ಆ ಹುಡುಗ ಕೇಳ್ತಾನೆ- “ಅಮ್ಮ ಸಮುದ್ರ ಯಾಕಮ್ಮಾ ಹೊಳೀತಾ ಇರತ್ತೆʼʼ. ತಾಯಿ ಹೇಳ್ತಾಳೆ- ʻʻಸಮುದ್ರದ ಅಡಿಯಲ್ಲಿ ತುಂಬಾ ಬಂಗಾರ ಇದೆ. ಅದಕ್ಕೇ ಹೊಳಿಯತ್ತೆ. ಅಮ್ಮ ನಿಂಗೆ ಬಂಗಾರ ಅಂದ್ರೆ ಇಷ್ಟಾನಾಮ್ಮಾ? ಬಂಗಾರ ಅಂದ್ರೆ ಯಾವ ಹೆಣ್ಣಿಗೆ ತಾನೆ ಇಷ್ಟ ಇರಲ್ಲಕಂದಾ? ಹಾಗಾದ್ರೆ ಈ ಪ್ರಪಂಚದಲ್ಲಿರೋ ಬಂಗಾರನೆಲ್ಲ ನಿನಗೆ ತಂದ್ಕೊಡ್ತೀನಮ್ಮ….”
- ಹೀಗೆ ಅಮ್ಮ ಮಗನ ಸಂಭಾಷಣೆಯೊಂದಿಗೆ ಚಾಲನೆಗೊಳ್ಳುತ್ತದೆ ರಕ್ತಸಿಕ್ತ ಇತಿಹಾಸವೊಂದರ ಪ್ರಸಂಗಗಳು. ಅದು ಪತ್ರಕರ್ತ ಆನಂದ ಇಂಗಳಗಿ ಬರೆದಿಟ್ಟ, ಲೈಬ್ರರಿಯಲ್ಲಿ ಧೂಳಿಡಿದ ಪುಸ್ತಕ. ಆ ಪುಸ್ತಕ ಇತಿಹಾಸದ ಕತೆಗಳನ್ನು ಹೇಳುತ್ತೆ. ರಕ್ತದಿಂದ ಬರೆದ ಕತೆಯದು. ಮುಂದುವರೆಸಬೇಕೆಂದರೆ ಮತ್ತೆ ರಕ್ತವನ್ನೇ ಕೇಳುತ್ತದೆ….
ಕೆ.ಜಿ.ಎಫ್ ಮೊದಲ ಅಧ್ಯಾಯದಲ್ಲಿ ರಾಕಿ ಎನ್ನುವ ಶಕ್ತಿ ಎಂಟ್ರಿ ಕೊಟ್ಟು, ಒಂದೇ ಏಟಿಗೆ ಗರುಡನ ತಲೆ ತೆಗೆದಮೇಲೆ ಮುಂದೇನಾಯ್ತು? ಗರುಡನ ತಮ್ಮ ವಿರಾಟನಿಗೆ ಪಟ್ಟ ಸಿಕ್ಕಿತಾ? ಅಥವಾ ರಾಕಿಯ ಆಳ್ವಿಕೆ ಶುರುವಾಯ್ತಾ? ಅಸಲಿಗೆ ಅಷ್ಟು ವಿಶಾಲವಾದ ಸಾಮ್ರಾಜ್ಯ, ಅಂತಾ ಬೃಹತ್ ವ್ಯವಸ್ಥೆಯ ನಡುವೆ ನಡೆದ ಭೀಕರ ಹೋರಾಟ, ಯುದ್ದ- ಇವೆಲ್ಲದರಲ್ಲಿ ಯಾರು ಗೆದ್ದರು? ಇನ್ನೆಷ್ಟು ತಲೆಗಳು ಉರುಳಿದವು? ರಾಕಿಯನ್ನು ಹೊಡೀತೀನಿ ಅಂತಾ ಬಂದವರೆಲ್ಲಾ ಏನಾಗ್ತಾರೆ? ಅನ್ನೋ ಕುತೂಹಲ ಇತ್ತಲ್ಲಾ? ಅವೆಲ್ಲಾ ಕೆ.ಜಿ.ಎಫ್ ಚಾಪ್ಟರ್ ಎರಡರಲ್ಲಿ ಸವಿಸ್ತಾರವಾಗಿ ತೆರೆದುಕೊಂಡಿದೆ.
