ಕೆ.ಜಿ.ಎಫ್. ಸಿನಿಮಾ ಬಾರತದಾದ್ಯಂತ ರಿಲೀಸಾಗುತ್ತಿದೆ. ಕರ್ನಾಟಕದಲ್ಲಿರುವಂತೆಯೇ ಎಲ್ಲಾ ಕಡೆ ಹವಾ ಜೋರಾಗಿದೆ ಅಂತಾ ನಾವಂದುಕೊಂಡಿದ್ದೇವೆ. ಪರಭಾಷೆಯ ಮೀಡಿಯಾಗಳಲ್ಲಿ ಪೇಯ್ಡ್ ನ್ಯೂಸ್, ಇಂಟರ್ವ್ಯೂಗಳು ಬರುತ್ತಿರೋದರಿಂದ ಎಲ್ಲೆಡೆ ಪಬ್ಲಿಸಿಟಿ ಜೋರಾಗೇನೋ ಇದೆ. ಅದಕ್ಕೆ ಎದುರಾಗಿ ವಿರೋಧಗಳೂ ವ್ಯಾಪಕವಾಗಿ ಬರುತ್ತಿದೆ. ಅದಕ್ಕೆ ಕಾರಣ ಹಲವು.
ಹಿಂದೆ ಡಬ್ಬಿಂಗ್ ವಿರೋಧಿ ದನಿಯೆದ್ದಾಗ ಡಬ್ಬಿಂಗ್ ವಿರುದ್ಧ ಗುಡುಗಿದ್ದವರು ರಾಕಿಂಗ್ ಯಶ್. ಈಗ ಅದೇ ಅವರ ಪಾಲಿಗೆ ಮುಳುವಾಗಿದೆ. `ನಮ್ಮ ಸಿನಿಮಾಗಳು ಡಬ್ಬಿಂಗ್ ಆಗಿ ಬಿಡುಗಡೆಯಾಗಲು ಅಡ್ಡಿ ಮಾಡಿದ ಯಶ್ ನಟಿಸಿರೋ ಡಬ್ಬಿಂಗ್ ಸಿನಿಮಾವನ್ನು ನಾವ್ಯಾಕೆ ನೋಡಬೇಕು’ ಅಂತಾ ಸ್ವತ: ತಮಿಳು ಮತ್ತು ತೆಲುಗು ಸ್ಟಾರ್ಗಳು ಪ್ರಶ್ನಿಸುತ್ತಿದ್ದಾರೆ.
ವಿಶಾಲ್ ಮೇಲಿನ ಸೇದುಪತಿ ರಿವೇಂಜ್!
ವಿಜಯ್ ಸೇದುಪತಿ ಈಗ ತಮಿಳಿನ ಸೂಪರ್ ಸ್ಟಾರ್. ಕೆಲ ತಿಂಗಳುಗಳ ಹಿಂದೆ ಸೇದುಪತಿಯ `೯೬’ ಸಿನಿಮಾ ರಿಲೀಸಾಗಿತ್ತು. ಈ ಸಿನಿಮಾ ನಿರ್ಮಾಪಕರಿಗೆ ವಿಶಾಲ್ ನಾಲ್ಕು ಕೋಟಿ ರುಪಾಯಿ ಫೈನಾನ್ಸ್ ನೀಡಿದ್ದ. ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್ ಆದಕೂಡಲೇ `ನನ್ನ ಹಣ ನನಗೆ ವಾಪಾಸು ಬರೋತನಕ ಯಾವ ಕಾರಣಕ್ಕೂ ರಿಲೀಸಾಗಲು ಬಿಡೋದಿಲ್ಲ’ ಅಂತಾ ಅಡ್ಡಗಾಲಾಕಿದ್ದ. ಆಗ ಸ್ವತಃ ವಿಜಯ್ ಸೇದುಪತಿ ನಿರ್ಮಾಪಕರ ಸಾಲವನ್ನು ತೀರಿಸಿ ಸಿನಿಮಾವನ್ನು ರಿಲೀಸ್ ಮಾಡಲು ಸಹಾಯ ಮಾಡಿದ್ದ.
