ಕನ್ನಡದ ಮಟ್ಟಿಗೆ ಲಹರಿ ಆಡಿಯೋ ಸಂಸ್ಥೆ ಸಾರ್ವಕಾಲಿಕ ದಾಖಲೆಗಳ ರೂವಾರಿ. ತನ್ನ ದಾಖಲೆಗಳನ್ನು ತಾನೇ ಬ್ರೇಕ್ ಮಾಡಿಕೊಳ್ಳೋದು ಲಹರಿಯ ಸ್ಪೆಷಾಲಿಟಿ. ಆದರೆ ಈಗ ಈ ಸಂಸ್ಥೆ ಮಾಡಿರೋ ದಾಖಲೆ ಮಾತ್ರ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳ ಚಿತ್ರರಂಗದವರೂ ಬೆರಗಾಗಿದ್ದಾರೆ!
ಅಂದಹಾಗೆ, ಕನ್ನಡದ ಕೆಜಿಎಫ್ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆಯಲ್ಲಾ? ಅದರಲ್ಲಿ ಹಿಂದಿ ಒಂದನ್ನು ಹೊರತು ಪಡಿಸಿ ಮಿಕ್ಕ ನಾಲಕ್ಕೂ ಭಾಷೆಗಳ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ದಾಖಲೆ ಮೊತ್ತಕ್ಕೆ ಖರೀದಿಸಿದೆ. ಆ ಮೊತ್ತ ಬರೋಬ್ಬರಿ 3.60 ಕೋಟಿ!
ಇದು ನಿಜಕ್ಕೂ ದಾಖಲೆ. ಕನ್ನಡ, ತೆಲುಗು, ಮಲೆಯಾಳಂ ಮತ್ತು ತಮಿಳು ಭಾಷೆಗಳ ಕೆಜಿಎಫ್ ಆಡಿಯೋ ಹಕ್ಕನ್ನು ಈ ಪಾಟಿ ದೊಡ್ಡ ಮೊತ್ತಕ್ಕೆ ಖರೀದಿಸೋ ಮೂಲಕ ಲಹರಿ ಸಂಸ್ಥೆ ಕೆಜಿಎಫ್ ಚಿತ್ರಕ್ಕೆ ಮತ್ತಷ್ಟು ಖದರು ತಂದು ಕೊಟ್ಟಿರೋದಂತೂ ಸತ್ಯ.
ಈ ಮೂಲಕ ಲಹರಿ ವೇಲು ಈ ಹಿಂದೆ ತಾವೇ ಸೃಷ್ಟಿಸಿದ್ದ ದಾಖಲೆಯನ್ನು ಬ್ರೇಕ್ ಮಾಡಿದಂತಾಗಿದೆ. 1992ರಲ್ಲಿ ದಳಪತಿ ಚಿತ್ರದ ಆಡಿಯೋ ಹಕ್ಕುಗಳನ್ನು ಈ ಸಂಸ್ಥೆ ಎಪ್ಪತೈದು ಲಕ್ಷ ಕೊಟ್ಟು ಖರೀದಿಸಿತ್ತು. ಈ ಸುದ್ದಿ ಕೇಳಿ ಎಲ್ಲರೂ ಬೆರಗಾಗಿದ್ದರು. ಇಂಥಾದ್ದೊಂದು ದಾಖಲೆಯ ನಂತರ ಬಾಹುಬಲಿ ಚಿತ್ರದ ಆಡಿಯೋ ಹಕ್ಕುಗಳನ್ನೂ ಕೂಡಾ ಭಾರೀ ಮೊತ್ತಕ್ಕೇ ಖರೀದಿಸಲಾಗಿತ್ತು. ಇದೀಗ ಖುದ್ದು ಲಹರಿ ಸಂಸ್ಥೆ ಕೆಜಿಎಫ್ ಮೂಲಕ ತನ್ನ ದಾಖಲೆಗಳನ್ನು ತಾನೇ ಬ್ರೇಕ್ ಮಾಡಿಕೊಂಡಿದೆ.
ಕೆಜಿಎಫ್ ಚಿತ್ರದ ಟೀಸರ್ಗೆ ದೇಶಾಧ್ಯಂತ ವ್ಯಾಪಕ ಮೆಚ್ಚುಗೆ ಕೇಳಿ ಬರುತ್ತಿದೆ. ಕನ್ನಡ ಚಿತ್ರವೊಂದು ಬೇರೆ ಭಾಷೆಗಳಲ್ಲಿಯೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ, ಕನ್ನಡ ಚಿತ್ರರಂಗದ ಗರಿಮೆಯನ್ನು ಎತ್ತಿ ಹಿಡಿಯುತ್ತಿರೋದರಿಂದ ಖುಷಿಗೊಂಡಿರೋ ವೇಲು ಅವರು ದಾಖಲೆ ಮೊತ್ತಕ್ಕೆ ಆಡಿಯೋ ಹಕ್ಕು ಖರೀದಿ ಮಾಡಿದ್ದಾರಂತೆ.
#