ಕೆಜಿಎಫ್ ಒಳಗೆ ಅಡಗಿರುವ ಬಂಗಾರ ತೆಗೆಯೋದು ಎಷ್ಟು ಕಷ್ಟಾನೋ ಅಲ್ಲಿ ಅಡಗಿರುವ ಸತ್ಯ ಹೊರ ತೆಗೆಯೋದು ಕೂಡಾ ಅಷ್ಟೇ ಕಷ್ಟ ಎನ್ನುವ ಸಿನಿಮಾದಲ್ಲಿನ ಮಾತಿಗೆ ಪೂರಕವಾಗಿ ಕಥೆ ಕೂಡಾ ಸಾಗುತ್ತದೆ. ಮನೆಯಲ್ಲಿರೋ ಇಲಿಗಳನ್ನು ಆಚೆ ಹಾಕಿಸೋಕೆ ಕಾಳಿಂಗ ಸರ್ಪವನ್ನು ಒಳಗೆ ಬಿಟ್ಟುಕೊಂಡ ಕಿರಾತಕರಿಗೆ ತಾವೇ ಆಚೆ ಹೋಗುವ ಪರಿಸ್ಥಿತಿ ಎದುರಾಗುತ್ತದೆ. ಗರುಡನನ್ನು ಹೊಡೆಯುವ ಕಾರಣಕ್ಕೆ ರಾಕಿಯನ್ನು ಕೆ.ಜಿ.ಎಫ್.ಗೆ ಕಳಿಸಿರುತ್ತಾರೆ. ಆದರೆ ರಾಕಿ ಅಲ್ಲಿ ಪಾದ ಊರೋದು ಅದೇ ಕೆ.ಜಿಎಫ್. ಅನ್ನು ಆಳೋದಕ್ಕೆ. ಹೀಗಾಗಿ ಮೊದಲು ಗರುಡನನ್ನು ಹೊಡೀಬೇಕಿತ್ತು, ಅಲ್ಲಿರುವ ಸೆಕ್ಯೂರಿಟಿ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಬೇಕಿತ್ತು. ಎಲ್ಲದಕ್ಕಿಂತಾ ಹೆಚ್ಚಾಗಿ ಅಲ್ಲಿನ ಜನಸಮುದಾಯವನ್ನು ತನ್ನತ್ತ ಸೆಳೆಯಬೇಕಿತ್ತು. ಎಲ್ಲವನ್ನೂ ರಾಕಿ ಅಚ್ಚುಕಟ್ಟಾಗಿ ನಿಭಾಯಿಸಿರುತ್ತಾನೆ. ಅಲ್ಲೀವರೆಗೆ ತಲೆಯೆತ್ತಿ ನೋಡಲೂ ಹೆದರುತ್ತಿದ್ದ ಜನ ಗಾರ್ಡ್ ಗಳ ತಲೆ ತುಳಿದು ಮುಂದೆ ನಿಂತಿರುತ್ತಾರೆ. ಜನರ ಕಣ್ಣಿಗೆ ರಾಕಿ ಪದಶಃ ಗಾಡ್ ಆಗಿರುತ್ತಾನೆ.. ಅವರೆಲ್ಲಾ ಅವನನ್ನು ಸುಲ್ತಾನನೆಂದು ಕರೆದು ಮೆರೆಸುತ್ತಾರೆ. ಯುದ್ದಗಳು ನಡೆಯೋದು ವಿಜಯಕ್ಕೋಸ್ಕರ. ವಿಜಯಗಳನ್ನು ಸಾಧಿಸೋದು ಇತಿಹಾಸಕ್ಕೋಸ್ಕರ. ಹಿಸ್ಟರಿ ಆಲ್ವೇಸ್ ವಿನ್ಸ್. ಇಂಡಿಯಾದ ಅತಿ ದೊಡ್ಡ ಸೀಕ್ರೆಟ್ ಕೆ.ಜಿ.ಎಫ್. ಒಳಗೆ ನಡೆದ ರಕ್ತಚರಿತ್ರೆ ಇದು.