ಈಗ ಅದೇ ವಿಶಾಲ್ ಕೆ.ಜಿ.ಎಫ್. ಚಿತ್ರದ ತಮಿಳು ಹಕ್ಕನ್ನು ಪಡೆದಿದ್ದಾನೆ. ಜೊತೆಗೆ ವಿಶಾಲ್ ಕೂಡಾ ಕರ್ನಾಟಕದ ಮೂಲದವನು. ವಿಜಯ್ ಸೇದುಪತಿಯ ಸೀತಾಕಾತಿ ಸೇರಿದಂತೆ ಜಯಂರವಿ, ಶಿವಕಾರ್ತಿಕೇಯನ್ ನಟನೆಯ ಸಿನಿಮಾ.. ಇದರ ಜೊತೆಗೇ ರಜನೀಕಾಂತ್ ಅಳಿಯ ಧನುಷ್ನ ಮಾರಿ-೨ ಕೂಡಾ ಬಿಡುಗಡೆಯಾಗ್ತಿದೆ. ಹೀಗೆ ನಾಲ್ಕೈದು ದೊಡ್ಡ ಸಿನಿಮಾಗಳು ತಮಿಳುನಾಡಿನಲ್ಲಿ ಇದೇ ಸಂದರ್ಭದಲ್ಲಿ ತೆರೆ ಕಾಣುತ್ತಿದೆ. ತಮಿಳುನಾಡಿನ ಕಲಾವಿದರ ಸಂಘದ ಅಧ್ಯಕ್ಷನೂ ಆಗಿರುವ ವಿಶಾಲ್ `ಕನ್ನಡದಿಂದ ಕೆ.ಜಿ.ಎಫ್ ಸಿನಿಮಾ ಬರ್ತಿದೆ. ದಯವಿಟ್ಟು ನೀವೆಲ್ಲ ಅದಕ್ಕೆ ಜಾಗ ಕೊಡಿ’ ಎಂದು ಕೇಳಿಕೊಳ್ಳುತ್ತಿದ್ದಾನೆ. ಇದು ಕಟ್ಟರ್ ತಮಿಳಿಗರ ಪಿತ್ಥ ನೆತ್ತಿಗೇರುವಂತೆ ಮಾಡುತ್ತಿದೆ. `ನಮ್ಮ ಡಬ್ಬಿಂಗ್ ಸಿನಿಮಾಗಳನ್ನು ರಿಲೀಸ್ ಮಾಡಲು ಅಲ್ಲಿನವರು ಆಸ್ಪದ ಕೊಡುತ್ತಿಲ್ಲ. ತಮಿಳು ಭಾಷೆಯ ಸಿನಿಮಾವನ್ನೇ ಕರ್ನಾಟಕದಲ್ಲಿ ಬಿಡುಗಡೆ ಮಾಡುತ್ತಿದ್ದೀವಿ. ಬೇಕಿದ್ದರೆ ಕೆ.ಜಿ.ಎಫ್’ನ ಕನ್ನಡ ಭಾಷೆಯ ಸಿನಿಮಾವನ್ನೇ ತಮಿಳುನಾಡಿನಲ್ಲೂ ರಿಲೀಸ್ ಮಾಡಲಿ. ಆಗ ಎಷ್ಟು ಬೇಕಾದರೂ ಜಾಗ ಮಾಡಿಕೊಡ್ತೀವಿ. ಕನ್ನಡಿಗರು ನಮ್ಮ ಅಣ್ಮಮ್ಮಂದಿರಿದ್ದಂತೆ…’ ಅಂತಾ ಸ್ವತಃ ವಿಜಯ್ ಸೇದುಪತಿ ಹೇಳಿದ್ದಾನೆ.
ವಿಜಯ್ ಸೇದುಪತಿಯ ಈ ಮಾತು ಅವರ ಮೂಗಿನ ನೇರಕ್ಕಿಟ್ಟು ನೋಡಿದರೆ ನಿಜ ಕೂಡಾ ಹೌದು. ಏಕಾ ಏಕಿ ಕನ್ನಡ ಸಿನಿಮಾವನ್ನು ಡಬ್ ಮಾಡಿ `ಇದು ಭಾರತದ ಹೆಮ್ಮೆಯ ಸಿನಿಮಾ’ ಅಂದು ಬಿಟ್ಟರೆ ಅಲ್ಲಿಯವರು ಹೇಗೆ ತಾನೆ ಒಪ್ಪಲು ಸಾಧ್ಯ. ತಮಿಳು, ತೆಲುಗು, ಮಲಯಾಳಂ ಸೇದಿಂತೆ ಪಕ್ಕದ ರಾಜ್ಯಗಳಲ್ಲಿ ಅದ್ಭುತವೆನ್ನುವ ಕಥಾ ಹಂದರವಿರುವ, ದೃಶ್ಯ ಶ್ರೀಮಂತಿಕೆಯ ಸಿನಿಮಾಗಳು ಜಮಾನದಿಂದಲೂ ಬರುತ್ತಲೇ ಇವೆ. ಸುಪ್ರೀಂ ಕೋರ್ಟು ತೀರ್ಪು ನೀಡಿದರೂ ಅವುಗಳನ್ನು ಡಬ್ ಮಾಡಿ ಬಿಡುಗಡೆ ಮಾಡಲು ಕನ್ನಡ ಚಿತ್ರರಂಗದವರು ಸ್ಪಂದಿಸುತ್ತಿಲ್ಲ. ಇದು ಪರಭಾಷಾ ಹೀರೋಗಳ, ತಂತ್ರಜ್ಞರ ತಕರಾರು!
