ಮಳೆ ನಿಂತರೂ ಹನಿ ನಿಲ್ಲಲಿಲ್ಲ ಎಂಬಂತೆ ಕೆಜಿಎಫ್ ಚಿತ್ರ ತೆರೆ ಕಂಡು ತಿಂಗಳು ಕಳೆದರೂ ಅದರ ಪ್ರಭೆ ಮಾತ್ರ ತುಸುವೂ ಮಂಕಾದಂತಿಲ್ಲ. ಕನ್ನಡ ಚಿತ್ರರಂಗದತ್ತ ಪರಭಾಷಿಗರೂ ಬೆರಗಾಗಿ ನೋಡುವಂತೆ ಮಾಡಿರುವ ಈ ಚಿತ್ರದಲ್ಲಿ ಪಾತ್ರ ನಿರ್ವಹಸಿದ್ದ ನಟ ನಟಿಯರನೇಕರು ಭರಪೂರ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಹಾಗಿದ್ದ ಮೇಲೆ ಇಂಥಾದ್ದೊಂದು ಅದ್ಭುತ ಚಿತ್ರವನ್ನು ನಿರ್ದೇಶನ ಮಾಡಿರುವ ಪ್ರಶಾಂತ್ ನೀಲ್ ಮೇಲೆ ಪರಭಾಷಿಗರ ಕಣ್ಣು ಬೀಳದಿರುತ್ತಾ?
ಯಾವಾಗ ಕೆಜಿಎಫ್ ಚಿತ್ರ ಬಿಡುಗಡೆಯಾಯ್ತೋ ಆಗಿನಿಂದಲೇ ಪ್ರಶಾಂತ್ ನೀಲ್ ಗೆ ಪರಭಾಷಾ ನಿರ್ಮಾಪಕರು ಗಾಳ ಹಾಕಲು ಶುರು ಮಾಡಿದ್ದರು. ಆದರೆ ಕೆಜಿಎಫ್ ೨ ಚಿತ್ರದತ್ತಲೇ ಪ್ರಧಾನವಾಗಿ ಗಮನ ಹರಿಸಿದ್ದ ಪ್ರಶಾಂತರ್ ಅಂಥಾ ಆಫರುಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೀಗ ಅವರ ಮುಂದೆ ಟಾಲಿವುಡ್ ನ ಖ್ಯಾತ ನಿರ್ಮಾಪಕರ ಆಫರ್ ಬಂದಿದೆ. ಹೆಚ್ಚೂಕಮ್ಮಿ ಪ್ರಶಾಂತ್ ನೀಲ್ ಅದನ್ನು ಒಪ್ಪಿಕೊಂಡಿದ್ದಾರಂತೆ!
ಒಂದು ಮೂಲದ ಪ್ರಕಾರ ಹೇಳೋದಾದರೆ, ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಜೊತೆ ಪ್ರಶಾಂತ್ ನೀಲ್ ಚಿತ್ರ ಮಾಡೋದು ಪಕ್ಕಾ. ಪ್ರಶಾಂತ್ ಈಗಾಗಲೇ ದಿಲ್ ರಾಜುಗೆ ಒಂದಷ್ಟು ಕಥಾ ಎಳೆಗಳನ್ನು ಹೇಳಿದ್ದಾರೆ. ಅದರಲ್ಲಿ ನಿರ್ಮಾಪಕರು ಒಪ್ಪಿಕೊಳ್ಳುವ ಕಥಾ ಎಳೆಯನ್ನು ವಿಸ್ತರಿಸಿ ಅಂತಿಮ ರೂಪ ನೀಡಲು ಪ್ರಶಾಂತ್ ನೀಲ್ ತೀರ್ಮಾನಿಸಿದ್ದಾರೆ. ಈ ಸಿನಿಮಾಕ್ಕೆ ಹೀರೋ ಯಾರಾಗಬೇಕೆಂಬ ಬಗ್ಗೆ ಈಗಾಗಲೇ ಒಂದು ಸುತ್ತಿನ ಚರ್ಚೆ ನಡೆದಿದೆ. ಆದರೆ ಆ ಬಗ್ಗೆ ಇನ್ನಷ್ಟೇ ಅಂತಿಮ ನಿರ್ಧಾರ ಹೊರ ಬೀಳಬೇಕಿದೆ.
ಈ ತೆಲುಗು ಚಿತ್ರವನ್ನು ಕೆಜಿಎಫ್ ೨ ಚಿತ್ರ ಮುಗಿದಾದ ಮೇಲಷ್ಟೇ ಪ್ರಶಾಂತ್ ಟೇಕಾಫ್ ಮಾಡಲಿದ್ದಾರೆನ್ನಲಾಗಿದೆ. ಸದ್ಯಕ್ಕೆ ಯಶ್ ಸುಮಲತಾ ಪರ ಪ್ರಚಾರದಲ್ಲಿ ಬ್ಯುಸಿಯಾಗಿರೋದರಿಂದ ಕೆಜಿಎಫ್ ೨ ಚಿತ್ರೀಕರಣಕ್ಕೆ ಕೊಂಚ ಹಿನ್ನಡೆಯಾಗಿದೆ. ಯಶ್ ವಾಪಾಸ್ಸಾದ ನಂತರ ವೇಗವಾಗಿ ಚಿತ್ರೀಕರಣ ಮುಗಿಸಿಕೊಳ್ಳಲು ನೀಲ್ ಪ್ಲಾನು ಮಾಡಿಕೊಂಡಿದ್ದಾರೆ.