ಅಮ್ಮನಿಗೆ ಕೊಟ್ಟ ಮಾತಿನಂತೆ ನಡೆಯೋದು ರಾಕಿ ಭಾಯ್ ಪರಮ ಗುರಿ. ಅದರಂತೆ ಪ್ರತಿಯೊಂದನ್ನೂ ಸಾಧಿಸುತ್ತಾನೆ. ತನ್ನದು ದುರಾಸೆ, ಸ್ವಾರ್ಥ ಅಂತಾ ಗೊತ್ತಿದ್ದರೂ ಎಲ್ಲೂ ಹಿಂದೇಟು ಹಾಕುವುದಿಲ್ಲ. ಇಲ್ಲಿ ಎಂಭತ್ತರ ದಶಕದ ರಾಜಕಾರಣದ ನೈಜ ಚಿತ್ರಣ, ರಾಜಕಾರಣಿಗಳ ಮಸಲತ್ತು, ಆವತ್ತಿನ ರೌಡಿಸಂ ಹೇಗಿತ್ತು ಅನ್ನೋದರ ಇಂಚಿಂಚೂ ವಿವರಗಳಿವೆ. ಹಳದಿ ಲೋಹದ ಕಪ್ಪುಮಾರುಕಟ್ಟೆಯ ಒಳಸುಳಿಗಳಿವೆ.
ಅಬ್ಬಾ… ಇಷ್ಟೊಂದು ದೊಡ್ಡ ಕ್ಯಾನ್ವಾಸು, ಅಗಣಿತ ಜನ, ವಿಸ್ತಾರವಾದ ಅಗಲದ ಗಣಿ, ರೋಚಕ ಕತೆ, ಅದರಲ್ಲಿನ ತಿರುವುಗಳು ಇವೆಲ್ಲದರ ಜೊತೆಗೆ ತೂಫಾನಿನಂತೆ ನುಗ್ಗಿಬರುವ ರಾಕಿಯ ಧೈರ್ಯಗಳೆಲ್ಲಾ ಕೆ.ಜಿ.ಎಫ್ ಚಾಪ್ಟರ್-೨ರ ಸರಕು. ತಾಂತ್ರಿಕವಾಗಿ ಯಾರೂ ಬೊಟ್ಟು ಮಾಡದಂತಾ ಅಚ್ಚುಕಟ್ಟು, ಹಲವು ಕೋನಗಳಲ್ಲಿ ಕಥೆ ಹೇಳುವ ಶೈಲಿ, ಎಲ್ಲೂ ಗೊಂದಲವಾಗಿಸದ ಜಾಣ್ಮೆ. ನಿಜಕ್ಕೂ ಪ್ರಶಾಂತ್ ನೀಲ್ ಎನ್ನುವ ನಿರ್ದೇಶಕ, ರಾಕಿಯಾಗಿ ಅವತಾರವೆತ್ತಿರುವ ಯಶ್, ಇಷ್ಟೆಲ್ಲಾ ಸಾಧ್ಯವಾಗಲು ಕಾರಣರಾದ ನಿರ್ಮಾಪಕ ವಿಜಯ್ ಕಿರಗಂದೂರು, ಛಾಯಾಗ್ರಾಹಕ ಭುವನ್ – ಎಲ್ಲರಿಗೂ ಕೈಮುಗಿದು ಅಭಿನಂದಿಸಲೇಬೇಕು.