ಇನ್ನು ಹಿಂದಿಯಲ್ಲಿ ಶಾರುಖ್ ಖಾನ್’ನ ಝೀರೋ ಇದೇ ದಿನ ಬಿಡುಗಡೆಯಾಗುತ್ತಿದೆ. ಶಾರುಖ್’ನ ಸಿನಿಮಾ ಬಿಡುಗಡೆ ಅಂದರೆ ಅಲ್ಲೆಲ್ಲಾ ಹಬ್ಬದಂತೆ. ಈಗ ಡಬ್ಬಿಂಗ್ ಸಿನಿಮಾವೊಂದು ಅದರೆದುರು ಬಂದು ನಿಲ್ಲುತ್ತದೆಂದಾಗ ಹಿಂದಿಯವರಿಗೂ ಒಂಥರಾ ಉರಿ ಶುರುವಾಗೋದು ಸಹಜ!
ಇನ್ನು ಆಂಧ್ರದ ಕಡೆಗೆ ಬಂದರೆ, ಅಲ್ಲಿ ತಲೆತಲಾಂತರಗಳಿಂದ ನಡೆದುಕೊಂಡುಬಂದಿರೋದು ವಂಶಪಾರಂಪರ್ಯ ಹೀರೋಗಿರಿ. ಮೆಘಾಸ್ಟಾರ್ ಚಿರಂಜೀವಿ ಮಗ ರಾಮ್ ಚರಣ್ ತೇಜಾ ಕೂಡಾ ನೋಡಲು ಹೆಚ್ಚೂ ಕಮ್ಮಿ ಯಶ್ ಥರಾನೇ ಇರೋದರಿಂದ, ಕನ್ನಡದಿಂದ ಬಂದ ರಾಕಿಂಗ್ ಸ್ಟಾರ್’ಗೆ ಅಲ್ಲಿನ ಜನ ಮಣೆ ಹಾಕಲು ಹಿಂದೇಟು ಹಾಕುತ್ತಾರೆ. ಜೊತೆಗೆ ಇದೇ ವಾರ ಮಹಾನುಭಾವುಡು ಸಿನಿಮಾದ ಹೀರೋ ಶರ್ವಾನಂದ್ ನಟಿಸಿರೋ ಪಡಿ ಪಡಿ ಲಚ್ಚೆ ಮನಸು ಬಿಡುಗಡೆಯೂ ಆಗುತ್ತಿದೆ. ಶರ್ವಾನಂದ್ ಈಗಾಗಲೇ ಅಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರೋ ನಟನಾಗಿರುವುದರಿಂದ ಆತನ ಸಿನಿಮಾಗೇ ಮೊದಲ ಪ್ರಾಶಸ್ತ್ಯವಿರೋದು ನಿಜ.
ಯಶ್ ಹಿಂದೆ ಡಬ್ಬಿಂಗ್ ವಿರೋಧಿ ಚಳವಳಿಗಳಲ್ಲಿ ಭಾಗವಹಿಸಿ ವೀರಾವೇಶದ ಮಾತುಗಳನ್ನಾಡಿದ್ದು ಈಗ ಅವರ ಪಾಲಿಗೆ ಮುಳುವಾಗಿದೆ. ಎಲ್ಲ ಪ್ರತಿರೋಧಗಳ ನಡುವೆಯೂ ಕೆ.ಜಿ.ಎಫ್. ಅಲ್ಲೆಲ್ಲಾ ರಿಲೀಸಾಗಿ ಗೆದ್ದರೆ ನಿಜಕ್ಕೂ ಅದು ಯಶ್ ಪಾಲಿನ ಅದೃಷ್ಟವಷ್ಟೇ.
#
No Comment! Be the first one.