಾ ಲುಕ್ಸಾನು ಅನುಭವಿಸಿರಲಿಲ್ಲ. ಮೊದಲ ಬಾರಿಗೆ ಅಜಿತ್‌ ನಟನೆಯ ಸಿನಿಮಾವೊಂದು ಭಯಾನಕ ಸೋಲು ಅನುಭಸಿದೆ. ಹಾಗಂತಾ ಸಿನಿಮಾ ನಿರ್ಮಿಸಿದ ನಿರ್ಮಾಪಕರ ಜೇಬಿಗೆ ಕತ್ತರಿ ಬಿದ್ದಿಲ್ಲ. ಬದಲಿಗೆ ಕೋಟಿಗಟ್ಟಲೆ ಹೂಡಿಕೆ ಮಾಡಿ ಸಿನಿಮಾದ ವಿತರಣೆ ಹಕ್ಕು ಪಡೆದಿದ್ದ ವಿತರಕರು ಅಂಬೋ ಅಂತಾ ತಲೆ ಮೇಲೆ ಕೈಯಿಟ್ಟುಕೊಳ್ಳುವಂತಾಗಿದೆ.

ವಾರಗಳ ಹಿಂದಷ್ಟೇ ಅಜಿತ್‌ ನಟನೆಯ ವಲಿಮೈ ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರ ಅಂದುಕೊಂಡ ಮಟ್ಟಕ್ಕೆ ಜನರನ್ನು ಸೆಳೆಯಲಿಲ್ಲ. ಜಗತ್ತಿನಾದ್ಯಂತ ತೆರೆಗೆ ಬಂದಿದ್ದ ವಲಿಮೈ ಹೇಳಿಕೊಳ್ಳುವಂತಾ ಗಳಿಕೆಯನ್ನೂ ಮಾಡಿಲ್ಲ. ಈ ಚಿತ್ರದ ಕರ್ನಾಟಕದ ವಿತರಣೆಯ ಹಕ್ಕನ್ನು ಬಿ. ಸುರೇಶ್‌ ಪತ್ನಿ ಶೈಲಜಾ ನಾಗ್‌ ಮತ್ತು ನರ್ಗೀಸ್‌ ಬಾಬು ಮಗ ಕಮರ್‌ ಸೇರಿ ಮೂರೂವರೆ ಕೋಟಿಗಳ ದೊಡ್ಡ ಮೊತ್ತಕ್ಕೆ ಪರ್ಚೇಸ್‌ ಮಾಡಿದ್ದರು. ಆದರೆ ಈ ಚಿತ್ರದಿಂದ ವಾಪಾಸು ಬಂದಿರೋದು ಬರೀ ಎರಡೂವರೆ ಕೋಟಿ ಮಾತ್ರ. ಅಲ್ಲಿಗೆ ಒಂದು ಕೋಟಿ ಶೈಲಜಾ ಮತ್ತು ಕಮರ್‌ ಕೈಬಿಟ್ಟುಹೋಗಿದೆ. ಒಂದು ಕಾಲಕ್ಕೆ ಡಬ್ಬಿಂಗ್‌ ವಿರೋಧಿಸಿದ್ದವರು ಬಿ.ಸುರೇಶ. ಈಗ ಅದೇ ಸುರೇಶ್‌ ಡಬ್ಬಿಂಗ್‌ ಸಿನಿಮಾವನ್ನು ತಮ್ಮ ಪತ್ನಿಯ ಮೂಲಕ ವಿತರಣೆ ಮಾಡಿಸಿದ್ದರು. ಮೊದಲ ಪ್ರಯತ್ನದಲ್ಲೇ ಅಪಜಯ ಅನುಭವಿಸಿದ್ದಾರೆ. ಇನ್ನಾದರೂ ಹೇಳೋದೊಂದು ಮಾಡೋದೊಂದು ಬಿಟ್ಟರೆ ಬೀಸೂಗೆ ಲೇಸು!

ಅಷ್ಟೇ ಅಲ್ಲ, ಧನುಷ್‌ ನಟನೆಯ ಮಾರನ್‌ ಎನ್ನುವ ಸಿನಿಮಾವನ್ನು ಜನ ಓಟಿಟಿಯಲ್ಲಿಯೂ ಮೂಸಿ ನೋಡಿಲ್ಲ. ಪ್ರಭುದೇವಾ ಥರದ ಹೀರೋ ಚಿತ್ರಗಳು ಕೂಡಾ ಮೂಲೆಗುಂಪಾಗಿವೆ.

