ಯಾರೇ ನೀನು ನಿನ್ನ ನೋಡಿ ಮಾರು ಹೋದೆ… ಯಾರೇ ನೀನು ನೀನು ನಿನ್ನ ನೋಡಿ ಜಾರಿ ಹೋದೆ… ನಯನ ಬಿಡದೆ ನೋಡಿದೆ, ಕವನ ಕವಿತೆ ಹಾಡಿದೆ – ಇದು ಖಾಕಿ ಚಿತ್ರಕ್ಕಾಗಿ ಋತ್ವಿಕ್ ಮುರಳೀಧರ್ ಅವರ ಸಂಗೀತ ಸಂಯೋಜನೆಗೆ ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್ ಅವರು ಪೋಣಿಸಿರುವ ಮುದ್ದಾದ ಪದಗಳು.
ರೋಜ಼್, ಮಾಸ್ ಲೀಡರ್, ವಿಕ್ಟರಿ-೨ ಸಿನಿಮಾಗಳಿಗೆ ಬಂಡವಾಳ ಹೂಡುವ ಮುಖಾಂತರ ನಿರ್ಮಾಪಕರೆನಿಸಿಕೊಂಡವರು ತರುಣ್ ಶಿವಪ್ಪ. ನಿರ್ಮಾಪಕರಾಗುವ ಮುಂಚೆ ಮತ್ತು ಆನಂತರವೂ ಪತ್ರಿಕೋದ್ಯಮದ ಒಡನಾಟದಲ್ಲಿರುವ ತರುಣ್ ಚಿತ್ರವೊಂದು ಚೆಂದಗೆ ರೂಪಿಸಿ, ಅದಕ್ಕೆ ಹೇಗೆ ಪ್ರಚಾರ ಕೊಟ್ಟು ಬಿಡುಗಡೆ ಮಾಡಬೇಕೆನ್ನುವುದನ್ನು ಚೆನ್ನಾಗೇ ಅರಿತಿದ್ದಾರೆ. ಹೀಗಾಗಿಯೇ ತರುಣ್ ಟ್ಯಾಕೀಸ್ ಬ್ಯಾನರಿನಲ್ಲಿ ನಿರ್ಮಾಣವಾಗುವ ಸಿನಿಮಾಗಳು ಅತ್ಯುತ್ತಮ ಗುಣಮಟ್ಟ ಹೊಂದಿರುತ್ತವೆ. ಮತ್ತು ಭರ್ಜರಿ ಸೌಂಡು ಮಾಡುತ್ತಾ ಬಿಡುಗಡೆಯಾಗುತ್ತವೆ. ಸದ್ಯ ತರುಣ್ ಶಿವಪ್ಪ ಮತ್ತು ಮಾನಸ ತರುಣ್ ನಿರ್ಮಿಸುತ್ತಿರುವ ಚಿತ್ರ ಖಾಕಿ. ಚಿರಂಜೀವಿ ಸರ್ಜಾ ನಟನೆಯ ಈ ಸಿನಿಮಾವನ್ನು ನವೀನ್ ರೆಡ್ಡಿ ನಿರ್ದೇಶಿಸುತ್ತಿದ್ದಾರೆ. ದಿ ಪವರ್ ಆಫ್ ಕಾಮನ್ ಮ್ಯಾನ್ ಎನ್ನುವ ಅಡಿಬರಹ ಹೊಂದಿರುವ ಸಿನಿಮಾ ಚಿರಂಜೀವಿ ಸರ್ಜಾ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡೋದು ಗ್ಯಾರೆಂಟಿ ಅಂತಾ ಗಾಂಧಿನಗರದ ತುಂಬಾ ಟಾಕ್ ಕ್ರಿಯೇಟ್ ಆಗಿದೆ. ತಾನ್ಯಾ ಹೋಪ್ ಈ ಚಿತ್ರದ ನಾಯಕಿ. ಕೇಬಲ್ ಆಪರೇಟರ್ ಯುವಕನಿಂದ ಕತೆ ಆರಂಭಗೊಂಡು ಯಾರೂ ಊಹೆ ಮಾಡಲಾರದ ತಿರುವುಗಳ ಸುತ್ತ ಖಾಕಿ ಬೆಸೆದುಕೊಂಡಿದೆಯಂತೆ. ಈಗಾಗಲೇ ಬಿಡುಗಡೆಗೊಂಡಿರುವ ಖಾಕಿಯ ಪೋಸ್ಟರುಗಳೇ ಈ ಸಿನಿಮಾದಲ್ಲಿ ಜನರಿಗೆ ಹತ್ತಿರವಾಗುವ ಅಂಶಗಳಿವೆ ಅನ್ನೋದನ್ನು ಸಾರಿ ಹೇಳಿವೆ. ಈ ಕುತೂಹಲ ಇಮ್ಮಡಿಗೊಳಿಸುವಂತಾ ಖಾಕಿಯ ಟೀಸರ್ ಇತ್ತೀಚೆಗಷ್ಟೇ ರಿಲೀಸಾಗಿತ್ತು.