ನಿರ್ದೇಶಕ ಪ್ರಶಾಂತ್ ಮತ್ತು ಹೀರೋ ಯಶ್ ಸೇರಿ ಬರೆದುಕೊಂಡಿರುವ ಸಂಭಾಷಣೆ ಸಿನಿಮಾದ ಮತ್ತೊಂದು ಶಕ್ತಿ. ʻʻಗರುಡನ್ನ ಹೊಡೆಯೋಕೆ ಒಬ್ಬ ರಾಕಿನ ಹುಟ್ಸಿದ್ವಿ. ಈ ರಾಕಿನ ಹೊಡೆಯೋಕೆ ಇನ್ನೊಬ್ಬ ರಾಕೀನ ಹುಟ್ಸಕ್ಕಾಗಲ್ವಾ? ಅಂದಾಗ ಹೀರೋ ಹೇಳೋ ಮಾತು “ನಮ್ಮಪ್ಪನ ಕೈಲೇ ಆಗಿಲ್ಲ ಅಂದ್ರೆ, ನಮ್ಮಪ್ಪನಾಣೆ ಇನ್ಯಾರ ಕೈಲೂ ಆಗಲ್ಲ. ಒನ್ ಅಂಡ್ ಓನ್ಲಿ ಪೀಸ್!ʼʼ…
ʻʻಇತಿಹಾಸ ಪುರಾಣಗಳೇ ಹೇಳತ್ತೆ… ಕ್ರೋಧಗೊಂಡ ಹೆಣ್ಣಿನ ಮೇಲೆ ಕೈ ಮಾಡಬಾರದು. ಅಲಂಕಾರ ಮಾಡಿ ಬೊಟ್ಟಿಟ್ಟು, ಪೂಜೆ ಮಾಡಿ ಕೈ ಮುಗೀಬೇಕು.ʼʼ, ʻʻಒಬ್ಬ ಹೋದರೆ ಇನ್ನೊಬ್ಬ ಬಂದು ಕೂರಕ್ಕೆ ಇದು ಕೊಕ್ಕೋ ಆಟ ಅಂದ್ಕೊಂಡಿದಿಯಾ? ಯಾವನೋ ಎಲ್ಲಿಂದಾನೋ ಬಂದು ಕೂತ್ರೆ ನೋಡ್ಕೊಂಡು ಗೆಣಸು ಕೀಳಕ್ಕಿರೋದಲ್ಲ ನಾವುʼʼ ಅಂತಾ ಎದುರಾಳಿ ಹೇಳಿದಾಗ ಹೀರೋ ಮಾತು ಹೀಗಿರತ್ತೆ : ”ನೆಪೋಟಿಸಮ್… ಏನಪ್ಪಾ ನಮ್ ದೇಶ ಹಿಂಗಾಗೋಯ್ತು. ಎಲ್ಲಿ ನೋಡಿದರೂ ರೆಕಮಂಡೇಶನ್ನು, ಇನ್ಪ್ಲೂಯೆನ್ಸು, ಡೊನೇಷನ್ನು, ಡಾಮಿನೇಷನ್ನು, ಲಂಚ ಅಬ್ಬರಿಸಿದರೆ ಬಡವರ ಮಕ್ಕಳು ಏನ್ ಮಾಡ್ಬೇಕು? ಕಷ್ಟ ಪಟ್ಟು ಫಸ್ಟ್ ರ್ಯಾಂಕ್ ತಗೊಂಡೋರು ಏನ್ ಮಾಡಬೇಕು? ಲಂಚ ತಗೊಳ್ಳದೇ ಕೆಲಸ ಮಾಡ್ತಿರೋ ಆಫೀಸರುಗಳು ಏನ್ ಮಾಡಬೇಕು? ಕೈ ಕೆಸರು ಮಾಡಿಕೊಂಡವರು ಎಲ್ಲಿಗೆ ಹೋಗಬೇಕು? ಒಂದೇ ಏಟಿಗೆ ಕತ್ತೆಗರಿಸಿದೋನು ಏನ್ ಮಾಡಬೇಕ್? ಮೆರಿಟ್ಟಲ್ಲಿ ಬಂದವರಮ್ಮಾ… ನಮ್ಮಂತೋರಿಗೂ ಸ್ವಲ್ಪ ರೆಸ್ಪೆಕ್ಟ್ ಕೊಡ್ರಮ್ಮಾ… ಎಲ್ಲಾ ಸಖತ್ತಾಗಿ ಮಾಡಿದ ನಿಮ್ಮಪ್ಪಂದಿರು ಒಂದು ಮಿಸ್ಟೇಕ್ ಮಾಡಿಬಿಟ್ರು. ನಿಮ್ಮನ್ನ ನನ್ ಕಾಲದಲ್ಲಿ ಹುಟ್ಟಿಸವ್ರೆ. ನಾನು ಆಳ್ತಾ ಇರ್ತೀನಿ. ನೀವು ನೋಡ್ಕೊಂಡ್ ಗೆಣಸು ಕೀಳ್ತಾ ಇರಿ….”