2002 ತಮಿಳು ಚಿತ್ರರಂಗವನ್ನು ತೀರಾ ಇಕ್ಕಟ್ಟಿಗೆ ಸಿಲುಕಿಸಿದಂತೆ ಕಾಣುತ್ತಿದೆ. ಇಳಯದಳಪತಿ ವಿಜಯ್‌ ನಟನೆಯ ಬೀಸ್ಟ್‌ ಸಿನಿಮಾ ಕೆಟ್ಟ ಸೋಲಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದೆ. ಅದೂ ಕೆ.ಜಿ.ಎಫ್.‌ ಚಾಪ್ಟರ್‌-2 ಬೀಸ್ಟ್‌ ಚಿತ್ರಕ್ಕೆ ಕೊಟ್ಟಿರುವ ಏಟಿದೆಯಲ್ಲಾ? ತಮಿಳ್‌ ಮಕ್ಕಳ್‌ ಮುಟ್ಟಿನೋಡಿಕೊಳ್ಳಬೇಕು ಹಾಗಿದೆ. 175 ಕೋಟಿಯ ದೊಡ್ಡ ಬಜೆಟ್ಟು ಹೂಡಿಕೆ ಮಾಡಿ ಸನ್‌ ಪಿಕ್ಚರ್ಸ್‌ ಈ ಸಿನಿಮಾವನ್ನು ತಯಾರಿಸಿದೆ. ಈಗ ಬೀಸ್ಟ್‌ ಮಾಡುತ್ತಿರುವ ಗಳಿಕೆ ನೋಡಿದರೆ ಹೀರೋ ವಿಜಯ್‌ ಗೆ ಕೊಟ್ಟಿರುವ 80 ಕೋಟಿ ಕೂಡಾ ವಾಪಾಸು ಬರೋದು ಡೌಟು. ಅನ್ನಿಯನ್‌, ಆರ್ಮುಗಂ, ಸೇತು ಮುಂತಾದ ಸಿನಿಮಾಗಳ ಮೂಲಕ ತಮಿಳು ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ದೊಡ್ಡ ಕ್ರೇಜ್‌ ಕ್ರಿಯೇಟ್‌ ಮಾಡಿದ್ದವನು ನಟ ಚಿಯಾನ್‌ ವಿಕ್ರಂ. ಶಂಕರ್‌ ನಿರ್ದೇಶನದ ʻಐʼ ಎನ್ನುವ ಲಡಾಸು ಸಿನಿಮಾದಲ್ಲಿ ನಟಿಸಿದ ಮೇಲೆ ಈತನ ಕೆರಿಯರ್‌ ಸಂಪೂರ್ಣ ನೆಲ ಕಚ್ಚಿತ್ತು. ಸದ್ಯ ಮಗ ಧೃವ್‌ ಕೂಡಾ ಬಣ್ಣದ ಜಗತ್ತಿಗೆ ಕಾಲಿಟ್ಟಿದ್ದಾನೆ. ಅಪ್ಪ-ಮಗ ಸೇರಿ ನಟಿಸಿರುವ ಮಹಾನ್‌ ಸಿನಿಮಾ ಇರುವುದರಲ್ಲಿ ತಮಿಳು ಸಿನಿಮಾ ಇಂಡಸ್ಟ್ರಿಯ ಮಾನ ಉಳಿಸಿದೆ. ಮಿಕ್ಕಂತೆ ಅಲ್ಲಿ ಯಾವ ಸ್ಟಾರ್‌ ಗಳು ನಟಿಸಿದ ಚಿತ್ರಗಳೂ ತಲೆಯೆತ್ತಿ ನಿಲ್ಲುತ್ತಿಲ್ಲ.

ಈಗ ಕನ್ನಡದ ಹೀರೋ ಯಶ್‌ ಬೇರೆ ಕೆ.ಜಿ.ಎಫ್‌ ಮೂಲಕ ಭಯ ಹುಟ್ಟಿಸಿದ್ದಾರೆ.  ಕನ್ನಡಿಗರ ಕೆ.ಜಿ.ಎಫ್.‌  ಎನ್ನುವ ಸಿನಿಮಾವೊಂದು ಅಲ್ಲಿನ ಸೂಪರ್‌ ಸ್ಟಾರ್‌ ಸಿನಿಮಾವನ್ನೇ ಮಣ್ಣುಮುಕ್ಕಿಸುತ್ತದೆ ಅಂತಾ ಯಾರೆಂದರೆ ಯಾರೂ ಊಹಿಸಿರಲಿಲ್ಲ. ಆದರೆ ಅಲ್ಲಿನ ಪ್ರೇಕ್ಷಕರು ಯಶ್‌ ಸಿನಿಮಾಗೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ವಿಜಯ್‌ ನಟನೆಯ ಬೀಸ್ಟ್‌ ಗೆ ನೀಡಿಲ್ಲ. ಇಂಥದ್ದೊಂದು ದಿನ ಬರುತ್ತದೆ ಅಂತಾ ಯಾರು ಕೂಡಾ ನಿರೀಕ್ಷಿಸಿರಲಿಲ್ಲ. ಕನ್ನಡ ಸಿನಿಮಾವೊಂದು ಅದನ್ನು ಸಾಧಿಸಿದೆ.  ಕಾಲಾನುಕಾಲದಿಂದ ಪರಭಾಷೆ ಸಿನಿಮಾಗಗಳು ಕನ್ನಡ ಚಿತ್ರರಂಗದ ಮೇಲೆ ದಾಳಿ ಮಾಡಿವೆ. ಹೊರಗಿನಿಂದ ಬಂದ ದೊಡ್ಡ ಸಿನಿಮಾಗಳು ಕನ್ನಡಿಗರ ಸಣ್ಣ ಸಿನಿಮಾಗಳನ್ನು ನುಂಗಿಕೊಂಡಿವೆ. ಈಗ ಆ ಭಯ ಅಲ್ಲಿನವರಿಗೆ ಶುರುವಾಗಿದೆ!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಸುಲ್ತಾನನಂತೆ ಅಬ್ಬರಿಸಿದನಾ ರಾಕಿ ಭಾಯ್?‌

Previous article

ಸೌಂದರ್ಯಾ ಹೋಗಿ ವರ್ಷ ಹದಿನೆಂಟಾಯ್ತು!

Next article

You may also like

Comments

Leave a reply

Your email address will not be published.