ಈಗ ಮುದ್ದಾದ ವಿಡಿಯೋ ಸಾಂಗು ಕೂಡಾ ಹೊರಬಂದಿದೆ. ಬಾಲಾ ಛಾಯಾಗ್ರಹಣ, ವಿನೋದ್ ಸಾಹಸ, ಕೆ.ಎಂ. ಪ್ರಕಾಶ್ ಸಂಕಲನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ, ಮಾಸ್ತಿ, ಗುರುರಾಜ ದೇಸಾಯಿ ಸಂಭಾಷಣೆ ಸೇರಿದಂತೆ ಎಲ್ಲ ಹೆಸರು ಮಾಡಿರುವ ತಂತ್ರಜ್ಞರು ಖಾಕಿಯಲ್ಲಿ ಒಟ್ಟು ಸೇರಿದ್ದಾರೆ. ಈ ಚಿತ್ರದ ನಿರ್ದೇಶಕ ನವೀನ್ ರೆಡ್ಡಿ ಅವರ ಪಾಲಿಗಿದು ಚೊಚ್ಚಲ ಸಿನಿಮಾ. ಆದರೆ ಈ ಹಿಂದೆ ಇದೇ ತರುಣ್ ಟಾಕೀಸ್ ನಿರ್ಮಿಸಿದ್ದ ರೋಜ಼್ ಮತ್ತು ಮಾಸ್ ಲೀಡರ್ ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಅದಲ್ಲದೇ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ್ದ ಸಂಗಮ ಮತ್ತು ಕೂಲ್ ಚಿತ್ರಗಳೂ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿ ನಿರ್ದೇಶನದ ಪಟ್ಟುಗಳನ್ನು ಕಲಿತಿದ್ದಾರೆ. ಪ್ರತಿಯೊಬ್ಬ ಪ್ರಜೆ ಕೂಡಾ ತಮ್ಮ ರಕ್ಷಣೆಯನ್ನು ತಾವೇ ಹೇಗೆ ಮಾಡಿಕೊಳ್ಳಬಹುದು ಎಂಬುದರ ಸುತ್ತ ವಿದ್ಯಾಧರ್ ಹೆಣೆದಿರುವ ಕಥೆಯನ್ನು ನವೀನ್ ರೆಡ್ಡಿ ರೋಚಕವಾಗಿ ರೂಪಿಸಿದ್ದಾರೆ. ಋತ್ವಿಕ್ ಮುರಳೀಧರ್ ಸಂಗೀತದ ಹಾಡು ಈಗ ಖಾಕಿಯ ಖದರ್ರನ್ನು ಹೆಚ್ಚಿಸಿದೆ. ತಾನ್ಯಾ ಹೋಪ್ ಮತ್ತು ಚಿರು ಕಾಂಬಿನೇಷನ್ನು ಮುದ್ದುಮುದ್ದಾಗಿ ಕಾಣುತ್ತಿದೆ. ಈಗ ಹೊರಬಂದಿರುವ ಟೀಸರು ಮತ್ತು ಹಾಡೊಂದು ಸಾಕು ಸಿನಿಮಾದ ಮುಂದಿನ ಭವಿಷ್ಯವನ್ನು ನಿರ್ಧರಿಸಲು!
No Comment! Be the first one.