- ಇವೆಲ್ಲಾ ಕೆ.ಜಿ.ಎಫ್. ಒಳಗಿನ ಪವರ್ ಫುಲ್ ಮಾತುಗಳ ಸ್ಯಾಂಪಲ್ಲಷ್ಟೇ!
ಹಿಂದಿಯ ಖ್ಯಾತ ನಟ ಸಂಜಯ್ ದತ್ ಇಲ್ಲಿ ಅಧೀರನಾಗಿ ಶಕ್ತಿಶಾಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಭಾಗದಲ್ಲಿದ್ದ ನಾಯಕಿ ಶೀನಿಧಿ ಶೆಟ್ಟಿ, ದಿನೇಶ್ ಮಂಗಳೂರ್, ಹರೀಶ್ ರಾಯ್, ತಾರಕ್ ಪೊನ್ನಪ್ಪ, ವಸಿಷ್ಠ ಸಿಂಹ, ಮಾಳವಿಕಾ, ಗೋವಿಂದೇಗೌಡ ಮೊದಲಾದವರ ಪಾತ್ರಗಳು ಇಲ್ಲಿಯೂ ಮುಂದುವರೆದಿವೆ. ವೈಲೆನ್ಸು ವಿಪರೀಯ್ತು ಅನ್ನಿಸೋದು, ಹಿನ್ನೆಲೆ ಸಂಗೀತ ಅಬ್ಬರವಾಯ್ತು ಅಂತಾ ಅನ್ನಿಸಬಹುದು. ಬಹುಶಃ ವಿಶ್ವದ ಮಾರುಕಟ್ಟೆಗೆ ತಕ್ಕಂತೆ ಮಾಡಿರುವ ಸಿನಿಮಾ ಇದಾಗಿರೋದಲ್ಲವಾ? ಅದನ್ನು ಪ್ರಮಾದವೆಂದು ಪರಿಗಣಿಸುವಂತಿಲ್ಲ!
ಚಿನ್ನದ ಗಟ್ಟಿ ಮತ್ತು ಆ ಮಗು ಎರಡೂ ಒಟ್ಟಿಗೇ ಜನ್ಮ ತಳೆಯುವುದರೊಂದಿಗೆ ಕತೆ ಶುರುವಾಗಿತ್ತಲ್ಲಾ? ಈ ಕತೆಯ ಮುಕ್ತಾಯ ಹೇಗೆ? ದೊಡ್ಡ ಸಾಮ್ರಾಜ್ಯವನ್ನು ಕಬ್ಜ ಮಾಡಿದ ರಾಕಿ ಏನಾಗುತ್ತಾನೆ ಅನ್ನೋದು ಕೆ.ಜಿ.ಎಫ್. ಚಾಪ್ಟರ್ 2ರ ಕೊನೆಯ ಕುತೂಹಲ. ಅದು ಏನಂತ ತಿಳಿದುಕೊಳ್ಳಬೇಕೆಂದರೆ ಚಿತ್ರವನ್ನೊಮ್ಮೆ ನೋಡಬೇಕು….
Comments